ಫೈರ್ ಬ್ರ್ಯಾಂಡ್ ರೇಣುಕಾಗೆ ಗೇಟ್ ಪಾಸ್

ಏನಪ್ಪಾ ಅಂದರೆ ಕಾಂಗ್ರೆಸ್ ಪಕ್ಷದ ವಕ್ತಾರೆ, ಫೈರ್ ಬ್ರ್ಯಾಂಡ್ ರೇಣುಕಾ ಚೌಧರಿ ಅವರು ಅನಾದಿ ಕಾಲದಿಂದಲೂ ತಮ್ಮ ಪಕ್ಷಕ್ಕೆ ತೋರಿದ್ಧ ನಿಷ್ಠೆಗೆ ಕಳಂಕ ಬಂದಿದ್ದು ಅವರನ್ನು ವಕ್ತಾರರ ಸ್ಥಾನದಿಂದ ತೆಗೆದುಹಾಕಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಯಾವುದೇ ಟಿವಿ ಚಾನೆಲ್ಲುಗಳ ಚರ್ಚೆಗಳಲ್ಲಿ ಪಕ್ಷದ ವತಿಯಿಂದ ಭಾಗವಹಿಸಬೇಡಿ ಎಂದು ರೇಣುಕಾಗೆ ತಾಕೀತು ಮಾಡಲಾಗಿದೆ.
ಅತ್ತ AICC ಅಧಿನಾಯಕಿ ಸೋನಿಯಾ ಗಾಂಧಿ ಅವರು ಆಂಧ್ರ ಪ್ರದೇಶವನ್ನು ಇಬ್ಭಾಗ ಮಾಡುವ ನಿಟ್ಟಿನಲ್ಲಿ Group of Ministers ಸಲ್ಲಿಸಿದ್ದ ಕರಡು ಪ್ರತಿಗೆ ಅಂಕಿತ ಹಾಕಿರುವುದರ ಬೆನ್ನಿಗೇ ರೇಣುಕಾ ಚೌಧರಿಗೆ ಗುದ್ದು ನೀಡಿರುವುದು ಸೋಜಿಗವಾಗಿದೆ.
ಇಷ್ಟಕ್ಕೂ ರೇಣುಕಾ ಮಾಡಿದ ಅಪರಾಧವಾದರೂ ಏನಪ್ಪಾ ಅಂದರೆ ಖಮ್ಮಂ ಲೋಕಸಭಾ ಕ್ಷೇತ್ರದ ಸಂಸದೆ ರೇಣುಕಾ ತೆಲಂಗಾಣ ವಿರುದ್ಧ ಮಾತನಾಡಿದ್ದಾರೆ. ಅನೇಕ ಟಿವಿ ಚರ್ಚೆಗಳಲ್ಲಿ ಕಾಂಗ್ರೆಸ್ ನಿಲುವಿಗೆ ಮಾರಕವೆನ್ನುವಂತೆ ರೇಣುಕಾ ತೆಲಂಗಾಣ ರಚನೆಗೆ ವಿರುದ್ಧವಾಗಿ ಮಾತನಾಡಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎನ್ನಲಾಗಿದೆ.
ಇದನ್ನು ಅರಿತು ರೇಣುಕಾ ಇತ್ತೀಚೆಗೆ ತಮ್ಮ ನಿಲುವನ್ನು ಬದಲಿಸಿಕೊಂಡು ಕಾಂಗ್ರೆಸ್ ನಾಯಕರ ಮನಗೆಲ್ಲಲು ಯತ್ನಿಸಿದರಾದರೂ ಆ ವೇಳೆಗೆ ರೇಣುಕಾ ವಿಷಯದಲ್ಲಿ ಪಕ್ಷ ಸೂಕ್ತ ನಿರ್ಧಾರಕ್ಕೆ ಬಂದಿತ್ತು ಎನ್ನಲಾಗಿದೆ. ಮುಖ್ಯಮಂತ್ರಿ ಕಿರಣ್ ಕುಮಾರ್ ಅವರಂತೆ ರೇಣುಕಾ ಸಹ ಆಂಧ್ರ ಇಬ್ಭಾಗದ ವಿರುದ್ಧವಿರುವುದು ಹೈಕಮಾಂಡಿಗೆ ಮನವರಿಕೆಯಾಗಿದೆ ಎನ್ನಲಾಗಿದೆ.
ಆಂಧ್ರ ನಾಯಕರಂತೂ ತೆಲಂಗಾಣ ವಿಷಯದಲ್ಲಿ ರೇಣುಕಾ ಚೌಧರಿ ಯಾವುದೇ ಸಭೆಗಳಲ್ಲಿಯೂ ಭಾಗವಹಿಸುವುದು ಬೇಡ ಎಂದು ಪಟ್ಟು ಹಿಡಿದಿದ್ದಾರೆ. ಒಟ್ಟಿನಲ್ಲಿ ಇನ್ನು ಮುಂದೆ ಫೈರ್ ಬ್ರ್ಯಾಂಡ್ ರೇಣುಕಾ ಚೌಧರಿ ಅವರು ಟಿವಿ ಚರ್ಚೆಗಳಲ್ಲಿ ಅದೃಶ್ಯವಾಗಲಿದ್ದಾರೆ.












Click it and Unblock the Notifications