ಹೊಸ ಸಂಸತ್ ಕಟ್ಟಡ: ರಾಷ್ಟ್ರಪತಿ ಮುರ್ಮು ಅವರಿಂದ ಉದ್ಘಾಟನೆ ಕೋರಿ ಸಲ್ಲಿಸಿದ್ದ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ನೂತನ ಸಂಸತ್ ಭವನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಮೇ 28 ರಂದು ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಅರ್ಜಿಯಲ್ಲಿ ಸುಪ್ರೀಂ ಕೋರ್ಟ್ ಲೋಕಸಭೆ ಸೆಕ್ರೆಟರಿಯೇಟ್‌ಗೆ ನಿರ್ದೇಶನ ನೀಡಬೇಕು ಎಂದು ಕೇಳಲಾಗಿತ್ತು.
ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಜೆ.ಕೆ.ಮಹೇಶ್ವರಿ ಮತ್ತು ಪಿ.ಎಸ್.ನರಸಿಂಹ ಅವರ ರಜಾಕಾಲದ ಪೀಠ, ಅರ್ಜಿದಾರರಿಗೆ ಅಂತಹ ಅರ್ಜಿಗಳನ್ನು ಸಲ್ಲಿಸಲು ಯಾವುದೇ ಅವಕಾವಿಲ್ಲ ಮತ್ತು ನ್ಯಾಯಾಲಯವು ಅವರಿಗೆ ಯಾವುದೇ ದಂಡ ಹಾಕದ್ದಕ್ಕೆ ಸಂತೋಷ ಪಡಬೇಕು ಎಂದು ಬಾರ್ ಮತ್ತು ಬೆಂಚ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅರ್ಜಿದಾರರಾದ ವಕೀಲ ಸಿಆರ್ ಜಯ ಸುಕಿನ್ ಅವರು ಅರ್ಜಿಯನ್ನು ಹಿಂಪಡೆಯುವುದಾಗಿ ತಿಳಿಸಿದರು. ಆದರೆ, ಅರ್ಜಿ ಹಿಂಪಡದರೆ, ನ್ಯಾಯಾಲಯವು ಅರ್ಜಿದಾರರಿಗೆ ಹೈಕೋರ್ಟ್‌ಗೆ ಹೋಗಲು ಅವಕಾಶ ನೀಡುತ್ತದೆ ಎಂದು ವಾದಿಸಿತು. "ಇದು ನ್ಯಾಯಸಮ್ಮತವಲ್ಲ. ಅದನ್ನು ನ್ಯಾಯಾಲಯ ಗಮನಿಸಬೇಕು" ಎಂದು ಕೇಂದ್ರ ಸರಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.
ಸಂವಿಧಾನದ ಉಲ್ಲಂಘನೆ ಎಂದು ವಾದ
ಲೋಕಸಭೆ ಸೆಕ್ರೆಟರಿಯೇಟ್ ನೀಡಿರುವ ಹೇಳಿಕೆ ಮತ್ತು ಉದ್ಘಾಟನಾ ಕಾರ್ಯಕ್ರಮಕ್ಕೆ ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಕಳುಹಿಸಿರುವ ಆಹ್ವಾನ ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ವಕೀಲ ಜಯ ಸುಕಿನ್ ವಾದಿಸಿದರು. "ರಾಷ್ಟ್ರಪತಿಗಳು ಈ ನಿಟ್ಟಿನಲ್ಲಿ ಭಾರತದ ಪ್ರಥಮ ಪ್ರಜೆ ಮತ್ತು ಸಂಸತ್ತಿನ ಸಂಸ್ಥೆಯ ಮುಖ್ಯಸ್ಥರು. ದೇಶಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ನಿರ್ಧಾರಗಳನ್ನು ಭಾರತದ ರಾಷ್ಟ್ರಪತಿಗಳ ಹೆಸರಿನಲ್ಲಿ ತೆಗೆದುಕೊಳ್ಳಲಾಗುತ್ತದೆ" ಎಂದು ಮನವಿಯಲ್ಲಿ ತಿಳಿಸಲಾಗಿತ್ತು.
ಸಂಸತ್ತನ್ನು ಕರೆಯುವ ಮತ್ತು ಮುಂದೂಡುವ ಅಥವಾ ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರವನ್ನು ರಾಷ್ಟ್ರಪತಿ ಹೊಂದಿದ್ದಾರೆ ಎಂದು ಜಯ ಸುಕಿನ್ ವಾದಿಸಿದರು. ರಾಷ್ಟ್ರಪತಿಗಳು ಸಂಸತ್ತಿನ ಅವಿಭಾಜ್ಯ ಅಂಗ, ಅವರನ್ನು ಉದ್ಘಾಟನಾ ಕಾರ್ಯಕ್ರಮದಿಂದ ದೂರ ಇಡಬಾರದು ಎಂದು ವಾದಿಸಿದ ಅರ್ಜಿದಾರರು ಭಾರತೀಯ ಸಂವಿಧಾನದ 79 ನೇ ವಿಧಿಯನ್ನು ಉಲ್ಲೇಖಿಸಿದರು.
ನೂತನ ಸಂಸತ್ ಕಟ್ಟಡ ಉದ್ಘಾಟನಾ ವಿಚಾರ ಸದ್ಯ ರಾಜಕೀಯ ತಿರುವು ಪಡೆದುಕೊಂಡಿದೆ. ಸಂವಿಧಾನದ ಪ್ರಕಾರ ಕಟ್ಟಡವನ್ನು ರಾಷ್ಟ್ರಪತಿಗಳು ಉದ್ಘಾಟನೆ ಮಾಡಬೇಕು, ಆದರೆ ಪ್ರಧಾನಿ ಮೋದಿ ನಿಯಮ ಮೀರಿ ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಹೇಳಿ, 20 ಪಕ್ಷಗಳನ್ನು ಒಳಗೊಂಡ ಸಂಯುಕ್ತ ಪ್ರತಿಪಕ್ಷಗಳು ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸಲು ನಿರ್ಧರಿಸಿವೆ. ಇಲ್ಲಿಯವರೆಗೆ, 25 ಪಕ್ಷಗಳು ತಮ್ಮ ಹಾಜರಾತಿಯನ್ನು ಖಚಿತಪಡಿಸಿವೆ.












Click it and Unblock the Notifications