ಬಾಂಬೆ ಐಐಟಿ ಮೆಸ್‌ನಲ್ಲಿ ಸಸ್ಯಾಹಾರಿಗಳಿಗೆ ಪ್ರತ್ಯೇಕ ಟೇಬಲ್- ವಿದ್ಯಾರ್ಥಿಗಳ ಪ್ರತಿಭಟನೆ
ಮುಂಬೈ ಐಐಟಿ ಮೆಸ್‌ನಲ್ಲಿ ಸಸ್ಯಾಹಾರಿಗಳಿಗೆ ಪ್ರತ್ಯೇಕ ಟೇಬಲ್ ಗುರುತಿಸುವ ಘಟನೆಗಳು ಮರುಕಳಿಸುತ್ತಲೇ ಇವೆ. ಬಾಂಬೆಯಲ್ಲಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮೆಸ್‌ನಲ್ಲಿ ಸಸ್ಯಾಹಾರಿಗಳಿಗೆ ಮಾತ್ರ ಎಂದು ಟೇಬಲ್‌ಗಳನ್ನು ಪ್ರತ್ಯೇಕವಾಗಿ ಗುರುತು ಪಡಿಸಿದ ಘಟನೆ ಮತ್ತೆ ಬೆಳಕಿಗೆ ಬಂದಿದ್ದು, ಇದರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ.
ರಾತ್ರಿ ಊಟದ ಸಮಯದಲ್ಲಿ ನಡೆದ ಈ ಘಟನೆಯನ್ನು ವಿರೋಧಿಸಿ ಕೆಲವು ವಿದ್ಯಾರ್ಥಿಗಳು ಕಾಯ್ದಿರಿಸಿದ ಆರು ಟೇಬಲ್‌ಗಳಲ್ಲಿ ಒಂದರಲ್ಲಿ ಮಾಂಸಾಹಾರಿ ಆಹಾರವನ್ನು ಸೇವಿಸುವ ಮೂಲಕ ಸಾಂಕೇತಿಕ ಪ್ರತಿಭಟನೆಯನ್ನು ನಡೆಸಿದರು.

ಪ್ರತಿಭಟನಾನಿರತ ವಿದ್ಯಾರ್ಥಿಗಳ ಪ್ರಕಾರ, ಸಸ್ಯಾಹಾರಿ ವಿದ್ಯಾರ್ಥಿಗಳಿಗೆ ಟೇಬಲ್‌ಗಳನ್ನು ಗೊತ್ತುಪಡಿಸುವ ಮೂಲಕ ಮೆಸ್ ಕೌನ್ಸಿಲ್ ವಿದ್ಯಾರ್ಥಿಗಳ ನಡುವೆ ಪ್ರತ್ಯೇಕತೆಯನ್ನು ಮಾಡಿದೆ. 'ಇದು ವಿದ್ಯಾರ್ಥಿಗಳಲ್ಲಿ ಪರಸ್ಪರ ತಿಳುವಳಿಕೆ ಇದ್ದಾಗ ಅನಗತ್ಯವಾಗಿದೆ. ನಾವು ಈ ಪ್ರತ್ಯೇಕತೆಯನ್ನು ವಿರೋಧಿಸುತ್ತೇವೆ. ಒಂದು ರೀತಿಯಲ್ಲಿ ಆಡಳಿತವು ಇದನ್ನು ಉತ್ತೇಜಿಸುವ ಪ್ರಯತ್ನದಲ್ಲಿ ವಿದ್ಯಾರ್ಥಿಗಳನ್ನು ವಿಭಜಿಸುತ್ತಿದೆ' ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಹೇಳಿದರು.
ಬುಧವಾರ ಹಾಸ್ಟೆಲ್ 12, 13 ಮತ್ತು 14ರ ಮೆಸ್ ಕೌನ್ಸಿಲ್‌ನಿಂದ ಈ ಅವ್ಯವಸ್ಥೆ ಆಗಿರುವ ಬಗ್ಗೆ ಇಮೇಲ್ ಮೂಲಕ ಬಹಿರಂಗಗೊಳಿಸಲಾಗಿದೆ. ಸಸ್ಯಹಾರಿಗಳಿಗೆ ಆರು ಟೇಬಲ್‌ಗಳನ್ನು ಗೊತ್ತುಪಡಿಸಿದ ಕಾರಣ ವಿವಾದ ಹುಟ್ಟುಕೊಂಡಿದೆ. ಗುರುತುಪಡಿಸಿದ ಸ್ಥಳದಲ್ಲಿ ಸಸ್ಯಾಹಾರವನ್ನು ಮಾತ್ರ ತೆಗೆದುಕೊಳ್ಳಬೇಕು ಎಂದು ಬರೆಯಲಾಗಿರುವುದು ಬಹಿರಂಗಗೊಂಡಿದೆ.
ಇದಕ್ಕೆ ಪ್ರತಿಯಾಗಿ ಬಂದ್ ಈಮೇಲ್‌ನಲ್ಲಿ "ಊಟದ ಸಮಯದಲ್ಲಿ ಮಾಂಸಾಹಾರಿ ಆಹಾರದ ನೋಟ ಮತ್ತು ವಾಸನೆಯನ್ನು ವಿರೋಧಿಸಲು ಸಾಧ್ಯವಾಗದ ಕೆಲವು ಜನರಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಆರೋಗ್ಯ ಸಮಸ್ಯೆಗಳನ್ನೂ ಉಂಟುಮಾಡಬಹುದು. ಎಲ್ಲರೂ ಶಾಂತಿಯುತ ಊಟವನ್ನು ಅನುಭವಿಸಬೇಕು" ಎಂದು ಹೇಳಲಾಗಿದೆ.
ಇದು ಕೆಲವು ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣವಾಯಿತು. ಇದನ್ನು ಹಲವು ವಿದ್ಯಾರ್ಥಿಗಳು ವಿರೋಧಿಸಿ ಅಶಾಂತಿ ಉಂಟುಮಾಡಿದರು. "ಮಾಂಸದ ದೃಷ್ಟಿ ಮತ್ತು ವಾಸನೆ" ಬಗ್ಗೆ ಬಂದಿರುವ ಇಮೇಲ್ ಅನ್ನು ನಾವು ಖಂಡಿಸುತ್ತೇವೆ. ಇದು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವುದು ಎಂದು ಕರೆಯುವುದು ಜಾತಿ ವರ್ಣಭೇದ ನೀತಿಯ ಸ್ಪಷ್ಟ ಉದಾಹರಣೆಯಾಗಿದೆ ಎಂದು ಪ್ರತಿಭಟನಾ ವಿದ್ಯಾರ್ಥಿಗಳು ಹೇಳಿದ್ದಾರೆ.
''ಯಾವುದೇ ಊಟವನ್ನು ತಿನ್ನಲು ಎರಡು ಗಂಟೆಗಳಿಗಿಂತ ಹೆಚ್ಚು ಸಮಯವಿದೆ, ಇದರಿಂದಾಗಿ ಜನಸಂದಣಿ ಇರುವುದಿಲ್ಲ ಮತ್ತು ಆಹಾರದ ಆಯ್ಕೆಗಳ ಆಧಾರದ ಮೇಲೆ ಪ್ರತಿಯೊಬ್ಬರೂ ತಿನ್ನಲು ಆರಾಮದಾಯಕ ಸ್ಥಳವನ್ನು ಪಡೆಯುತ್ತಾರೆ. ತಿನ್ನುವ ಸ್ಥಳವನ್ನು ಅಧಿಕೃತವಾಗಿ ಪ್ರತ್ಯೇಕಿಸುವುದರ ಹಿಂದಿನ ಉದ್ದೇಶವನ್ನು ನಾವು ಪ್ರಶ್ನಿಸುತ್ತೇವೆ, "ಎಂದು ಪ್ರತಿಭಟನಾನಿರತ ವಿದ್ಯಾರ್ಥಿಯೊಬ್ಬರು ಹೇಳಿದರು. ಅದಾಗ್ಯೂ ಸಂಸ್ಥೆಯ ಆಡಳಿತವು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲಿಲ್ಲ.
ಈ ಘಟನೆ ಐಐಟಿಯಲ್ಲಿ ನಡೆದಿದ್ದದ್ದು ಇದು ಮೊದಲ ಬಾರಿಗೆ ಅಲ್ಲ. ಈ ಹಿಂದೆ ಹಲವಾರು ಬಾರಿ ಈ ಘಟನೆ ನಡೆದಿದೆ. ಆಗಸ್ಟ್ ನಲ್ಲಿ ಇಂತಹ ಘಟನೆ ನಡೆದಿತ್ತು. ಆಗ ಮಹಾರಾಷ್ಟ್ರ ರಾಜಧಾನಿ ಮುಂಬೈನ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT)ಯಲ್ಲಿ ಸಸ್ಯಾಹಾರ ಮತ್ತು ಮಾಂಸಹಾರ ವಿಚಾರವಾಗಿ ಸೃಷ್ಟಿಯಾಗಿದ್ದ ಅಹಿತಕರ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಸಂಸ್ಥೆ ಆಡಳಿತ ಮಂಡಳಿ ಯಶಸ್ವಿಯಾಗಿತ್ತು. ಆದರೀಗ ಇದು ಪದೇ ಪದೇ ಮರುಕಳಿಸುತ್ತಿರುವುದು ಚಿಂತೆಗೀಡು ಮಾಡಿದೆ.












Click it and Unblock the Notifications