28 ಲೋಕಸಭಾ ಕ್ಷೇತ್ರ; ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕುರಿತು ಡಿ ಕೆ ಶಿವಕುಮಾರ್ ಏನಂದ್ರು?
ನವದೆಹಲಿ, ಮಾರ್ಚ್ 07: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನ ಒಂದೇ ಹಂತದಲ್ಲಿ ಪಟ್ಟಿ ಬಿಡುಗಡೆ ಮಾಡಲು ಆಗುವುದಿಲ್ಲ. ಒಂದೆರಡು ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ದೆಹಲಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಚುನಾವಣಾ ಸಮಿತಿ ಸಭೆ ನಡೆದಿದ್ದು, ಸುಮಾರು ಶೇ.50 ರಷ್ಟು ರಾಜ್ಯದ ಅಭ್ಯರ್ಥಿಗಳ ಕುರಿತ ಚರ್ಚೆ ಮುಕ್ತಾಯವಾಗಲಿದೆ. ಮುಂಚಿತವಾಗಿ ಅಭ್ಯರ್ಥಿ ಆಯ್ಕೆ ಮಾಡಬಹುದಿತ್ತು ಎನ್ನುವ ಪ್ರಶ್ನೆ ಉದ್ಭವಿಸಿವೆ. ಆದರೆ, ನಾವು ಈಗಾಗಲೇ ಒಂದು ತಿಂಗಳ ಹಿಂದೆಯೇ ಚರ್ಚೆ ಮಾಡಿ, ಯಾರಿಗೆ ಯಾವ ಕಿವಿಮಾತು ಹೇಳಬೇಕೋ ಹೇಳಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ನೋಡಿಕೊಂಡು ನೀವು ಅಭ್ಯರ್ಥಿಗಳ ಆಯ್ಕೆ ಮಾಡುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನಗೆ ಉತ್ತರಿಸಿ, ಬಿಜೆಪಿ ಅವರ ರಾಜಕಾರಣಕ್ಕೂ ನಮ್ಮ ರಾಜಕಾರಣಕ್ಕೂ ಬಹಳ ವ್ಯತ್ಯಾಸವಿದೆ. ನಮ್ಮ ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿ ಮೇಲೆ ರಾಜಕಾರಣ ನಡೆಯುವುದಿಲ್ಲ. ಪಕ್ಷ, ನಮ್ಮ ಗ್ಯಾರಂಟಿ ಯೋಜನೆಗಳ ಮೇಲೆ ನಾವು ರಾಜಕೀಯ ಮಾಡುತ್ತೇವೆ. ಅವರು ಅವರದೇ ಆದ ಲೆಕ್ಕಾಚಾರ ಇಟ್ಟುಕೊಂಡಿದ್ದರೆ, ನಾವು ನಮ್ಮದೇ ಲೆಕ್ಕಾಚಾರ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.
ಸಭೆಗೆ ಮುಖ್ಯಮಂತ್ರಿಗಳು ಆಗಮಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು, ಇಂದು ಬಸವ ಕಲ್ಯಾಣದಲ್ಲಿ ದೊಡ್ಡ ಕಾರ್ಯಕ್ರಮ ನಿಗದಿಯಾಗಿದೆ. ಆ ಕಾರ್ಯಕ್ರಮದಲ್ಲಿ ಎಲ್ಲಾ ಮಠಾಧೀಶರು ಭಾಗವಹಿಸುತ್ತಿದ್ದಾರೆ. ಹೀಗಾಗಿ ಇದನ್ನು ಮುಂದೂಡಲು ಸಾಧ್ಯವಿಲ್ಲ. ಇದು ಅದ್ಯತೆಯ ಕಾರ್ಯಕ್ರಮವಾದ್ದರಿಂದ ಸಿಎಂ ಅಲ್ಲಿ ಭಾಗವಹಿಸುತ್ತಿದ್ದಾರೆ. ನಾವುಗಳು ಸೇರಿ ಈಗಾಗಲೇ ಚರ್ಚೆ ಮಾಡಿರುವುದನ್ನು ನಾನು ಈ ಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ.
ಸುಪ್ರೀಂ ಕೋರ್ಟ್ ನಿಮಗೆ ರಿಲೀಫ್ ನೀಡಿದ್ದು, "ಇನ್ನೂ ನೊಟೀಸ್ ಬರುತ್ತಿವೆ. ಮಾಧ್ಯಮಗಳು ಹಗಲು ರಾತ್ರಿ ನನ್ನನ್ನು ಕಾಯುತ್ತಾ ಕೆಲಸ ಮಾಡಿವೆ ಹೆರಿಗೆ ನೋವು ಅನುಭವಿಸಿದವರಿಗೆ ಗೊತ್ತು ಎಂಬಂತೆ, ನನ್ನ ನೋವು ನನಗೆ ಗೊತ್ತು. ರಾಜ್ಯದ ಜನ ನನ್ನ ಪರವಾಗಿ ಹೋರಾಟ ಮಾಡಿದರು. ಪ್ರಾರ್ಥನೆ ಮಾಡಿದರು. ಈಗ ಅವರಿಗೆ ಸಮಾಧಾನ ಆಗಿದೆಯಲ್ಲ ಅಷ್ಟೇ ಸಾಕು ಎಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡುತ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಎಐಸಿಸಿ ಅಧ್ಯಕ್ಷರು. ಅನೇಕರು ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅವರ ಕ್ಷೇತ್ರದಲ್ಲಿ ಬೇರೆ ಹೆಸರು ಪ್ರಸ್ತಾಪಿಸಿಲ್ಲ. ಅವರು ದೇಶದಾದ್ಯಂತ ಪ್ರವಾಸವನ್ನು ಮಾಡಬೇಕಿದೆ. ಹೀಗಾಗಿ ಅಂತಿಮವಾಗಿ ಅಧ್ಯಕ್ಷರೇ ಸ್ಪರ್ಧೆ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
ಸಚಿವರ ಸ್ಪರ್ಧೆ ಬಗ್ಗೆ ಚರ್ಚೆ ಆಗಿದೆಯೇ ಎಂಬ ಚರ್ಚೆ ಆಗಿದೆಯೇ, ಸಿಎಂ ಪುತ್ರ ಸ್ಪರ್ಧೆ ಮಾಡುತ್ತಾರಾ ಎಂದು ಕೇಳಿದಾಗ "ಆ ಬಗ್ಗೆ ಚರ್ಚೆ ಆಗಿಲ್ಲ" ಎಂದು ತಿಳಿಸಿದರು.
ಶಿವರಾತ್ರಿ ಹಬ್ಬದ ಶುಭಾಶಯಗಳು
ರಾಜ್ಯದ ಜನತೆಗೆ ಶಿವರಾತ್ರಿ ಹಬ್ಬದ ಶುಭಾಶಯಗಳು. ಶಿವನ ಆಶೀರ್ವಾದದಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗಲಿ. ಬರಗಾಲದಿಂದ ರಾಜ್ಯ ಮುಕ್ತವಾಗಲಿ ಎಂದು ರಾಜ್ಯದ ಜನರ ಪರವಾಗಿ ಶಿವನಲ್ಲಿ ಪ್ರಾರ್ಥಿಸುತ್ತೇನೆ.












Click it and Unblock the Notifications