ಟ್ರಿಪಲ್ ತಲಾಖ್ ರದ್ದು: ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯವೇನು?
ಸುಪ್ರೀಂ ಕೋರ್ಟ್ ನೀಡಿರುವ ತ್ರಿವಳಿ ತಲಾಖ್ ರದ್ದು ಆದೇಶಕ್ಕೆ ಎಲ್ಲೆಡೆ ಸ್ವಾಗತ. ಮಹಿಳೆಯರ ಹಿತದೃಷ್ಟಿಯಿಂದ ತೀರ್ಪು ಸ್ವಾಗತಾರ್ಹ ಎಂದ ಅನೇಕರು.
ಬೆಂಗಳೂರು, ಆಗಸ್ಟ್ 22: ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಗೊಳಿಸುವ ಮೂಲಕ ಸುಪ್ರೀಂ ಕೋರ್ಟ್ ಐತಿಹಾಸಿಕ ನಿರ್ಣಯವೊಂದನ್ನು ಕೈಗೊಂಡಿದೆ. ಈ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಹಲವಾರು ಗಣ್ಯರು ಹಾಗೂ ಜನಪ್ರತಿನಿಧಿಗಳು ನ್ಯಾಯಾಲಯದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಏತನ್ಮಧ್ಯೆ, ಒನ್ ಇಂಡಿಯಾ ಕನ್ನಡ ಕೂಡ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಇದರ ಒಂದಿಷ್ಟು ಸ್ಯಾಂಪಲ್ ಗಳು ಇಲ್ಲಿವೆ.

''ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪು ಸ್ವಾಗತಾರ್ಹ. ಆದರೆ, ಈ ತೀರ್ಪನ್ನು ಹಲವಾರು ಮಂದಿ ಒಪ್ಪದಿರಬಹುದು. ಆದರೆ, ಎಲ್ಲರೂ ಈ ವಿಚಾರವನ್ನು ಹೆಣ್ಣು ಹೆತ್ತವರ ನೋವನ್ನು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಆಲೋಚಿಸಿದರೆ ಈ ತೀರ್ಪು ಸಮಂಜಸ ಎಂದು ಗೊತ್ತಾಗುತ್ತದೆ. ಏಕೆಂದರೆ, ಇಂಥ ಹಲವಾರು ಘಟನೆಗಳಿಂದ ಹಲವಾರು ಹೆಂಗಸರ ಜೀವನ ಹಾಳಾಗಿದೆ. ಇಂಥ ಅವಗಢಗಳು ತಪ್ಪಬೇಕು. ಮಹಿಳೆಯರ ಬಾಳು ಸುರಕ್ಷಿತವಾಗಿರಬೇಕು. ಈ ನಿಟ್ಟಿನಲ್ಲಿ ಈ ತೀರ್ಪು ಸ್ವಾಗತಾರ್ಹ''
- ಸಾಅವುದಿಯಾ, ಪತ್ರಕರ್ತೆ
''ಗಂಡು ವಿಚ್ಛೇದನ ನೀಡಿದರೆ ಅದು ತಲಾಖ್. ಹೆಂಡತಿಯೇ ಮುಂದಾಗಿ ವಿಚ್ಛೇದನ ನೀಡಿದರೆ ಅದು ಖುಲಾಸಾ. ಈ ಎರಡಕ್ಕೂ ಶೆರಿಯಾ ಕಾನೂನಿನ ಮಾನ್ಯತೆಯಿದೆ. ಅಪ್ಪಟ ಧಾರ್ಮಿಕ ಚೌಕಟ್ಟಿನಲ್ಲಿ ಇಂಥ ಪ್ರಕರಣಗಳನ್ನು ನಿಭಾಯಿಸಲು ಪ್ರತ್ಯೇಕವಾದ ಮಾರ್ಗಗಳೂ ಇವೆ. ಆದರೆ, ಶೆರಿಯಾ ಕಾನೂನುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದವರು ಈ ವಿಚಾರದಲ್ಲಿ ತಪ್ಪಾಗಿ ನಡೆದುಕೊಳ್ಳುತ್ತಾರೆ. ಮೂರು ಬಾರಿ ಸತತವಾಗಿ ತಲಾಖ್ ಹೇಳಿದರೆ ಸಾಕು ವಿಚ್ಛೇದನ ಗ್ಯಾರಂಟಿ ಎಂದು ಮುಸ್ಲಿಮರಲ್ಲೇ ಹಲವಾರು ಮಂದಿ ತಿಳಿದಿದ್ದಾರೆ. ಇದು ತಪ್ಪು. ಇಂಥ ಪ್ರಕರಣಗಳಿಗೆ ಬ್ರೇಕ್ ಬೀಳುವುದಾದರೆ ಈ ತೀರ್ಪು ಸ್ವಾಗತಾರ್ಹ''.
- ರಫೀಕ್, ಬೆಂಗಳೂರು ನಿವಾಸಿ
''ಮಹಿಳೆಯರ ರಕ್ಷಣೆ ಹಾಗೂ ಜೀವನ ಭದ್ರತೆ ದೃಷ್ಟಿಕೋನದಲ್ಲಿ ಆಲೋಚಿಸುವುದಾದರೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ. ಮದುವೆ, ಪತಿ-ಪತ್ನಿ ಬಾಂಧವ್ಯವನ್ನು ಹಗುರುವಾಗಿ ಯಾರೂ ತೆಗೆದುಕೊಳ್ಳಕೂಡದು ಎಂಬ ಕಾಳಜಿ ಈ ತೀರ್ಪಿನ ಹಿಂದಿದೆ. ವಿಚ್ಛೇದನ ನೀಡುವಿಕೆ ಯಾರದೋ ಒಬ್ಬರ ಕ್ಷಣಿಕ ಅಸಮಾಧಾನದ ಕೈಗೊಂಬೆಯಾಗಬಾರದು ಎಂಬುದುನ್ನು ಈ ತೀರ್ಪು ಪುಷ್ಟೀಕರಿಸಿದೆ''
- ರಿಜ್ವಾನಾ, ಶಿಕ್ಷಕಿ (ಬೆಂಗಳೂರು)
''ಮುಸ್ಲಿಂ ಧರ್ಮದ ಬಗ್ಗೆ ಹೆಚ್ಚು ಗೊತ್ತಿಲ್ಲವಾದರೂ, ತ್ರಿವಳಿ ತಲಾಖ್ ಪದ್ಧತಿಯಿಂದ ಹಲವಾರು ಹೆಂಗಳೆಯರಿಗೆ ತೊಂದರೆಯಾಗಿದ್ದನ್ನಂತೂ ನಾನು ನೋಡಿದ್ದೇನೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮುಸ್ಲಿಂ ಮಹಿಳೆಯರ ಪಾಲಿಗೆ ತುಂಬಾ ಮಹತ್ವದ್ದಾಗಿದೆ. ಇನ್ನಾದರೂ, ಅಲ್ಪ ಅಸಮಾಧಾನಗಳಿಗೆ ದಿಢೀರ್ ವಿಚ್ಛೇಧನದಂಥ ಪದ್ಧತಿಗಳಿಗೆ ಮುಕ್ತಿ ಸಿಗಲಿ''
- ರೋಸ್ ಮೇರಿ, ಮಂಗಳೂರು












Click it and Unblock the Notifications