JayaPrada: ಬಂಧನದ ಭೀತಿಯಲ್ಲಿ ಬಹುಭಾಷಾ ನಟಿ ಜಯಪ್ರದಾ
ನವದೆಹಲಿ, ಫೆಬ್ರವರಿ 14: ಹಿರಿಯ ನಟಿ ಮತ್ತು ರಾಜಕಾರಣಿ ಜಯ ಪ್ರದಾ ಅವರನ್ನು ಬಂಧಿಸುವಂತೆ ರಾಂಪುರದ ಸಂಸದ/ಶಾಸಕ ನ್ಯಾಯಾಲಯವು ಪೊಲೀಸ್ ವರಿಷ್ಠಾಧಿಕಾರಿಗೆ ಆದೇಶ ನೀಡಿದೆ. ವಿಶೇಷ ತಂಡ ರಚಿಸಿ ಮಾಜಿ ಸಂಸದರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಪೊಲೀಸರಿಗೆ ಆದೇಶಿಸಲಾಗಿದೆ.
ವರದಿಯ ಪ್ರಕಾರಗಳ ಏಳನೇ ಬಾರಿಗೆ ಜಾಮೀನು ರಹಿತ ವಾರೆಂಟ್ ಹೊರಡಿಸಿದ ನಂತರವೂ ನಟಿ ಜಯ ಪ್ರದಾ ನ್ಯಾಯಾಲಯಕ್ಕೆ ವಿಚಾರಣೆಗೆ ಬಂದಿಲ್ಲ ಎನ್ನಲಾಗಿದೆ. ಹೀಗಾಗಿ ಸದ್ಯ ಬಹುಭಾಷಾ ನಟಿ ಜಯ ಪ್ರದಾಗೆ ಬಂಧನದ ಭೀತಿ ಎದುರಾಗಿದ್ದು, ರಾಂಪುರ್ ಕೋರ್ಟ್ ಜಾಮೀನು ರಹಿತ ವಾರೆಂಟ್ ನೀಡಿದೆ.

ನಟಿ ಜಯ ಪ್ರದಾ 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ರಾಂಪುರ್ ಪೊಲೀಸರಿಗೆ ಕೋರ್ಟ್ ಆದೇಶ ನೀಡಿತ್ತು. ಪ್ರಕರಣ ಸಂಬಂಧ ಒಟ್ಟು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಜಯ ಪ್ರದಾ ಮೇಲೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು. ಹೀಗಾಗಿ ಏಳು ಬಾರಿ ನೋಟಿಸ್ ಕೊಟ್ಟರು ಕೋರ್ಟ್ ಮುಂದೆ ಹಾಜರಾಗದ ಹಿನ್ನೆಲೆ ರಾಂಪುರ್ ಕೋರ್ಟ್ ಆದೇಶ ಹೊರಡಿಸಿದೆ.
ಇನ್ನು ನಟಿ ಜಯ ಪ್ರದಾರನ್ನ ಬಂಧನಕ್ಕಾಗಿ ವಿಶೇಷ ತಂಡ ರಚಿಸುವಂತೆ ಸಹ ಸೂಚನೆ ನೀಡಲಾಗಿದ್ದು, ಫೆಬ್ರವರಿ 27ರಂದು ರಾಂಪುರ್ ಕೋರ್ಟ್ ಮುಂದೆ ಹಾಜರುಪಡಿಸಲು ಪೊಲೀಸರಿಗೆ ಸೂಚನೆ ನೀಡಿ ಕೋರ್ಟ್ ಆದೇಶ ನೀಡಿದೆ ಎಂದು ವರದಿಯಾಗಿದೆ. ಸದ್ಯ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ನಟಿ ಜಯ ಪ್ರದಾ ತಲೆಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇನ್ನು ನಟಿ ಜಯ ಪ್ರದಾ ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಚೆನ್ನೈನ ನ್ಯಾಯಾಲಯವು ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಟಿಯನ್ನು ತಪ್ಪಿತಸ್ಥರೆಂದು ಘೋಷಿಸಿ ಆರು ತಿಂಗಳ ಜೈಲು ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿತ್ತು ಎನ್ನಲಾಗಿದೆ.
ಕನ್ನಡ, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿ ಜಯ ಪ್ರದಾ ನಟಿಸಿದ್ದಾರೆ. ಕವಿರತ್ನ ಕಾಳಿದಾಸ, ಹಬ್ಬ, ಈ ಬಂಧನ, ಹಿಮಪಾತ, ಏಕಲವ್ಯ, ಹುಲಿ ಹಾಲಿನ ಮೇವು, ಪ್ರೇಮ ಗೀತೆ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸೇರಿದಂತೆ ವಿವಿಧ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ.












Click it and Unblock the Notifications