ಶಿಷ್ಟಾಚಾರ ಬದಿಗೊತ್ತಿ ಸೈನಿಕನನ್ನು ಆಲಂಗಿಸಿದ ರಾಜನಾಥ್ ಸಿಂಗ್
ನವದೆಹಲಿ, ಜೂನ್ 2: ಬಿಎಸ್ಎಫ್ ಜವಾನ ಗೋಧ್ ರಾಜ್ ಮೀನಾ 2014ರಲ್ಲಿ ಜಮ್ಮು ಮತ್ತು ಕಾಶ್ಮೀರಲ್ಲಿ ನಡೆದ ಉಗ್ರರೊಂದಿಗಿನ ಸೆಣೆಸಾಟದಲ್ಲಿ ಗುಂಡೇಟಿನಿಂದ ಶೇಕಡಾ 85 ರಷ್ಟು ಅಂಗವೈಕಲ್ಯಕ್ಕೆ ಒಳಗಾಗಿದ್ದರು. ಇದೇ ಗೋಧ್ ರಾಜ್ ಮೀನಾರನ್ನು ಗುರುವಾರ ರಾಜನಾಥ್ ಸಿಂಗ್ ಆಲಂಗಿಸಿದಾಗ ಅವರ ಕಣ್ಣುಗಳು ತೇವವಾಗಿದ್ದವು.
15ನೇ ಬಿಎಸ್ಎಫ್ ಪ್ರಶಸ್ತಿ ಪ್ರಧಾನ ಸಮಾರಂಭ ಗುರುವಾರ ನವದೆಹಲಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ರಾಜನಾಥ್ ಸಿಂಗ್ ಶಿಷ್ಟಾಚಾರವನ್ನು ಬದಿಗೊತ್ತಿ ಗೋಧ್ ರಾಜ್ ಮೀನಾರನ್ನು ಅಪ್ಪಿಕೊಂಡರು.

ಧೈರ್ಯ ತೋರಿದ ಮೀನಾ
2014ರಲ್ಲಿ ಗೋಧ್ ರಾಜ್ ಮೀನಾ ಜಮ್ಮು ಮತ್ತು ಕಾಶ್ಮಿರದ ಉಧಂಪುರದಲ್ಲಿ ಬಸ್ಸಿನ ಭದ್ರತೆ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಉಗ್ರರು ಬಸ್ಸಿನ ಮೇಲೆ ದಾಳಿ ಮಾಡಿದ್ದರು. ಧೈರ್ಯದಿಂದ ಉಗ್ರರನ್ನು ಎದುರಿಸಿದ ಗೋಧ್ ರಾಜ್ ಇಬ್ಬರೂ ಉಗ್ರರನ್ನು ಕೊಂದು ಹಾಕಿದರು. ಆದರೆ ಅವರು ಮಾತ್ರ ಗಂಭೀರವಾಗಿ ಗಾಯಗೊಂಡರು.
ಅವರ ಕುತ್ತಿಗೆಯನ್ನು ಸೀಳಿಕೊಂಡು ಗುಂಡೊಂದು ಹೊಕ್ಕಿದ್ದರಿಂದ ಅವರಿಗೆ ಇವತ್ತಿಗೂ ಸರಿಯಾಗಿ ಮಾತನಾಡಲು ಆಗುತ್ತಿಲ್ಲ. ಆದರೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರ ಕೊರಳಿಗೆ ರಾಜನಾಥ್ ಸಿಂಗ್ ಗ್ಯಾಲೆಂಟ್ರಿ ಮೆಡಲ್ ಹಾಕುತ್ತಿದ್ದಂತೆ ಅಧಿಕಾರಿಗಳು ಸಭಿಕರೆಲ್ಲಾ ಚಪ್ಪಾಳೆಯ ಮಳೆಗರೆದು ಅವರ ಧೈರ್ಯವನ್ನು ಅಭಿನಂದಿಸಿದರು.
ಸಾಮಾನ್ಯವಾಗಿ ಶಿಷ್ಟಾಚಾರದ ಪ್ರಕಾರ ಸೈನಿಕರು ಬಂದು ಸೆಲ್ಯೂಟ್ ಮಾಡಿ ಮೆಡಲ್ ಪಡೆದುಕೊಳ್ಳಬೇಕು. ನಂತರ ಶೇಕ್ ಹ್ಯಾಂಡ್ ಕೊಟ್ಟು ಮತ್ತೆ ಸೆಲ್ಯೂಟ್ ಮಾಡಿ ನೇರ ಹೋಗುತ್ತಿರಬೇಕು. ಆದರೆ, "ನಾವು ನೋಡಿದ್ದು ತುಂಬಾ ಅಪರೂಪದ ಕ್ಷಣ. ಇಂಥ ಕ್ಷಣಗಳು ಬಹಳ ಅಪರೂಪ. ಆತನಿಗೆ ಇವತ್ತಿಗೂ ಸರಿಯಾಗಿ ನಡೆಯಲು ಮಾತನಾಡಲು ಆಗುವುದಿಲ್ಲ ಆದರೆ ಸೇನಾ ಸಮವಸ್ತ್ರವನ್ನು ಹೆಮ್ಮೆಯಿಂದ ಧರಿಸಿದ್ದ," ಎನ್ನುತ್ತಾರೆ ಸೇನೆಯ ಹಿರಿಯ ಅಧಿಕಾರಿಯೊಬ್ಬರು.
ಇದೇ ಸಂದರ್ಭದಲ್ಲಿ ಹಲವು ಸೈನಿಕರಿಗೆ, ಅವರ ಕುಟುಂಬದವರಿಗೆ ರಾಜನಾಥ್ ಸಿಂಗ್ ಪದಕಗಳನ್ನು ಪ್ರಧಾನ ಮಾಡಿದರು.












Click it and Unblock the Notifications