Rajeev Chandrasekhar: ಕೇರಳ ಬಿಜೆಪಿ ರಾಜ್ಯಾಧ್ಯಕ್ಷರಾಗಿ ರಾಜೀವ್ ಚಂದ್ರಶೇಖರ್ ಆಯ್ಕೆ
ಬಿಜೆಪಿ ಮಾಜಿ ಕೇಂದ್ರ ಸಚಿವ ಹಾಗೂ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರಿಗೆ ಮಹತ್ವದ ಹುದ್ದೆ ನೀಡಲಾಗಿದ್ದು, ಕೇರಳದ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನ ನೀಡಲಾಗಿದೆ. ನಿನ್ನೆಯೇ ಈ ಬಗ್ಗೆ ಸುದ್ದಿಹರಿದಾಡಿತ್ತು. ಇಂದು ಈ ಬಗ್ಗೆ ಅಧಿಕೃತ ಘೋಷಣೆಯಾಗಿದೆ. ಕರ್ನಾಟಕದಲ್ಲಿ ರಾಜಕೀಯವಾಗಿ ಗುರುತಿಸಿಕೊಂಡಿರುವ ರಾಜೀವ್ ಚಂದ್ರಶೇಖರ್ ಅವರಿಗೆ ಇದೀಗ ಹೊಸ ಜವಾಬ್ದಾರಿ ವಹಿಸಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಈ ಬಗ್ಗೆ ಅಧಿಕೃತವಾಗಿಘೋಷಣೆ ಮಾಡಿದ್ದಾರೆ. ರಾಜೀವ್ ಚಂದ್ರಶೇಖರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಜೋಶಿ ಹೇಳಿದ್ದಾರೆ.
ಭಾನುವಾರ ನಡೆದ ಸಭೆಪಯಲ್ಲಿ ಮಾಜಿ ಸಂಸದ ಮತ್ತು ಕೇಂದ್ರ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರ ಹೆಸರನ್ನು ಪಕ್ಷದ ಕೇರಳ ಘಟಕದ ಮುಂದಿನ ಅಧ್ಯಕ್ಷರನ್ನಾಗಿ ಪ್ರಸ್ತಾಪಿಸಿತು. ಬಿಜೆಪಿ ಕೇಂದ್ರ ವೀಕ್ಷಕರಾದ ಪ್ರಹ್ಲಾದ್ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಚಂದ್ರಶೇಖರ್ ಅವರನ್ನು ಕೇರಳ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಿರುವುದು ಪಕ್ಷದ ಕಾರ್ಯತಂತ್ರದ ನಡೆ ಎನ್ನಲಾಗಿದೆ.

ರಾಜೀವ್ ಚಂದ್ರಶೇಖರ್ ಮುಂದಿನ ಕೇರಳ ಬಿಜೆಪಿ ಅಧ್ಯಕ್ಷರಾಗಬೇಕೆಂದು ಸರ್ವಾನುಮತದಿಂದ ನಿರ್ಧರಿಸಿದೆ. ಮುಂಬರುವ ಚುನಾವಣೆಯಲ್ಲಿ, ರಾಜೀವ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಕೇರಳ ಬಿಜೆಪಿ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದನ್ನು ಮತ್ತು ಕೇರಳ ವಿಧಾನಸಭೆಯಲ್ಲಿ ಗಮನಾರ್ಹ ಉಪಸ್ಥಿತಿ ಸಾಧಿಸುವುದನ್ನು ಖಚಿತಪಡಿಸುತ್ತದೆ ಎಂದು ಬಿಜೆಪಿ ನಾಯಕ ವಿ.ಮುರಳೀಧರನ್ ಹೇಳಿದ್ದಾರೆ. ರಾಜೀವ್ ಚಂದ್ರಶೇಖರ್ ಅವರ ನಾಯಕತ್ವದಲ್ಲಿ ಪಕ್ಷವು ಮುಂದಿನ ಹಂತದ ಕಾರ್ಯಕ್ಷಮತೆಯನ್ನು ತಲುಪುತ್ತದೆ. ಅದಕ್ಕಾಗಿ ನಾವೆಲ್ಲರೂ ಅವರನ್ನು ಬೆಂಬಲಿಸಲು ಸಜ್ಜಾಗುತ್ತಿದ್ದೇವೆ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಕೂಡ ಹೇಳಿದ್ದಾರೆ.
ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನ ರಾಜೀವ್ ಚಂದ್ರಶೇಖರ್ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಅವರು ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಯಶಸ್ಸು ಮತ್ತು ಬೆಳವಣಿಗೆಯ ಕುರಿತು ಸಂತ-ಸುಧಾರಕ ಶ್ರೀ ನಾರಾಯಣ ಗುರುಗಳ ಮಾತುಗಳನ್ನು ಉಲ್ಲೇಖಿಸಿದ್ದಾರೆ. ಶಿಕ್ಷಣದ ಮೂಲಕ ಜ್ಞಾನೋದಯ ಪಡೆಯಿರಿ, ಸಂಘಟನೆಯ ಮೂಲಕ ಬಲಗೊಳ್ಳಿ ಮತ್ತು ಕಠಿಣ ಪರಿಶ್ರಮದಿಂದ ಸಮೃದ್ಧರಾಗಿ-ಶ್ರೀ ನಾರಾಯಣ ಗುರು" ಎಂದು ಪೋಸ್ಟ್ ಮಾಡಿದ್ದಾರೆ. ಇಂದು ನಡೆದ ಪಕ್ಷದ ರಾಜ್ಯ ಮಂಡಳಿ ಸಭೆಯ ನಂತರ ಚಂದ್ರಶೇಖರ್ ಅವರನ್ನು ಬಿಜೆಪಿ ರಾಜ್ಯ ಅಧ್ಯಕ್ಷರ ಆಯ್ಕೆಯ ಅಧಿಕೃತ ಘೋಷಣೆ ಮಾಡಲಾಯಿತು.

ಚಂದ್ರಶೇಖರ್ ಅವರೇ ಈ ಉನ್ನತ ಹುದ್ದೆಗೆ ಏಕೈಕ ನಾಮನಿರ್ದೇಶಿತರಾಗಿದ್ದು, ಭಾನುವಾರ ತಿರುವನಂತಪುರದ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಈ ಸ್ಥಾನಕ್ಕೆ ನಾಮಪತ್ರಗಳನ್ನು ಸಲ್ಲಿಸಿದರು. ಈ ಹಿಂದೆ ರಾಜ್ಯಾಧ್ಯಕ್ಷರಾಗಿದ್ದ ಕೆ.ಸುರೇಂದ್ರನ್ ಅವರು ವೇದಿಕೆಯಲ್ಲಿ ಚಂದ್ರಶೇಖರ್ ಅವರಿಗೆ ಪಕ್ಷದ ಧ್ವಜವನ್ನು ಹಸ್ತಾಂತರಿಸಿದರು. ಘೋಷಣೆಯ ಸಮಯದಲ್ಲಿ ಸುರೇಂದ್ರನ್ ಮತ್ತು ರಾಜ್ಯ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಸೇರಿದಂತೆ ಬಿಜೆಪಿಯ ಎಲ್ಲಾ ಪ್ರಮುಖ ರಾಜ್ಯ ನಾಯಕರು ಉಪಸ್ಥಿತರಿದ್ದರು. ಕೇರಳ ಚುನಾವಣೆ ಹೊತ್ತಲ್ಲೇ ರಾಜ್ಯಾಧ್ಯಕ್ಷರ ಬದಲಾವಣೆ ಅಚ್ಚರಿ ಮೂಡಿಸಿದೆ.












Click it and Unblock the Notifications