ಪಾಕಿಸ್ತಾನ ಪರ ಹೇಳಿಕೆ ನೀಡಿದ್ದಕ್ಕೆ ಕಪಿಲ್ ಶರ್ಮಾ ಶೋದಿಂದ ಸಿಧು ಕಿಕ್‌ಔಟ್
ನವದೆಹಲಿ, ಫೆಬ್ರವರಿ 16: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪಾಕಿಸ್ತಾನವನ್ನು ಹೊಣೆಗೇಡಿಯನ್ನಾಗಿಸುವುದು ಸರಿಯಲ್ಲ ಎಂದು ನೆರೆಯ ದೇಶವನ್ನು ಸಮರ್ಥಿಸಿಕೊಂಡ ಕಾರಣಕ್ಕೆ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಮಾಜಿ ಕ್ರಿಕೆಟಿಗ, ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರನ್ನು ಕಪಿಲ್ ಶೋ ಶರ್ಮಾದಿಂದ ಕಿತ್ತುಹಾಕಲಾಗಿದೆ.
ಪುಲ್ವಾಮಾ ಉಗ್ರರ ದಾಳಿಯ ಕುರಿತು ಸಿಧು ನೀಡಿದ್ದ ಹೇಳಿಕೆ ಹೆಚ್ಚಿನ ಸಂಖ್ಯೆಯ ಜನರನ್ನು ಕೆರಳಿಸಿತ್ತು. ಪ್ರಧಾನಿ ಇಮ್ರಾನ್ ಖಾನ್ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಧು, ಪಾಕಿಸ್ತಾನದ ಪರ ಹೇಳಿಕೆಗಳನ್ನು ನೀಡಿದ್ದಾಗಲೂ ಅವರ ವಿರುದ್ಧ ಭಾರಿ ಅಸಮಾಧಾನ ವ್ಯಕ್ತವಾಗಿತ್ತು.
ಆದರೆ, ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಏನೂ ಇಲ್ಲ. ಯಾರೋ ಮಾಡಿದ ಕೃತ್ಯಕ್ಕೆ ಇಡೀ ದೇಶವನ್ನು ಹೊಣೆಗಾರನನ್ನಾಗಿಸುವುದು ಸರಿಯಲ್ಲ ಎಂದು ಹೇಳಿದ್ದ ಸಿಧು ಅವರನ್ನು ಕಪಿಲ್ ಶರ್ಮಾ ಶೋದಿಂದ ಕಿತ್ತುಹಾಕುವಂತೆ ನೂರಾರು ಜನರು ಆಗ್ರಹಿಸಿದ್ದರು.
ಅದಕ್ಕೆ ಸ್ಪಂದಿಸಿರುವ ಕಾರ್ಯಕ್ರಮ ಆಯೋಜಕರು ಕಪಿಲ್ ಶರ್ಮಾ ಶೋವನ್ನು ತೊರೆಯುವಂತೆ ಸಿಧು ಅವರಿಗೆ ಸೂಚಿಸಿದೆ. ಅವರ ಜಾಗಕ್ಕೆ ಅರ್ಚನಾ ಪೂರಣ್ ಸಿಂಗ್ ಅವರನ್ನು ಕರೆತಂದಿದೆ.

ಸಿಧು ಸ್ಥಾನಕ್ಕೆ ಅರ್ಚನಾ
'ಸಿಧು ಅವರ ಹೇಳಿಕೆ ಬಗ್ಗೆ ಹೆಚ್ಚಿನ ಜನರು ಅಸಮಾಧಾನ ಹೊಂದಿದ್ದಾರೆ. ಈ ಅನಗತ್ಯ ವಿವಾದದೊಳಗೆ ಚಾನೆಲ್ ಮತ್ತು ಕಾರ್ಯಕ್ರಮವನ್ನು ಎಳೆದು ತರಲಾಗಿದೆ. ಈ ಕಾರ್ಯಕ್ರಮದಿಂದ ಸಿಧು ಅವರು ದೂರವುಳಿಯುವುದು ಉತ್ತಮವೆಂದು ನಮ್ಮ ತಂಡವು ಸಹಮತದಿಂದ ನಿರ್ಧರಿಸಿದೆ. ತಂಡವು ಈಗಾಗಲೇ ಅರ್ಚನಾ ಅವರೊಂದಿಗೆ ಒಂದೆರಡು ಕಂತುಗಳನ್ನು ಚಿತ್ರೀಕರಿಸಿದೆ' ಎಂದು ಮೂಲಗಳು ತಿಳಿಸಿವೆ.

ಕಿತ್ತೊಗೆಯಲು ಸೂಚನೆ
ಸಿಧು ಅವರನ್ನು ಕಿತ್ತೊಗೆಯುವಂತೆ ಸೋನಿ ಚಾನೆಲ್ ನಿರ್ಮಾಣ ಸಂಸ್ಥೆಗೆ ಸೂಚಿಸಿದೆ. ಸಿಧು ಅವರನ್ನು ಸಂಸ್ಥೆ ಹೊರಕ್ಕೆ ಕಳುಹಿಸಲಿದೆ. ಈ ಹಿಂದೆಯೂ 'ಮೀ ಟೂ' ಚಳವಳಿ ಸಂದರ್ಭದಲ್ಲಿ ಅನು ಮಲಿಕ್ ಅವರ ವಿರುದ್ಧ ಆರೋಪ ಕೇಳಿಬಂದಾಗ ವಾಹಿನಿ ಇದೇ ರೀತಿ ನಿಲುವು ತೆಗೆದುಕೊಂಡಿತ್ತು. ಇಂಡಿಯನ್ ಐಡಲ್ 10ರ ತೀರ್ಪುಗಾರರ ಸ್ಥಾನದಿಂದ ರಾತ್ರೋ ರಾತ್ರಿ ಅವರನ್ನು ಕಿತ್ತುಹಾಕಿತ್ತು.

ಸಿಧು ಹೇಳಿದ್ದೇನು?
'ಭಯೋತ್ಪಾದಕರ ಹೀನ ಕೃತ್ಯಗಳಿಗೆ ದೇಶಗಳನ್ನು ಹೊಣೆಗಾರನನ್ನಾಗಿಸಲು ಸಾಧ್ಯವಿಲ್ಲ. ಉಗ್ರರಿಗೆ ಪಂಥ ಮತ್ತು ಧರ್ಮವಿಲ್ಲ. ಅವರು ಒಳ್ಳೆಯವರು, ಕೆಟ್ಟವರು ಮತ್ತು ಕುರೂಪಿಗಳು. ಪ್ರತಿ ಸಂಸ್ಥೆಯೂ ಅವರನ್ನು ಹೊಂದಿದೆ. ಪ್ರತಿ ದೇಶದಲ್ಲಿಯೂ ಅವರಿದ್ದಾರೆ. ಈ ಕುರೂಪಿತನವನ್ನು ಶಿಕ್ಷಿಸಬೇಕಾಗಿದೆ. ಆದರೆ, ಈ ಘೋರ ಕೃತ್ಯಕ್ಕೆ ವ್ಯಕ್ತಿಗತ ದೂಷಣೆ ಮಾಡುವುದು ಸರಿಯಲ್ಲ' ಎಂದು ಸಿಧು ಹೇಳಿದ್ದರು.

ಬಾಯ್ಕಾಟ್ ಸಿಧು ಟ್ರೆಂಡಿಂಗ್
ಸಿಧು ಅವರ ಹೇಳಿಕೆ ಅವರ ಅಭಿಮಾನಿಗಳನ್ನು ಮಾತ್ರವಲ್ಲದೆ, ಕಪಿಲ್ ಶರ್ಮಾ ಕಾರ್ಯಕ್ರಮದ ಅಭಿಮಾನಿಗಳ ಕೋಪಕ್ಕೂ ತುತ್ತಾಗಿತ್ತು. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಪಾಕಿಸ್ತಾನವನ್ನು ಬೆಂಬಲಿಸುವಂತಹ ಮಾತುಗಳನ್ನು ಆಡಿರುವುದು ಜನರನ್ನು ಕೆರಳಿಸಿತ್ತು. ಸಿಧು ಅವರನ್ನು ಬಾಯ್ಕಾಟ್ ಮಾಡಿ ಎಂಬ ಹ್ಯಾಷ್ ಟ್ಯಾಗ್ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿತ್ತು. ಸಿಧು ಅವರನ್ನು ಶೋದಿಂದ ಕಿತ್ತು ಹಾಕಬೇಕು, ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬ ಒತ್ತಾಯಗಳು ಕೇಳಿಬಂದಿದ್ದವು.












Click it and Unblock the Notifications