ಕಾಂಗ್ರೆಸ್ ಇಫ್ತಾರ್ ಕೂಟದಲ್ಲಿ ಭಾಗವಹಿಸಲಿದ್ದಾರೆ ಪ್ರಣಬ್
ನವದೆಹಲಿ, ಜೂನ್ 12: ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಆಹ್ವಾನ ನೀಡಿಲ್ಲ ಎಂಬುದು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅವರು ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳುವುದು ಖಚಿತವಾಗಿದೆ.
ನಾಳೆ ಅಂದರೆ ಜೂನ್ 13ರ ಬುಧವಾರ ಸಂಜೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಫ್ತಾರ್ ಕೂಟ ಹಮ್ಮಿಕೊಂಡಿದ್ದು ಇದರಲ್ಲಿ ಪ್ರಣಬ್ ಮುಖರ್ಜಿ ಪಾಲ್ಗೊಳ್ಳಲಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ರಣದೀಪ್ ಸುರ್ಜೇವಾಲಾ, "ಪ್ರಣಬ್ ಮುಖರ್ಜಿಯವರನ್ನು ಕಾಂಗ್ರೆಸ್ ಅಧ್ಯಕ್ಷರೇ ಇಫ್ತಾರ್ ಕೂಟಕ್ಕೆ ಆಹ್ವಾನಿಸಿದ್ದಾರೆ. ಮತ್ತು ಅವರ ಆಹ್ವಾನವನ್ನು ಮುಖರ್ಜಿ ಒಪ್ಪಿಕೊಂಡಿದ್ದಾರೆ," ಎಂದು ಹೇಳಿದ್ದಾರೆ.

ಕಳೆದ ವಾರ ಪ್ರಣಬ್ ಮುಖರ್ಜಿ ಆರ್.ಎಸ್.ಎಸ್. ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಲ್ಲರ ಹುಬ್ಬೇರಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಹಲವು ಕಾಂಗ್ರೆಸ್ ನಾಯಕರು ಅವರನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಇಫ್ತಾರ್ ಪಾರ್ಟಿಗೆ ಕರೆದಿರಲಿಲ್ಲ ಎಂದು ಸುದ್ದಿಯಾಗಿತ್ತು. ಆದರೆ ಇದನ್ನು ಸುರ್ಜೇವಾಲಾ ತಳ್ಳಿ ಹಾಕಿದ್ದು ಅವರು ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್ ಇಫ್ತಾರ್ ಕೂಟವನ್ನು ಆಯೋಜನೆ ಮಾಡುತ್ತಾ ಬಂದಿದೆ. ಈ ಬಾರಿ ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಹುಲ್ ಗಾಂಧಿ ಇಫ್ತಾರ್ ಕೂಟ ಆಯೋಜನೆ ಮಾಡಿದ್ದಾರೆ. ಇದಕ್ಕಾಗಿ ದೆಹಲಿಯ ಭವ್ಯ ಹೋಟೆಲ್ ಒಂದನ್ನು ಕಾಯ್ದಿರಿಸಲಾಗಿದೆ.
ಎಲ್ಲಾ ಧರ್ಮದ ಮುಖಂಡರನ್ನೂ ಈ ಇಫ್ತಾರ್ ಕೂಟಕ್ಕೆ ಆಯೋಜಿಸಲಾಗುತ್ತದೆ. ಜೊತೆಗೆ ಬೇರೆ ಬೇರೆ ದೇಶಗಳ ರಾಯಭಾರಿಗಳಿಗೂ ಆಹ್ವಾನವಿರುತ್ತದೆ.











Click it and Unblock the Notifications