ಕಾಂಗ್ರೆಸ್‌ನದ್ದು ದೇಶವನ್ನು ಒಡೆಯುವ ಪ್ರಣಾಳಿಕೆ; ಪ್ರಧಾನಿ ಮೋದಿ ಟೀಕೆ
ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದಿದ್ದು, ಅವರ ಪ್ರಣಾಳಿಕೆ ಸುಳ್ಳಿನ ಕಂತೆ, ಅದರ ಪ್ರತಿಯೊಂದು ಪುಟದಲ್ಲೂ ಭಾರತವನ್ನು ಛಿದ್ರಗೊಳಿಸುವ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ.
ಶನಿವಾರ ರಾಜಸ್ಥಾನದ ಅಜ್ಮೀರ್‌ನಲ್ಲಿ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು "ಸಾರ್ವಜನಿಕವಾಗಿ ಬಿಡುಗಡೆ" ಮಾಡಲು ಜೈಪುರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದೆ. ಪ್ರಣಾಳಿಕೆಯಲ್ಲಿನ ಪಕ್ಷದ ಆಲೋಚನೆಗಳು ಸ್ವಾತಂತ್ರ್ಯ ಪೂರ್ವದ ಅವಧಿಯಲ್ಲಿ ಮುಸ್ಲಿಂ ಲೀಗ್‌ನ ಆಲೋಚನೆಗಳನ್ನು ಹೋಲುತ್ತವೆ ಎಂದು ಆರೋಪಿಸಿದರು.

ಪ್ರಣಾಳಿಕೆಯ ರೂಪದಲ್ಲಿ ಸುಳ್ಳಿನ ಕಂತೆಗಳನ್ನು ಬಿಡುಗಡೆ ಮಾಡಿದೆ. ಅವರು ಪ್ರಣಾಳಿಕೆಯ ಪ್ರತಿ ಪುಟದಲ್ಲೂ ಭಾರತವನ್ನು ಒಡೆಯುವ ಪ್ರಯತ್ನಗಳನ್ನು ಮಾಡಲಾಗಿದೆ. ಸ್ವಾತಂತ್ರ್ಯದ ಮೊದಲು ಮುಸ್ಲಿಂ ಲೀಗ್ ಹೊಂದಿದ್ದ ಆಲೋಚನೆಗಳಂತೆ ಅವರ ಪ್ರಣಾಳಿಕೆ ಇದೆ. ಇಂದಿನ ಭಾರತದ ಬಗ್ಗೆ ಆ ಯುಗದ ಆಲೋಚನೆಗಳನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದು ಕಮ್ಯುನಿಸ್ಟ್ ಮತ್ತು ಎಡಪಂಥೀಯ ಚಿಂತನೆಗಳಿಂದ ಪ್ರಾಬಲ್ಯ ಹೊಂದಿದೆ" ಎಂದಿದ್ದಾರೆ.
ಇಂದಿನ ಕಾಂಗ್ರೆಸ್ ತತ್ವ ಮತ್ತು ನೀತಿಗಳಿಂದ ವಂಚಿತವಾಗಿದೆ ಎಂದ ಮೋದಿ, ಪಕ್ಷವು ಎಲ್ಲವನ್ನೂ ಹೊರಗುತ್ತಿಗೆ ನೀಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದರು. ಇಂತಹ ಪಕ್ಷವು ದೇಶದ ಹಿತಾಸಕ್ತಿಗೆ ಏನಾದರೂ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಭಾರತಕ್ಕೆ ಶತಮಾನಗಳಷ್ಟು ಹಿಂದಕ್ಕೆ
ಕಾಂಗ್ರೆಸ್ ಪ್ರಣಾಳಿಕೆಯನ್ನು ನೋಡಿದರೆ ಅವರು ಭಾರತವನ್ನು ಶತಮಾನಗಳನ್ನು ಹಿಂದಕ್ಕೆ ತಳ್ಳಲು ಬಯಸುತ್ತಿದ್ದಾರೆ ಎಂದು ಸ್ಪಷ್ಟವಾಗುತ್ತದೆ. ಕಾಂಗ್ರೆಸ್ ಮಹಿಳಾ ಶಕ್ತಿ ಬಗ್ಗೆ ಎಂದೂ ತಲೆಕೆಡಿಸಿಕೊಂಡಿಲ್ಲ. ಸ್ವಾತಂತ್ರ್ಯದ ನಂತರ ಹಲವು ತಲೆಮಾರು ಅಧಿಕಾರ ಅನುಭವಿಸಿದ ಕಾಂಗ್ರೆಸ್ ಮಹಿಳೆಯರಿಗೆ ಏನು ಮಾಡಿದೆ? ಏಪ್ರಿಲ್ 19 ರಂದು ನಿಮ್ಮ ಮತವನ್ನು ಬಳಸಿ ಅವರಿಗೆ ಬುದ್ದಿ ಕಲಿಸಿ ಎಂದು ಹೇಳಿದರು.
ಶೌಚಾಲಯಗಳ ನಿರ್ಮಾಣ ಮತ್ತು ಗರ್ಭಿಣಿ ಮಹಿಳೆಯರಿಗೆ ಎಲ್‌ಪಿಜಿ ಸಿಲಿಂಡರ್‌ಗಳು, ನಲ್ಲಿ ನೀರು ಮತ್ತು ಪೌಷ್ಟಿಕಾಂಶವನ್ನು ಒದಗಿಸುವ ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದ ಅವರು, ಹುಟ್ಟಲಿರುವ ಮಕ್ಕಳ ಬಗ್ಗೆ ಕೂಡ ನಮ್ಮ ಸರ್ಕಾರ ಕಾಳಜಿ ವಹಿಸುತ್ತದೆ ಎಂದರು.
"ಹೆಣ್ಣು ಮಕ್ಕಳಿಗೆ ಸೈನ್ಯಕ್ಕೆ ಸೇರಲು ಸಾಧ್ಯವಾಗುತ್ತಿರುಲಿಲ್ಲ, ನಮ್ಮ ಸರ್ಕಾರ ಅವರಿಗೆ ಅವಕಾಶ ನೀಡಿದೆ. ಸೈನಿಕ ಶಾಲೆಗಳ ಬಾಗಿಲು ತೆರೆದಿದ್ದೇವೆ. ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆಯನ್ನು ಖಾತರಿಪಡಿಸಿದ್ದೇವೆ. ಹೆಣ್ಣುಮಕ್ಕಳಿಗೆ ಶಾಸನಸಭೆಗಳಲ್ಲಿ ಮೀಸಲಾತಿಗಾಗಿ ಕಾನೂನನ್ನು ಜಾರಿಗೊಳಿಸಿದ್ದೇವೆ. ಇಸ್ರೋ ಯೋಜನೆಗಳನ್ನು ಸಹ ಮಹಿಳೆಯರೇ ನಿರ್ವಹಿಸುತ್ತಿದ್ದಾರೆ ಎಂದು ಹೆಮ್ಮೆಯಾಗುತ್ತಿದೆ ಎಂದರು.
ಮೋದಿಗೆ ಇತಿಹಾಸ ಗೊತ್ತಿಲ್ಲ ಎಂದ ಕಾಂಗ್ರೆಸ್
ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಕಾಂಗ್ರೆಸ್, ಪ್ರಧಾನಿಗೆ ಅವರ ಇತಿಹಾಸ ತಿಳಿದಿಲ್ಲ ಎಂದಿದೆ. ಜನಸಂಘದ ಸಂಸ್ಥಾಪಕ ಬಿಜೆಪಿ ಸಿದ್ಧಾಂತಿ ಶ್ಯಾಮ ಪ್ರಸಾದ್ ಮುಖರ್ಜಿ ಸ್ವತಃ 1940 ರ ದಶಕದ ಆರಂಭದಲ್ಲಿ ಮುಸ್ಲಿಂ ಲೀಗ್‌ನೊಂದಿಗೆ ಬಂಗಾಳದಲ್ಲಿ ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದರು ಎಂದು ನೆನಪಿಸಿದೆ.












Click it and Unblock the Notifications