ನಿರ್ಭಯಾ ಅತ್ಯಾಚಾರಿಗಳಿಗೆ ಬೇಗ ಗಲ್ಲು ಹಾಕಲು ಆಗುವುದಿಲ್ಲ!
ನವದೆಹಲಿ, ಡಿಸೆಂಬರ್ 13; ನಿರ್ಭಯಾ ಹತ್ಯಾಚಾರದದಲ್ಲಿ ಮರಣದಂಡನೆಗೆ ಗುರಿಯಾಗಿರುವ ಅಪರಾಧಿಗಳನ್ನು ಗಲ್ಲಿಗೆರಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು ಎಂದು ನಿರ್ಭಯಾ ಪೋಷಕರು ಸಲ್ಲಿಸಿದ್ದ ಮನವಿ ಅರ್ಜಿಯನ್ನು ಪಟಿಯಾಲಾ ಹೌಸ್ ಕೋರ್ಟ ಶುಕ್ರವಾರ ತಳ್ಳಿಹಾಕಿದೆ.
ಅಪರಾಧಿಗಳಿಗೆ ಡಿಸೆಂಬರ್ 16 ರಂದೇ ಗಲ್ಲು ಹಾಕಬೇಕು ಎಂದು ನಿರ್ಭಯಾ ಪೋಷಕರು ಕೋರ್ಟಗೆ ಮನವಿ ಸಲ್ಲಿಸಿದ್ದರು. ಏಕೆಂದರೆ, ನಿರ್ಭಯಾ ಅತ್ಯಾಚಾರ ಡಿಸೆಂಬರ್ 16 ರಂದೇ (2012) ನಡೆದಿತ್ತು. ಅಪರಾಧಿಗಳು ಗಲ್ಲು ಶಿಕ್ಷೆಯಿಂದ ಪಾರಾಗಲು, ಅವರ ಮುಂದೆ ಇನ್ನೂ ಹಲವು ಅವಕಾಶಗಳು ಕಾನೂನಿನಲ್ಲಿ ಇವೆ ಎಂದು ಅವರ ಪರ ವಕೀಲ ಎ ಪಿ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಹೀಗಾಗಿ ನ್ಯಾಯಾಲಯ ನಿರ್ಭಯಾ ಪೋಷಕರ ಅರ್ಜಿಯನ್ನು ತಳ್ಳಿಹಾಕಿದೆ. ಈ ಹಿಂದೆ ನಡೆದ ವಿಚಾರಣೆಯಲ್ಲಿ, ತಿಹಾರ ಜೈಲಿನ ಅಧಿಕಾರಿಗಳು ಅಪರಾಧಿಗಳಿಗೆ ಅವರಿಗೆ ಇರುವ ಕಾನೂನು ಹೋರಾಟದ ಬಗ್ಗೆ ಮನವರಿಕೆ ಮಾಡಿ ಕೊಡಬೇಕು ಎಂದು ಇದೇ ಕೋರ್ಟ ಸೂಚಿಸಿತ್ತು.
ಪ್ರಕರಣದಲ್ಲಿ ನನ್ನ ತಪ್ಪು ಇಲ್ಲ ಎಂದು ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಕ್ಷಯ ಕುಮಾರ, ಗಲ್ಲು ಪ್ರಶ್ನಿಸಿ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟಗೆ ಸಲ್ಲಿಸಿದ್ದಾನೆ. ಇದರ ವಿಚಾರಣೆ ಡಿಸೆಂಬರ್ 17 ರಂದು ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ ತಿಳಿಸಿದೆ. ಗಲ್ಲು ಶಿಕ್ಷೆಗೆ ಗುರಿಯಾದ ಮುಕೇಶ, ವಿನಯ ಶರ್ಮಾ, ಪವನ ಕುಮಾರ ಅವರ ಗಲ್ಲು ಪ್ರಶ್ನಿಸಿ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಈ ಹಿಂದೆ ಸುಪ್ರೀಂ ವಜಾ ಮಾಡಿತ್ತು.

ಡಿಸೆಂಬರ್ 16, 2012 ರಂದು ನಡುರಾತ್ರಿಯಲ್ಲಿ ದೆಹಲಿಯಲ್ಲಿ ಮುಖೇಶ್ ಸಿಂಗ್, ವಿನಯ ಶರ್ಮಾ, ಮಹಮ್ಮದ್ ಅಪ್ರೋಜ್, ಪವನ್ ಗುಪ್ತಾ ಹಾಗೂ ಅಕ್ಷಯ್ ಠಾಕೂರ್ ಹಾಗೂ ಒಬ್ಬ ಬಾಲಾಪರಾಧಿ ನಿರ್ಭಯಾಳನ್ನು ಅಪಹರಿಸಿ ಬಸ್ ನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದ್ದರು. ನಿರ್ಭಯಾ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಳು. ಇದರ ವಿರುದ್ಧ ದೇಶದ್ಯಾಂತ ಭಾರೀ ಪ್ರತಿಭಟನೆಗಳು ಜರುಗಿ, ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗಿತ್ತು. ಒಬ್ಬ ಬಾಲಾಪರಾಧಿ ಬಿಡುಗಡೆಯಾಗಿದ್ದ. ಇನ್ನೊಬ್ಬ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನೂ ನಾಲ್ವರು ಸದ್ಯ ತಿಹಾರ್ ಜೈಲಿನಲ್ಲಿ ಕೊನೆ ದಿನಗಳನ್ನು ಎಣಿಸುತ್ತಿದ್ದಾರೆ.












Click it and Unblock the Notifications