Passenger Bus Accident: ನದಿಗೆ ಉರುಳಿದ ಪ್ರಯಾಣಿಕರಿದ್ದ ಬಸ್
Passenger Bus Accident: ಉತ್ತರಾಖಂಡ ರಾಜ್ಯದ ರುದ್ರ ಪ್ರಯಾಗ ಜಿಲ್ಲೆಯ ಘೋಲ್ತಿರ್‌ನಲ್ಲಿ ಇಂದು (ಜೂನ್ 26) ಬೆಳಂಬೆಳಗ್ಗೆ ಪ್ರಯಾಣಿಕರಿದ್ದ ಬಸ್ಸೊಂದು ಅಲಕನಂದಾ ನದಿಗೆ ಬಿದ್ದ ಘಟನೆ ನಡೆದಿದೆ.
ಬಸ್ ಅಪಘಾತದ ಬಳಿಕ ಸ್ಥಳದಲ್ಲಿ ಅವ್ಯವಸ್ಥೆ ಉಂಟಾಗಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ನಂತರ ಭದ್ರತಾ ಸಂಸ್ಥೆಗಳು ಸ್ಥಳಕ್ಕೆ ತಲುಪಿವೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 10 ಮಂದಿ ನಾಪತ್ತೆ ಆಗಿದ್ದಾರೆ. ಈ ಅಪಘಾತ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ ಎನ್ನಲಾಗಿದೆ.

ಉತ್ತರಾಖಂಡದ ಬದರಿನಾಥ್ ಹೆದ್ದಾರಿಯ ಘೋಲ್ತಿರ್ ಬಳಿ ಅಲಕನಂದಾ ನದಿಗೆ 18 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಉರುಳಿಬಿದ್ದಿದೆ. ಪೊಲೀಸ್ ಪ್ರಧಾನ ಕಚೇರಿಯ ವಕ್ತಾರ ಐಜಿ ನೀಲೇಶ್ ಆನಂದ್ ಭರಾನೆ ಬಗ್ಗೆ ಮಾತನಾಡಿ, ರುದ್ರ ಪ್ರಯಾಗ ಜಿಲ್ಲೆಯ ಘೋಲ್ತಿರ್ ಪ್ರದೇಶದಲ್ಲಿ ಬಸ್ ನಿಯಂತ್ರಣ ತಪ್ಪಿ ಅಲಕನಂದಾ ನದಿಗೆ ಬಿದ್ದಿದೆ. ಇಲ್ಲಿಯವರೆಗೆ ಬಂದಿರುವ ಮಾಹಿತಿಯ ಪ್ರಕಾರ, ಬಸ್ಸಿನಲ್ಲಿ 18 ಜನರು ಇದ್ದರು ಎಂದು ಮಾಹಿತಿ ನೀಡಿದ್ದಾರೆ.
7 ಜನರನ್ನ ರಕ್ಷಿಣೆ ಮಾಡಲಾಗಿದ್ದು, ನಾಪತ್ತೆಯಾದವರ ಪತ್ತೆ ಕಾರ್ಯವನ್ನು ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ನಡೆಸುತ್ತಿದೆ. ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮತ್ತೊಂದೆಡೆ ಪೊಲೀಸ್, ಜಿಲ್ಲಾಡಳಿತ ಹಾಗೂ ವಿಪತ್ತು ನಿರ್ವಹಣಾ ವಿಭಾಗದ ಉನ್ನತ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯನ್ನ ಮೇಲ್ವಿಚಾರಣೆ ಮಾಡುತ್ತಿದ್ದು, ಸರ್ಕಾರ ವದಂತಿಗಳನ್ನ ಹಬ್ಬಿಸದಂತೆ ಜನರಲ್ಲಿ ಮನವಿ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
ಬಸ್ ಅಪಘಾತದಲ್ಲಿ 15 ಜನ ಸಾವು: ಬಸ್ಸೊಂದು ಮಿನಿವ್ಯಾನ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿದ್ದು, 33 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಮಲೇಷ್ಯಾದ ಗೆರಿಕ್ ಬಳಿ ಇತ್ತೀಚೆಗಷ್ಟೇ ನಡೆದಿತ್ತು.
ಅಲ್ಲಿನ ಪೊಲೀಸರು ಮಾಹಿತಿ ಪ್ರಕಾರ, ಸುಲ್ತಾನ್ ಇದ್ರಿಸ್ ಶಿಕ್ಷಣ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಮತ್ತೆ ತಮ್ಮ ಕ್ಯಾಂಪಸ್‌ಗೆ ಕರೆದೊಯ್ಯುತ್ತಿದ್ದ ಬಸ್ ಸ್ಥಳೀಯ ಸಮಯ ಸುಮಾರು 1 ಗಂಟೆಗೆ ನಿಯಂತ್ರಣ ಕಳೆದುಕೊಂಡು ಹಿಂದಿನಿಂದ ಮಿನಿವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ಮೃತರಲ್ಲಿ 14 ಜನ 21-23 ವರ್ಷದೊಳಗಿನ ವಿದ್ಯಾರ್ಥಿಗಳಾಗಿದ್ದರೆ, ಉಳಿದ 15ನೇಯವರು ಬಸ್ ಸಿಬ್ಬಂದಿ ಆಗಿದ್ದರು.
13 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. 7 ಮಂದಿ ಗಂಭೀರ ಸ್ಥಿತಿಯಲ್ಲಿರುವವರು ಸೇರಿ 33 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿತ್ತು.ಪೆರಾಕ್ ರಾಜ್ಯದ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಯ ಚಿತ್ರಗಳು ಬಸ್ ಹಿಂಭಾಗಕ್ಕೆ ತೀವ್ರ ಹಾನಿಯೊಂದಿಗೆ ಉರುಳಿಬಿದ್ದಿರುವುದನ್ನು ತೋರಿಸಿದ್ದವು.












Click it and Unblock the Notifications