Parliament Budget Session 2023: ರಾಹುಲ್ ಗಾಂಧಿ ಕ್ಷಮೆಗೆ ಬಿಜೆಪಿ ಪಟ್ಟು, ಭಾಷಣ ವೇಳೆ ಮೈಕ್ ಆಫ್: ಖರ್ಗೆ ಆರೋಪ
ಸೋಮವಾರ ಆರಂಭವಾದ ಸಂಸತ್ತಿನ ಎರಡನೇ ಬಜೆಟ್ ಅಧಿವೇಶನದಲ್ಲಿ ಲಂಡನ್‌ನಲ್ಲಿನ ಭಾಷಣಕ್ಕಾಗಿ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಪಟ್ಟು ಹಿಡಿಯಿತು. ಭಾಷಣ ವೇಳೆ ಮೈಕ್ ಆಫ್ ಮಾಡಿದ್ದಕ್ಕೆ ಎಐಸಿಸಿ ಅಧ್ಯಕ್ಷರು ಗರಂ ಆದರು.
ಬೆಂಗಳೂರು, ಮಾರ್ಚ್ 13: ಸಂಸತ್ತಿನ ಎರಡನೇ ಬಜೆಟ್ ಅಧಿವೇಶನ ಸೋಮವಾರ ಆರಂಭವಾಗುತ್ತಿದ್ದಂತೆ, ಇಂಗ್ಲಿಷರ ನೆಲದಲ್ಲಿ ಭಾರತವನ್ನು ಅವಮಾನಿಸಿದ್ದ ಕಾಂಗ್ರೆಸ್‌ನ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ನಾಯಕರು ಪಟ್ಟು ಹಿಡಿದರು. ಇತ್ತ ಭಾಷಣೆ ವೇಳೆ ಮೈಕ್ ಆಫ್ ಆಗಿದ್ದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಧ್ವನಿ ಎತ್ತುತ್ತಿದ್ದಂತೆ ಸದನ ಗದ್ದಲಮಯದಿಂದ ಕೂಡಿತು.
ಆರಂಭದಲ್ಲೇ ಗದ್ದಲ, ಆರೋಪ ಪ್ರತ್ಯಾರೋಪಗಳಿಂದ ಶುರುವಾದ ಈ ಸಂಸತ್ತಿನ ಅಧಿವೇಶನದಲ್ಲಿ ಬಿಜೆಪಿಯ ಬಹುತೇಕ ನಾಯಕರು ಪಟ್ಟು ಸಡಿಲಿಸಲಿಲ್ಲ. ರಾಹುಲ್ ಗಾಂಧಿಯವರು ಈ ಸದನದ ಸದಸ್ಯರಾಗಿದ್ದು, ಲಂಡನ್ ನಲ್ಲಿ 'ಭಾರತ ಪ್ರಜಾಪ್ರಭುತ್ವದ ಅಪಾಯದಲ್ಲಿದೆ' ಎನ್ನುವ ಮೂಲಕ ಅಪಮಾನ ಮಾಡಿದ್ದಾರೆ. ಕ್ಷಮೆ ಕೇಳಲೇಬೇಕು ಎಂದು ಆಗ್ರಹಿಸಿದರು.

ಭಾರತದ ರಾಜಕೀಯ, ಭಾರತದ ಸಂಸತ್ತು, ಭಾರತದ ನ್ಯಾಯಾಂಗ ವ್ಯವಸ್ಥೆ ಮತ್ತು ಅದರ ಕಾರ್ಯತಂತ್ರದ ಭದ್ರತೆಯನ್ನು ವಿದೇಶಿ ನೆಲದಿಂದ ನಾಚಿಕೆಗೊಳಗಾಗಿಸುವ ಪ್ರಯತ್ನ ರಾಹುಲ್ ಗಾಂಧಿ ಮಾಡಿದ್ದಾರೆ ಎಂದು ಕೇಂದ್ರ ಸಚಿವರಾದ ಪಿಯುಷ್ ಗೋಯಲ್, ರವಿ ಶಂಕರ್ ಪ್ರಸಾದ್, ಪ್ರಹ್ಲಾದ್ ಜೋಶಿ, ರಾಜನಾಥ್ ಸಿಂಗ್ ಸೇರಿದಂತೆ ಅನೇಕರು ಖಂಡಿಸಿದರು. ಬಿಜೆಪಿ ಸಂಸದರು ಸದನಲ್ಲೇ ಪ್ರತಿಭಟನೆ ಆರಂಭಿಸುತ್ತಿದ್ದಂತೆ ಗಲಾಟೆಯ ವಾತಾವರಣ ನಿರ್ಮಾಣವಾಯಿತು.
ಅದಾನಿ ವಿಷಯ ಪ್ರಸ್ತಾಪ: ಮೈಕ್ ಆಫ್ ಎಂದ ಖರ್ಗೆ
ರಾಹುಲ್ ಗಾಂಧಿಯವರ ಲಂಡನ್ ಭಾಷಣ ಕುರಿತು ಪ್ರಸ್ತಾಪಿಸುತ್ತಿದ್ದಂತೆ ವಿರೋಧ ಪಕ್ಷ ಕಾಂಗ್ರೆಸ್ ನಾಯಕರ ಮೈಕ್ ಆಫ್ ಮಾಡುವ ಮೂಲಕ ಮೌನಕ್ಕೆ ಶರಣಾದರು ಎಂದು ಬಜೆಪಿ ನಾಯಕರು ಆರೋಪಿಸಿದ್ದಾರೆ. ಇತ್ತ ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನಖರ್ ಅವರು, ಸದನದಲ್ಲಿ ಯಾರೇ ಮಾತನಾಡುವಾಗಲೂ ಅದಕ್ಕೆ ತಡೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಇದಾದ ಬಳಿಕ ಜಂಟಿ ಸುದ್ದಿಗೋಷ್ಟಿಯೊಂದರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಪ್ರಧಾನಿ ನರೇಂದ್ರ ಮೋದಿಯವರ ಅಡಿಯಲ್ಲಿ ಕಾನೂನು ನಿಯಮ ಮತ್ತು ಪ್ರಜಾಪ್ರಭುತ್ವದ ಆಡಳಿತವಿಲ್ಲ ಎಂದರು. ದೇಶದ ಶ್ರೀಮಂತ ಅದಾನಿ ಷೇರುಗಳ ಕುರಿತು ಪ್ರಸ್ತಾಪಿಸುತ್ತಿದ್ದಂತೆ ಸದನದಲ್ಲಿ ನಮ್ಮ ಮುಂದಿದ್ದ ಮೈಕ್‌ಗಳನ್ನು ಆಪ್ ಮಾಡಲಾಯಿತು ಎಂದು ಅವರು ಆರೋಪಿದರು.
ಹೀಗೆ ಅಧಿವೇಶನದಲ್ಲಿ ಆಡಳಿತ ಪಕ್ಷದ ನಾಯಕರು ಮತ್ತು ವಿಪಕ್ಷ ನಾಯಕರ ಗಲಾಟೆಗಳು ಹೆಚ್ಚಾಗುತ್ತಿದ್ದಂತೆ ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.












Click it and Unblock the Notifications