ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ: ಹೊಸ ಟ್ವಿಸ್ಟ್ ಕೊಟ್ಟ ಇಂಡಿಯನ್ ಏರ್‌ಫೋರ್ಸ್
ಪೆಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಆಪರೇಷನ್ ಸಿಂಧೂರ್ ಎಂಬ ಪ್ರತಿದಾಳಿ ನಡೆಸಿತ್ತು. ಇದರಿಂದ ಪಾಕ್ ಕೂಡ ಭಾರತದ ಮೇಲೆ ಪ್ರತೀಕಾರ ಸವಾಲು ಹಾಕಿ ದಾಳಿ ಯತ್ನಗಳು ನಡೆಸಿತು. ಭಾರತ ಕೂಡ ಪಾಕ್‌ನ ಎಲ್ಲ ಪ್ರಯತ್ನಗಳನ್ನು ಹತ್ತಿಕ್ಕಿತ್ತು. ಕೊನೆಗೆ ನಿನ್ನೆಯಷ್ಟೇ ಕದನ ವಿರಾಮಕ್ಕೆ ಎರಡೂ ದೇಶಗಳು ಒಪ್ಪಿರುವುದಾಗಿ ತಿಳಿಸಿತ್ತು. ಆದರೆ ಇಂದು ಭಾರತೀಯ ವಾಯುಪಡೆಯು ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ ಎನ್ನುವ ಮೂಲಕ ಹೊಸ ಟ್ವಿಸ್ಟ್ ನೀಡಿದೆ.
ಈ ಬಗ್ಗೆ ಅಧಿಕೃತವಾಗಿ ಭಾರತೀಯ ವಾಯುಪಡೆಯೇ ಮಾಹಿತಿ ನೀಡಿದೆ. ಭಾರತೀಯ ವಾಯುಪಡೆ (IAF) ಆಪರೇಷನ್ ಸಿಂಧೂರ್‌ನಲ್ಲಿ ತನಗೆ ನಿಯೋಜಿಸಲಾದ ಕಾರ್ಯಗಳನ್ನು ನಿಖರತೆ ಮತ್ತು ವೃತ್ತಿಪರತೆಯೊಂದಿಗೆ ಯಶಸ್ವಿಯಾಗಿ ನಿರ್ವಹಿಸಿದೆ. ಕಾರ್ಯಾಚರಣೆಗಳನ್ನು ಉದ್ದೇಶಪೂರ್ವಕ ಮತ್ತು ವಿವೇಚನಾಯುಕ್ತ ರೀತಿಯಲ್ಲಿ ರಾಷ್ಟ್ರೀಯ ಉದ್ದೇಶಗಳಿಗೆ ಅನುಗುಣವಾಗಿ ನಡೆಸಲಾಯಿತು ಎಂದು ಹೇಳಿದೆ.

ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿರುವುದರಿಂದ, ಸರಿಯಾದ ಸಮಯದಲ್ಲಿ ವಿವರವಾದ ಮಾಹಿತಿ ಹಂಚಿಕೊಳ್ಳಲಾಗುವುದು. ಅಲ್ಲಿವರೆಗೆ ಯಾವುದೇ ಪರಿಶೀಲಿಸದ ಮಾಹಿತಿ, ಊಹಾಪೋಹ ಮತ್ತು ಸುಳ್ಳು ಮಾಹಿತಿ ಪ್ರಸರಣದಿಂದ ದೂರವಿರುವಂತೆ ಐಎಎಫ್ ಎಲ್ಲರನ್ನೂ ಒತ್ತಾಯಿಸುತ್ತದೆ ಎಂದು ಎಕ್ಸ್‌ನಲ್ಲಿ ತಿಳಿಸಿದೆ. ಇತ್ತ ಕದನ ವಿರಾಮದ ಬಳಿಕ ಪ್ರಧಾನಿ ಮೋದಿ ಅವರು ಕೂಡ ಇಂದು ದಿಢೀರನೆ ಉನ್ನತ ಮಟ್ಟದ ಸಭೆ ಕರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಈ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್.ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಮತ್ತು ಮೂರೂ ಸೇನಾ ಮುಖ್ಯಸ್ಥರು ಸೇರಿದಂತೆ ಉನ್ನತ ಸರ್ಕಾರಿ ಅಧಿಕಾರಿಗಳಿದ್ದರು. ಈ ಸಭೆಯು ಮಹತ್ವದ ಪಡೆದುಕೊಂಡಿದ್ದು, ಪಾಕಿಸ್ತಾನವು ಕದನ ವಿರಾಮ ಉಲ್ಲಂಘನೆ ಮಾಡಿರುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.
ಆಪರೇಷನ್ ಸಿಂಧೂರ್ ಭಾರತದ ಇಚ್ಛಾಶಕ್ತಿಯ ಸಂಕೇತ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿದ್ದು, ಭಾರತ ಮಾತೆಯ ಕಿರೀಟದವಾದ ಕಾಶ್ಮೀರದ ಮೇಲೆ ದಾಳಿ ಮಾಡಿ, ಹಲವಾರು ಕುಟುಂಬಗಳಿಂದ ಸಿಂಧೂರ ಅಳಿಸಿಹಾಕಿದ ಭಯೋತ್ಪಾದಕ ಸಂಘಟನೆಗಳಿಗೆ ತಕ್ಕ ಪಾಠ ಕಲಿಸಿದ್ದೇವೆ. ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ್ ಮೂಲಕ ನ್ಯಾಯ ಒದಗಿಸಿವೆ. ಹಾಗಾಗಿ ಇಡೀ ದೇಶವು ಭಾರತೀಯ ಸಶಸ್ತ್ರ ಪಡೆಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದೆ ಎಂದು ಹೇಳಿದ್ದಾರೆ.

ಆಪರೇಷನ್ ಸಿಂಧೂರ್ ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ, ಭಾರತದ ರಾಜಕೀಯ, ಸಾಮಾಜಿಕ ಮತ್ತು ಕಾರ್ಯತಂತ್ರದ ಇಚ್ಛಾಶಕ್ತಿಯ ಸಂಕೇತವೂ ಹೌದು. ಭಯೋತ್ಪಾದನೆ ವಿರುದ್ಧದ ಈ ಕಾರ್ಯಾಚರಣೆಯು ಭಾರತದ ಇಚ್ಛಾಶಕ್ತಿ ಮತ್ತು ಮಿಲಿಟರಿ ಶಕ್ತಿ, ಸಾಮರ್ಥ್ಯದ ಪ್ರದರ್ಶನವೂ ಆಗಿತ್ತು. ಭಾರತ ಭಯೋತ್ಪಾದನೆಯ ವಿರುದ್ಧ ಯಾವುದೇ ಕ್ರಮ ಕೈಗೊಂಡಾಗ ಗಡಿಯಾಚೆಗಿನ ಭೂಮಿ ಕೂಡ ಭಯೋತ್ಪಾದಕರಿಗೆ ಹಾಗೂ ಅವರ ನಾಯಕರಿಗೆ ಸುರಕ್ಷಿತವಲ್ಲ ಎಂಬುದನ್ನು ತೋರಿಸಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಪಾಕಿಸ್ತಾನದಲ್ಲಿ ಭಯೋತ್ಪಾದಕರನ್ನು ಕೆಡವಲು ಮಾತ್ರವೇ ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ್ ಪ್ರಾರಂಭಿಸಿದವು. ನಾವು ಎಂದಿಗೂ ಪಾಕ್ ನಾಗರಿಕರನ್ನು ಗುರಿಯಾಗಿಸಿಕೊಂಡಿಲ್ಲ. ಆದರೆ ಪಾಕಿಸ್ತಾನವು ಭಾರತದ ನಾಗರಿಕ ಪ್ರದೇಶಗಳನ್ನು, ದೇವಾಲಯಗಳು, ಗುರುದ್ವಾರಗಳು ಮತ್ತು ಚರ್ಚ್‌ಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಅದರ ವಿರುದ್ಧ ಭಾರತೀಯ ಸೇನೆ ಸಂಯಮ ಪ್ರದರ್ಶಿಸಿ ಸೂಕ್ತ ಪ್ರತ್ಯುತ್ತರವನ್ನು ನೀಡಿತು ಎಂದು ಹೇಳಿದ್ದಾರೆ.
ನಾವು ಭಾರತದ ಗಡಿಯ ಸಮೀಪವಿರುವ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡೆವು. ಪಾಕಿಸ್ತಾನಿ ಸೇನೆಯ ಪ್ರಧಾನ ಕಚೇರಿ ಇರುವ ರಾವಲ್ಪಿಂಡಿಯಲ್ಲಿಯೂ ಸಹ ಭಾರತೀಯ ಸಶಸ್ತ್ರ ಪಡೆಗಳು ಸದ್ದು ಮಾಡಿದವು. ಉರಿ ಘಟನೆಯ ನಂತರ, ನಮ್ಮ ಸಶಸ್ತ್ರ ಪಡೆಗಳು ಪಾಕಿಸ್ತಾನಕ್ಕೆ ಪ್ರವೇಶಿಸಿ ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗ, ಭಾರತದಲ್ಲಿ ಭಯೋತ್ಪಾದಕ ದಾಳಿಗಳ ಪರಿಣಾಮ ಏನೆಂದು ಇಡೀ ಜಗತ್ತು ನೋಡಿತು ಎಂದಿದ್ದಾರೆ.

ಪುಲ್ವಾಮಾ ನಂತರ, ಬಾಲಕೋಟ್ ವಾಯುದಾಳಿ ನಡೆದಾಗಲೂ ಅದನ್ನು ನೋಡಿದರು. ಪಹಲ್ಗಾಮ್ ಘಟನೆಯ ನಂತರ, ಭಾರತ ಪಾಕಿಸ್ತಾನಕ್ಕೆ ಪ್ರವೇಶಿಸಿ ಅನೇಕ ದಾಳಿಗಳನ್ನು ನಡೆಸಿದಾಗಲೂ ಜಗತ್ತು ನೋಡುತ್ತಿದೆ. ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಮಾರ್ಗವನ್ನು ಅನುಸರಿಸಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಗಡಿಯ ಎರಡೂ ಬದಿಗಳಲ್ಲಿ ಭಯೋತ್ಪಾದನೆಯ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವುದು "ನವ ಭಾರತ" ಎಂದು ಸ್ಪಷ್ಟಪಡಿಸಿದ್ದಾರೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಭಾರತದ ಮುಂದಿನ ಹೆಜ್ಜೆ ಏನು?
ಆಪರೇಷನ್ ಸಿಂದೂರ್ ಮುಗಿದಿಲ್ಲ. ಅವರು ಗುಂಡು ಹಾರಿಸಿದರೆ, ನಾವು ಗುಂಡು ಹಾರಿಸುತ್ತೇವೆ, ಮತ್ತು ಅವರು ದಾಳಿ ಮಾಡಿದರೆ, ನಾವು ದಾಳಿ ಮಾಡುತ್ತೇವೆ ಎಂಬ ನಿರ್ಧಾರಕ್ಕೆ ಭಾರತ ಬಂದಿದೆ ಎಂದು ಎಎನ್‌ಐ ವರದಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು 'ವಹಾನ್ ಸೇ ಗೋಲಿ ಚಲೇಗಿ, ಯಹಾನ್ ಸೇ ಗೋಲಾ ಚಲೇಗಾ' ಎಂದು ಸ್ಪಷ್ಟ ನಿರ್ದೇಶನ ನೀಡಿದ್ದು, ವಾಯುನೆಲೆಗಳ ಮೇಲಿನ ದಾಳಿಯೇ ಮಹತ್ವದ ತಿರುವು ಎಂದಿದ್ದಾರಂತೆ.
ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿಯ ಮೇಲೆ ಅತಿ ಹೆಚ್ಚು ದಾಳಿ ನಡೆಸಲಾಯಿತು. ಅತ್ಯಂತ ಪ್ರಬಲವಾದ ಆಯುಧವನ್ನು ಬಳಸಲಾಯಿತು. ಜೈಶ್-ಎ-ಮೊಹಮ್ಮದ್ ಅನ್ನು ಐಎಸ್ಐ ಸೃಷ್ಟಿಸಿತು, ಅದು ಭಾರತದಿಂದ ಬಂದ ಪ್ರಮುಖ ಸಂದೇಶವಾಗಿತ್ತು ಎನ್ನಲಾಗಿದೆ.
ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಮಂತ್ರಿಗಳು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವೆ ಯಾವುದೇ ಮಾತುಕತೆ ನಡೆದಿಲ್ಲ. ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ನಡುವೆ ಮಾತ್ರ ಮಾತುಕತೆ ನಡೆದಿತ್ತು. ಕಾಶ್ಮೀರದ ಬಗ್ಗೆ ನಮಗೆ ಸ್ಪಷ್ಟವಾದ ನಿಲುವು ಇದೆ. ಮಾತನಾಡಲು ಬೇರೆ ಏನೂ ಇಲ್ಲ. ಅವರು ಭಯೋತ್ಪಾದಕರನ್ನು ಹಸ್ತಾಂತರಿಸುವ ಬಗ್ಗೆ ಮಾತನಾಡಿದರೆ, ನಾವು ಮಾತನಾಡಬಹುದು. ನಮಗೆ ಬೇರೆ ಯಾವುದೇ ವಿಷಯದ ಉದ್ದೇಶವಿಲ್ಲ. ಯಾರೂ ಮಧ್ಯಸ್ಥಿಕೆ ವಹಿಸುವುದು ನಮಗೆ ಇಷ್ಟವಿಲ್ಲ. ನಮಗೆ ಯಾರೂ ಮಧ್ಯಸ್ಥಿಕೆ ವಹಿಸುವ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಭಾರತವು ಆಪರೇಷನ್ ಸಿಂಧೂರ್ ನಡೆಸುವ ಮೂಲಕ ಮೂರು ಉದ್ದೇಶಗಳನ್ನು ಸಾಧಿಸಿದೆ. ಮಿಲಿಟರಿ ಉದ್ದೇಶ, ರಾಜಕೀಯ ಉದ್ದೇಶ, ಮಾನಸಿಕ ಉದ್ದೇಶ ಈಡೇರಿದೆ.ಗಡಿಯಾಚೆಗಿನ ಭಯೋತ್ಪಾದನೆಗೆ ಸಂಬಂಧಿಸಿದ ಸಿಂಧೂ ಜಲ ಒಪ್ಪಂದವು ಗಡಿಯಾಚೆಯಿಂದ ಭಯೋತ್ಪಾದನೆ ನಿಲ್ಲುವವರೆಗೂ ಅದು ಸ್ಥಗಿತಗೊಳ್ಳುತ್ತದೆ. ಭಾರತ ಪಾಕಿಸ್ತಾನಕ್ಕೆ ಆಳವಾಗಿ ಹೊಡೆದಿದ್ದು, ಇದರಲ್ಲಿ ಯಶಸ್ವಿಯಾಗಿದೆ.
ಪ್ರತಿ ಸುತ್ತಿನಲ್ಲೂ ಪಾಕಿಸ್ತಾನದ ಪರಿಸ್ಥಿತಿ ಹದಗೆಡುತ್ತಾ ಹೋಗಿದೆ. ಅವರು ಯುದ್ಧದ ಪ್ರತಿ ಸುತ್ತಿನಲ್ಲೂ ಭಾರತದ ವಿರುದ್ಧ ಸೋತರು. ಪಾಕಿಸ್ತಾನದ ವಾಯುನೆಲೆಗಳ ಮೇಲೆ ನಮ್ಮ ದಾಳಿಯ ನಂತರ, ಪಾಕಿಸ್ತಾನವು ಚೆನ್ನಾಗಿ ಅರಿತುಕೊಂಡಿದೆ. ಯಾರೂ ಸುರಕ್ಷಿತವಾಗಿಲ್ಲ ಎಂದು ಭಾರತವು ಸ್ಪಷ್ಟ ಸಂದೇಶವನ್ನು ನೀಡಿದೆ ಎಂಬ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications