Karnataka CM: ಡಿಕೆಶಿ-ಸಿದ್ದುಗೆ ಆಪರೇಷನ್ ಕಮಲದ ಎಚ್ಚರಿಕೆ ಕೊಟ್ಟ ಹೈಕಮಾಂಡ್
ಕರ್ನಾಟಕ ವಿಧಾಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆಯುವ ಮೂಲಕ ಸರ್ಕಾರ ರಚನೆ ಮಾಡಲು ಮುಂದಾಗಿರುವ ಕಾಂಗ್ರೆಸ್‌ಗೆ ಸದ್ಯ ಸಿಎಂ ಆಯ್ಕೆ ಕಗ್ಗಂಟಾಗಿದೆ. ಸಿದ್ದರಾಮಯ್ಯ - ಡಿಕೆಶಿ ನಡುವಿನ ಹಗ್ಗಜಗ್ಗಾಟ ಅಂತಿಮ ಹಂತಕ್ಕೆ ಬಂದಿದ್ದು, ಸಿದ್ದರಾಮಯ್ಯ ಅವರೇ ರಾಜ್ಯದ ಮುಖ್ಯಮಂತ್ರಿಯಾಗುದು ಖಚಿತವಾಗಿದೆ.
ಹೈಕಮಾಂಡ್ ಜೊತೆ ಉಭಯ ನಾಯಕರು ಸುದೀರ್ಘ ಚರ್ಚೆ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಉಭಯ ನಾಯಕರಿಗೆ 'ಆಪರೇಷನ್ ಕಮಲ'ದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಚರ್ಚೆ ವೇಳೆ, ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದ್ದು, ಎಚ್ಚರಿಕೆಯಿಂದ ಇರುವಂತೆ ಇಬ್ಬರಿಗೂ ಸೂಚನೆ ನೀಡಿದೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಫುಲ್ ಅಲರ್ಟ್ ಆಗಿದ್ದು, ಎಲ್ಲಾ 135 ಶಾಸಕರ ಮಾಹಿತಿ ಕಲೆ ಹಾಕಿದ್ದಾರೆ. ಈಗಾಗಲೇ ಅನೇಕ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸಂಪರ್ಕಿಸಿರುವ ಮಾಹಿತಿ ಸಿಕ್ಕಿದ್ದು, ನಾವು ಸ್ವಲ್ಪ ಯಾಮಾರಿದ್ರೂ ದೊಡ್ಡ ಗಂಡಾಂತರ ಎದುರಾಗಬಹುದು ಎಂದು ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದೆ.
2018ರಲ್ಲಿ ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಆಪರಷೇನ್ ಕಮಲ ನಡೆಸಿದ್ದ ಬಿಜೆಪಿ ಅಧಿಕಾರದ ಗದ್ದುಗೆ ಏರಿತ್ತು. ಆಪರೇಷನ್ ಕಮಲದ ಕಾರಣ ಕಾಂಗ್ರೆಸ್ ಈಗಾಗಲೇ ಭಾರಿ ಹೊಡೆತ ತಿಂದಿದೆ. ಇನ್ನು ಮುಂದೆ ಅಂತಹ ಪರಿಸ್ಥಿತಿ ಬರದಂತೆ ನೋಡಿಕೊಳ್ಳಲು ಕಾಂಗ್ರೆಸ್ ಹೈ ಕಮಾಂಡ್ ಭಾರಿ ಎಚ್ಚರಿಕೆ ವಹಿಸುತ್ತಿದೆ.
ಫಲಿತಾಂಶದ ದಿನವೇ ರೆಸಾರ್ಟ್ ಬುಕ್ ಮಾಡಿದ್ದ ಕಾಂಗ್ರೆಸ್
ಅತಂತ್ರ ಫಲಿತಾಂಶ ಅಥವಾ 120 ಸ್ಥಾನಗಳನ್ನು ಗೆಲ್ಲುವ ಆತಂಕದಲ್ಲಿದ್ದ ಕಾಂಗ್ರೆಸ್ ಫಲಿತಾಂಶದ ದಿನವೇ ಹೈದರಾಬಾಗ್, ಜೈಪುರದಲ್ಲಿ ರೆಸಾರ್ಟ್ ಅನ್ನು ಬುಕ್ ಮಾಡಿತ್ತು. ಕಡಿಮೆ ಸ್ಥಾನ ಬಂದರೆ, ಅಥವಾ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಬಿಜೆಪಿ ಅಧಿಕಾರ ಹಿಡಿಯಲು ಆಪರೇಷನ್ ಕಮಲಕ್ಕೆ ಯತ್ನಿಸುತ್ತದೆ ಎನ್ನುವ ಭಯ ಕೈ ನಾಯಕರನ್ನು ಕಾಡಿತ್ತು. ಆದರೆ, ಬಿಜೆಪಿ ಕೇವಲ 66 ಸ್ಥಾನಕ್ಕೆ ಕುಸಿದು, ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಬಳಿಕ ಕೈ ನಾಯಕರ ಆತಂಕ ದೂರವಾಗಿತ್ತು.
ಸಿಎಂ ಆಯ್ಕೆ ಬಳಿಕ, ಸಚಿವ ಸ್ಥಾನ ಹಂಚಿಕೆ ಸಂದರ್ಭದಲ್ಲಿ ಕೂಡ ಕಾಂಗ್ರೆಸ್‌ನಲ್ಲಿ ಒಂದಷ್ಟು ಅಸಮಾಧಾನ ಕಾಣಿಸಿಕೊಳ್ಳುವ ಆತಂಕ ಇದ್ದೇ ಇದೆ. ಅವರನ್ನೆಲ್ಲಾ ಸಮಾಧಾನ ಪಡಿಸಿ, ಸುಭದ್ರ ಸರ್ಕಾರವನ್ನು ಉಳಿಸಿಕೊಂಡು ಆಡಳಿತ ನಡೆಸುವ ಹೊಣೆ ಈಗ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಹೆಗಲ ಮೇಲಿದೆ.












Click it and Unblock the Notifications