ಮಕ್ಕಳ ಕೈಗೆ ಮೊಬೈಲ್ ಕೊಡುವ ಮೊದಲು ಈ ಸ್ಟೋರಿ ತಪ್ಪದೆ ಓದಿ... Online Games
ಮಕ್ಕಳ ಕೈಗೆ ಮೊಬೈಲ್ ಕೊಡುವುದು & ಮಕ್ಕಳು ಮೊಬೈಲ್ ಬಳಸುವುದನ್ನೇ ದೊಡ್ಡ ಸಾಧನೆ ಎನ್ನುವ ರೀತಿ ಇತ್ತೀಚೆಗೆ ಪೋಷಕರು ಬಿಂಬಿಸುತ್ತಿದ್ದಾರೆ. ಸ್ವಂತ ಅಪ್ಪ & ಅಮ್ಮನಿಂದಲೇ ಇಷ್ಟು ಪ್ರೋತ್ಸಾಹ ಸಿಕ್ಕರೆ ಇನ್ನು ಮಕ್ಕಳು ಸುಮ್ಮನೆ ಇರೋದಕ್ಕೆ ಆಗುತ್ತಾ? ಇಲ್ಲ ಹೀಗೆಲ್ಲಾ ಮನೆಯಲ್ಲೇ ಮೊಬೈಲ್ ನೋಡಲು ಬೆಂಬಲ ಸಿಗುವ ಕಾರಣಕ್ಕೆ, ಮಕ್ಕಳು ಕೂಡ ಮೊಬೈಲ್ ಲೋಕದಲ್ಲಿ ಈಗ ಕಳೆದು ಹೋಗುವಂತೆ ಆಗಿದೆ. ಇವತ್ತು ಕೂಡ, ಮೂವರು ಮುಗ್ಧ ಮಕ್ಕಳು ಆನ್‌ಲೈನ್ ಗೇಮ್ ಕಾರಣಕ್ಕೆ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಹಾಗಾದರೆ ಮಕ್ಕಳ ಕೈಗೆ ಮೊಬೈಲ್ ಕೊಡುವ ಮೊದಲು ಈ ಸ್ಟೋರಿ ತಪ್ಪದೆ ಓದಿ.
ಮುಗ್ಧ ಮನಸ್ಸಿನ ಮಕ್ಕಳಿಗೆ ಏನೂ ಅರಿವು ಇರುವುದೇ ಇಲ್ಲ, ಅವರಿಗೆ ಮನೆಯಲ್ಲಿ ನಾವು ಏನು ಹೇಳುತ್ತೇವೆ ಮತ್ತು ಕಲಿಸುತ್ತೇವೋ ಅದನ್ನು ಅಚ್ಚುಕಟ್ಟಾಗಿ ಕಲಿಯುತ್ತಾರೆ. ಅಪ್ಪ & ಅಮ್ಮ ಹೊಡಿ ಬಡಿ ಎಂದು ಹೇಳುತ್ತಲೇ ಇದ್ದರೆ, ಮಕ್ಕಳು ಕೂಡ ಬಹುತೇಕ ಅದೇ ದಾರಿ ತುಳಿಯುತ್ತಾರೆ. ಅದೇ ಮಕ್ಕಳಿಗೆ ಉತ್ತಮ ದಾರಿ ತೋರಿಸಿ, ಒಳ್ಳೆಯದನ್ನೇ ಹೇಳಿಕೊಟ್ಟರೆ ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ಬದುಕುತ್ತಾರೆ.

ಇದೆಲ್ಲವನ್ನೂ ಮೀರಿ ಈಗ ಮೊಬೈಲ್ ಎಂಬ ಹುಚ್ಚು ಒಳ್ಳೆಯ ವಿಚಾರ ಹೇಳುವುದಕ್ಕಿಂತ ಹೆಚ್ಚಾಗಿ ಸಮಾಜಕ್ಕೆ ಕೆಟ್ಟದನ್ನೇ ಕಲಿಸುತ್ತಿರುವ ಆರೋಪ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಆನ್‌ಲೈನ್ ಗೇಮ್ಸ್ ಹಾವಳಿ ಹೆಚ್ಚಾಗುತ್ತಿದೆ. ಹೀಗಂತ ಆನ್‌ಲೈನ್ ಗೇಮ್ಸ್ ಹಾವಳಿಯು ಇಂದು ಅಥವಾ ನಿನ್ನೆಯಿಂದ ಶುರುವಾಗಿಲ್ಲ, ಹತ್ತಾರು ವರ್ಷಗಳ ಇತಿಹಾಸವೇ ಇದೆ ಈ ಭಯಾನಕ ಆಟಗಳಿಗೆ. ಅದರಲ್ಲೂ ಈ ವಿಚಾರದಲ್ಲಿ ಬ್ಲೂ ವೇಲ್ ಎಂಬ ಆನ್‌ಲೈನ್ ಗೇಮ್ ಭಾರತದಲ್ಲಿ ಹಲವು ಮಕ್ಕಳ ಜೀವ ತೆಗೆದು ಸಂಚಲನ ಸೃಷ್ಟಿಸಿತ್ತು.
ಬ್ಲೂ ವೇಲ್ ಎಂಬ ಕೆಟ್ಟ ಆಟ
ಭಾರತ ಮಾತ್ರವಲ್ಲ ಇಂದು ಇಡೀ ಜಗತ್ತು ಮಕ್ಕಳಿಗೆ ಮೊಬೈಲ್ ಕೊಡುವ ವಿಚಾರದಲ್ಲಿ ಗೊಂದಲಕ್ಕೆ ಬಿದ್ದಿದೆ. ಅದರಲ್ಲೂ ಗಾಜಿಯಾಬಾದ್ ಪ್ರದೇಶದಲ್ಲಿ ಇಂದು ಆನ್‌ಲೈನ್ ಗೇಮ್ಸ್ ವಿಚಾರವಾಗಿಯೇ ಮೂವರು ಮಕ್ಕಳು ಜೀವ ಕಳೆದುಕೊಂಡ ವಿಚಾರ ದೊಡ್ಡ ಬಿರುಗಾಳಿ ಎಬ್ಬಿಸಿದೆ. 'ಕೊರಿಯನ್ ಲವ್ ಗೇಮ್' ಎಂಬ ಆನ್‌ಲೈನ್ ಗೇಮ್ ಸುಳಿಗೆ ಸಿಲುಕಿ ಈ 3 ಪುಟಾಣಿ ಮಕ್ಕಳು ತಮ್ಮ ಜೀವ ಕಳೆದುಕೊಂಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಆದರೆ ಈ ಹಿಂದೆ, ಬ್ಲೂ ವೇಲ್ ಎಂಬ ಭೀಕರವಾದ ಆನ್‌ಲೈನ್ ಗೇಮ್ ಕೂಡ ಭಾರತದ ಮಕ್ಕಳ ಜೀವನದಲ್ಲಿ ಇದೇ ರೀತಿಯ ಆಟ ಆಡಿ ಬ್ಯಾನ್ ಆಗಿತ್ತು.












Click it and Unblock the Notifications