ಒಂದು ರಾಷ್ಟ್ರ ಒಂದು ಚುನಾವಣೆ; ಸಮಿತಿ ಸೇರಲ್ಲ ಎಂದ ಕಾಂಗ್ರೆಸ್ ನಾಯಕ!
ನವೆಹಲಿ, ಸೆಪ್ಟೆಂಬರ್ 03; ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರ 'ಒಂದು ರಾಷ್ಟ್ರ ಒಂದು ಚುನಾವಣೆ' ಕಾರ್ಯಸಾಧ್ಯತೆ ಪರಿಶೀಲಿಸಲು 8 ಸದಸ್ಯರ ಉನ್ನತ ಮಟ್ಟದ ಸಮಿತಿ ರಚನೆ ಮಾಡಿದೆ. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿ ಇದಾಗಿದೆ.
ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಅಧೀರ್ ರಂಜನ್ ಚೌಧರಿ ಈ ಸಮಿತಿಯ ಭಾಗವಾಗಲು ನಿರಾಕರಿಸಿದ್ದಾರೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯನ್ನು ಒಟ್ಟಿಗೆ ನಡೆಸುವ ಕುರಿತು ಪರಿಶೀಲಿಸಲು ಸಮಿತಿ ರಚನೆ ಮಾಡಲಾಗಿದೆ.

ಈ ಸಮಿತಿಯು ತಕ್ಷಣದಿಂದಲೇ ಕಾರ್ಯ ಪ್ರವೃತ್ತವಾಗಲಿದೆ. ಆದಷ್ಟು ಶೀಘ್ರವೇ ಶಿಫಾರಸು ನೀಡಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದರೆ, ವರದಿ ಸಲ್ಲಿಕೆ ಮಾಡಲು 8 ಸದಸ್ಯರ ಸಮಿತಿ ಗಡುವು ನಿಗದಿ ಮಾಡಿಲ್ಲ.
ರಾಮನಾಥ ಕೋವಿಂದ್ ನೇತೃತ್ವದ ಸಮಿತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಲೋಕಸಭೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ರಾಜ್ಯಸಭೆ ವಿರೋಧ ಪಕ್ಷದ ಮಾಜಿ ನಾಯಕ ಗುಲಾಂ ನಬಿ ಆಜಾದ್, ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎನ್. ಕೆ. ಸಿಂಗ್ ಸದಸ್ಯರು.
ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಸಿ. ಕಶ್ಯಪ್. ಹಿರಿಯ ವಕೀಲ ಹರೀಶ್ ಸಾಳ್ವೆ, ಗುಪ್ತದಳದ ಮಾಜಿ ಆಯುಕ್ತ ಸಂಜಯ್ ಕೊಠಾರಿ ಸಮಿತಿಯ ಇತರ ಸದಸ್ಯರು. ವಿಶೇಷ ಆಹ್ವಾನಿತರಾಗಿ ಸಮಿತಿಯ ಸಭೆಯಲ್ಲಿ ಕಾನೂನು ಸಚಿವ ಅರ್ಜುನ್ ರಾಮ್ ಮೇಘಾವಾಲ್ ಪಾಲ್ಗೊಳ್ಳಲಿದ್ದಾರೆ. ಕಾನೂನು ಕಾರ್ಯದರ್ಶಿ ನಿತೇನ್ ಚಂದ್ರಾ ಸಮಿತಿಯ ಕಾರ್ಯದರ್ಶಿಗಳು.
ಅಮಿತ್ ಶಾಗೆ ಅಧೀರ್ ರಂಜನ್ ಚೌಧರಿ ಪತ್ರ; 'ಒಂದು ರಾಷ್ಟ್ರ ಒಂದು ಚುನಾವಣೆ' ಕಾರ್ಯಸಾಧ್ಯತೆ ಕುರಿತ ಸಮಿತಿಯ ಭಾಗವಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಅಧೀರ್ ರಂಜನ್ ಚೌಧರಿ ಈ ಕುರಿತು ಪತ್ರವನ್ನು ಬರೆದಿದ್ದಾರೆ. ಈ ಸಮಿತಿಗೆ ರಾಜ್ಯಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿಸಿಕೊಂಡಿಲ್ಲ, ಅದರ ಬದಲು ಗುಲಾಂ ನಬಿ ಆಜಾದ್ ಸೇರಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಸಮಿತಿಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕನನ್ನು ಸೇರಿಸದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ಅಪಮಾನವಾಗಿದೆ ಎಂದು ಅಧೀರ್ ರಂಜನ್ ಚೌಧರಿ ಪತ್ರದಲ್ಲಿ ಗೃಹ ಸಚಿವರ ಗಮನ ಸೆಳೆದಿದ್ದಾರೆ.
ಈ ಸಮಿತಿಯ ಭಾಗವಾಗದೇ ಇರುವುದಕ್ಕೆ ನನಗೆ ಯಾವುದೇ ಹಿಂಜರಿಕೆ ಇಲ್ಲ. ಬೇಕಾದವರನ್ನು ಸಮಿತಿಗೆ ಸೇರಿಸಿರುವುದುದ ಕಣ್ಣೊರೆಸುವ ತಂತ್ರವಾಗಿದೆ ಎಂದು ಪತ್ರದಲ್ಲಿ ಅಧೀರ್ ರಂಜನ್ ಚೌಧರಿ ಆರೋಪ ಮಾಡಿದ್ದಾರೆ.
ಪತ್ರದಲ್ಲಿ ಅಧೀರ್ ರಂಜನ್ ಚೌಧರಿ ಅವರು ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಸರ್ಕಾರ ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ಪರೀಶಿಲಿಸಲು ಸಮಿತಿ ರಚನೆ ಮಾಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
'ಒಂದು ರಾಷ್ಟ್ರ ಒಂದು ಚುನಾವಣೆ' ಕಾರ್ಯಸಾಧ್ಯತೆ ಕುರಿತು ಪರಿಶೀಲನೆ ಮಾಡಲು ಸಮಿತಿ ರಚನೆ ಮಾಡಿದ ಕುರಿತು ಈಗಾಗಲೇ ಪರ, ವಿರೋಧ ಚರ್ಚೆಗಳು ಆರಂಭವಾಗಿವೆ. ಬಿಜೆಪಿ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳು ಈ ತೀರ್ಮಾನವನ್ನು ಸ್ವಾಗತಿಸಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಒಂದಾಗಿರುವ ವಿರೋಧ ಪಕ್ಷಗಳ I.N.D.I.A ಮೈತ್ರಿಕೂಟ ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದೆ.
1967ರ ತನಕ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸಲಾಗುತ್ತಿತ್ತು. ಇದೇ ಮಾದರಿಯಲ್ಲಿ ಈಗ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸಲು ಸಾಧ್ಯವೇ? ಎಂಬುದನ್ನು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿ ಪರಿಶೀಲಿಸಿ ಶಿಫಾರಸುಗಳನ್ನು ಮಾಡಲಿದೆ.
ಕೇಂದ್ರ ಸರ್ಕಾರ ಸೆಪ್ಟೆಂಬರ್ 18 ರಿಂದ 22ರ ತನಕ ಸಂಸತ್‌ನ ವಿಶೇಷ ಅಧಿವೇಶನ ಕರೆಯಲು ತೀರ್ಮಾನಿಸಿದೆ. ಈ ಕುರಿತು ಪ್ರಕಟಿಸಿದ ಮರು ದಿನವೇ 'ಒಂದು ರಾಷ್ಟ್ರ ಒಂದು ಚುನಾವಣೆ' ಕಾರ್ಯಸಾಧ್ಯತೆ ಕುರಿತು ಚರ್ಚಿಸಲು ಸಮಿತಿ ರಚನೆ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ವಿಶೇಷ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪ ಇರುವುದಿಲ್ಲ. ಯಾವುದೇ ಖಾಸಗಿ ಮಸೂದೆಗಳ ಮಂಡನೆ ಇಲ್ಲ ಎಂದು ಈಗಾಗಲೇ ಸರ್ಕಾರ ಸ್ಪಷ್ಟಪಡಿಸಿದೆ. ಆದರೆ ಕಾರ್ಯಸೂಚಿ ಏನೆಂದು ಇನ್ನೂ ಬಹಿರಂಗಪಡಿಸಿಲ್ಲ. 2014ರಿಂದಲೂ ಪ್ರಧಾನಿ ನರೇಂದ್ರ ಮೋದಿ 'ಒಂದು ರಾಷ್ಟ್ರ ಒಂದು ಚುನಾವಣೆ' ಬಗ್ಗೆ ಮಾತನಾಡುತ್ತಿದ್ದಾರೆ.












Click it and Unblock the Notifications