'ಸ್ವಾಮಿ ನರೇಂದ್ರ ಮೋದಿ' ಮಂದಿರಕ್ಕೆ ಬನ್ನಿ
ಲಕ್ನೋ, ಜ.29: ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ, ಗುಜರಾತ್ ಮುಖ್ಯಮಂತ್ರಿ, ಭಾರತದ ಜನಪ್ರಿಯ ರಾಜಕಾರಣಿ ನರೇಂದ್ರ ಮೋದಿ ಅವರು ಚುನಾವಣೆ ಗೆದ್ದು ಸಂಸತ್ ಸೇರುವ ಮುನ್ನವೇ ಅಸಂಖ್ಯಾತ ಜನರ ಹೃದಯದ ಬಾಗಿಲು ತಟ್ಟಿದ್ದಾರೆ. 'ವ್ಯಕ್ತಿ ಪೂಜೆ ನನಗೆ ಇಷ್ಟವಿಲ್ಲ. ದೇಶ ಮೊದಲು ನಂತರ ನಾವೆಲ್ಲ' ಎಂದು ಸಾರುತ್ತಿರುವ ಮೋದಿ ಅವರ ಹೆಸರಿನಲ್ಲಿ ದೇಗುಲ ನಿರ್ಮಿಸಲಾಗಿದೆ.
ಉತ್ತರಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ಮೋದಿ ಮೇನಿಯಾದಿಂದ ಜನ ಬಳಲುತ್ತಿದ್ದಾರೆ. ಭಕ್ತ ಪರವಶರಾಗಿದ್ದಾರೆ. ಸ್ಥಳೀಯರು ಊರಿನಲ್ಲಿದ್ದ ಶಿವ ಮಂದಿರವನ್ನು ಸಂಪೂರ್ಣ ಮಾರ್ಪಾಟು ಮಾಡಿ ನರೇಂದ್ರ ಮೋದಿ ದೇಗುಲವನ್ನಾಗಿಸಿದ್ದಾರೆ. ಮೋದಿ ದೇಗುಲವಿರುವ ಊರಿನ ಹೆಸರು ಭಗವಾನ್ ಪುರ ಎಂಬುದು ಇನ್ನೂ ವಿಶೇಷ.
ಕುಳಿತಿರುವ ಭಂಗಿಯಲ್ಲಿರುವ ಮೋದಿ ವಿಗ್ರಹ ಶಿವ ದೇಗುಲದಲ್ಲಿ ಈಗ ಕಾಣಿಸಿಕೊಂಡಿದ್ದು 'ನಮೋ ದೇಗುಲ' ವಾಗಿದೆ. ನಿತ್ಯ ಹನುಮಾನ್ ಚಾಲಿಸಾ ರೀತಿಯಲ್ಲಿ ಮೋದಿ ಚಾಲಿಸಾ ರಚಿಸಿ ಹಾಡಲಾಗುತ್ತೆ. ಭಜನೆ, ಪೂಜೆ, ಪ್ರಸಾದ ಹಂಚಿಕೆ ಎಲ್ಲವೂ ಸಾಂಗವಾಗಿ ನಡೆಯುತ್ತಿದೆ. ಜೀವಂತ ವ್ಯಕ್ತಿಯೊಬ್ಬರ ಹೆಸರಿನಲ್ಲಿ ದೇಗುಲ ನಿರ್ಮಿಸಿರುವುದು ಉತ್ತರ ಪ್ರದೇಶದಲ್ಲಿ ಇದೇ ಮೊದಲು ಎನ್ನಲಾಗಿದೆ.

49 ವರ್ಷದ ಪಂಡಿತ್ ಬ್ರಿಜೇಂದ್ರ ನಾರಾಯಣ್ ಮಿಶ್ರಾ ಈ ದೇಗುಲದ ಪ್ರಮುಖ ಅರ್ಚಕರಾಗಿದ್ದಾರೆ. ಮೋದಿ ಅವರನ್ನು ಪೂಜಿಸುವುದರಲ್ಲಿ ತಪ್ಪೇನಿಲ್ಲ. ದೇಶದ ಒಳಿತಿದೆ, ನಾಡಿನ ಏಳಿಗೆಗೆ ಶ್ರಮಿಸುತ್ತಿರುವ ಮೋದಿ ಅವರ ಭಜನೆ ಮಾಡುವುದು ಒಳ್ಳೆಯದು ಎಂದು ಮಿಶ್ರಾ ಹೇಳಿದ್ದಾರೆ.
ಮತ್ತೊಂದು ವಿಶೇಷವೆಂದರೆ ಮಿಶ್ರಾ ಅವರು ಕೂಡಾ ಮೋದಿ ಅವರಂತೆ ಅರ್ಧ ಕುರ್ತಾ, ಜಾಕೇಟ್ ಧರಿಸಿ, ಕೇಶ ವಿನ್ಯಾಸ, ಗಡ್ಡ ಬಿಟ್ಟು ಬಿಜೆಪಿ ನಾಯಕರನ್ನು ಪೂಜಿಸುತ್ತಿದ್ದಾರೆ.
ಸ್ವಾಮಿ ನರೇಂದ್ರ ಮೋದಿಗೆ ನಮೋ ಎಂದು ಮೋದಿ ಚಾಲಿಸಾ ಹಾಡಲಾಗುತ್ತದೆ. ದೇಗುಲದಲ್ಲಿ ಸದಾಕಾಲ ಉರಿಯುವ ನಂದಾದೀಪವನ್ನು ಇಡಲಾಗಿದ್ದು, ಮುಂದಿನ 125 ದಿನಗಳ ಕಾಲ ದೀಪವನ್ನು ಬೆಳಗಿಸಲಾಗುವುದು.
ಮೋದಿ ಪ್ರತಿಮೆ ಬಂದ ಮೇಲೂ ಶಿವ ಲಿಂಗವನ್ನು ನಿರ್ಲಕ್ಷಿಸಿಲ್ಲ. ಮೋದಿ ಅವರ ಆಯುರ್ ಆರೋಗ್ಯ ಐಶ್ವರ್ಯ ವೃದ್ಧಿಯಾದರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಗ್ರಾಮಸ್ಥರು ನಂಬಿದ್ದಾರೆ. ಮಹಾಮೃತ್ಯುಂಜಯ ಮಂತ್ರ ಹಾಡುವ ಮೂಲಕ ಮೋದಿ ಪ್ರಧಾನಿಯಾಗಲಿ ಎಂದು ಜನ ಹಾರೈಸಿದ್ದಾರೆ.












Click it and Unblock the Notifications