ತಂಬಾಕು ನಿಷೇಧ: ವೈದ್ಯರಿಗೆ ಬಿಜೆಪಿ ಎಂಪಿಯ ಸವಾಲು
ನವದೆಹಲಿ, ಏ 3: ಬಿಜೆಪಿ ನಾಯಕರ ಇತ್ತೀಚಿನ ಕೆಲವೊಂದು ಹೇಳಿಕೆಗಳು ಪಕ್ಷವನ್ನು ಮುಜುಗರಕ್ಕೀಡು ಮಾಡುವುದಲ್ಲದೇ, ವಿರೋಧ ಪಕ್ಷಗಳಿಗೂ ಸುಖಾಸುಮ್ಮನೆ ಆಹಾರವಾಗುತ್ತಿದೆ. ಈಗ ಆ ಪಟ್ಟಿಗೆ ಇನ್ನೊಂದು ಸೇರ್ಪಡೆಯಾಗಿದೆ.
ಧೂಮಪಾನಿಗಳಿಗೆ ಅದರಲ್ಲೂ ಪ್ರಮುಖವಾಗಿ ಚೈನ್ ಸ್ಮೋಕರುಗಳಿಗೆ ಕ್ಯಾನ್ಸರ್ ಬರುತ್ತೆ ಅನ್ನೋದಕ್ಕೆ ಏನಿದೆ ಪುರಾವೆ ಎಂದು ಹೇಳಿಕೆ ನೀಡಿ ಸಂಸದೀಯ ಕಮಿಟಿಯ ಮುಖ್ಯಸ್ಥ ಮತ್ತು ಅಹಮದ್ ನಗರ ಕ್ಷೇತ್ರದ ಬಿಜೆಪಿ ಸಂಸದ ದಿಲೀಪ್ ಕುಮಾರ್ ಗಾಂಧಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.
ಈಗ ಕಮಿಟಿಯ ಇನ್ನೊಬ್ಬ ಸದಸ್ಯ ಮತ್ತು ಅಲಹಾಬಾದ್ ಕ್ಷೇತ್ರದ ಬಿಜೆಪಿ ಸಂಸದ ಶ್ಯಾಮ್ ಚರಣ್ ಗುಪ್ತಾ ಮತ್ತೊಂದು ವಿವಾದಕಾರಿ ಹೇಳಿಕೆ ನೀಡಿ ಚರ್ಚಾಸ್ಪದ ವಿಷಯಕ್ಕೆ ನಾಂದಿ ಹಾಡಿದ್ದಾರೆ.
ಸಕ್ಕರೆಯಿಂದ ಮಧುಮೇಹ ಕಾಯಿಲೆ ಬರುತ್ತೆ, ಹಾಗಂತ ಸಕ್ಕರೆಯನ್ನು ನಿಷೇಧ ಮಾಡೋಕಾಗುತ್ತಾ ಎಂದು ಗುಪ್ತಾ ಹೇಳಿದ್ದಾರೆ. (ಬೀಡಿ, ಸಿಗರೇಟು, ಹೆಂಡಕ್ಕೆ ತೆರಿಗೆ ಕಟ್ಟಿಕಟ್ಟಿ ಸುಸ್ತಾಯ್ತಾ)

ತಂಬಾಕು ವಿರುದ್ದ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರಕಾರಕ್ಕೆ ಅವರದೇ ಪಕ್ಷದ ಸದಸ್ಯರು ಸಡ್ಡು ಹೊಡೆಯುವ ಹೇಳಿಕೆ ನೀಡುತ್ತಿರುವುದು, ಪಕ್ಷವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ.
ಸಿಗರೇಟು ಸೇದುವುದರಿಂದ ಕ್ಯಾನ್ಸರ್ ಬರುತ್ತದೆ ಎನ್ನುವುದಕ್ಕೆ ಭಾರತದ ವೈದ್ಯಕೀಯ ಇತಿಹಾಸದಲ್ಲಿ ಯಾವುದೇ ಪುರಾವೆಗಳಿಲ್ಲ. ಚೈನ್ ಸ್ಮೋಕರುಗಳಿಗೆ ಕ್ಯಾನ್ಸರ್ ಯಾಕೆ ಬರುತ್ತಿಲ್ಲ ಎಂದು ಭಾರತದ ವೈದ್ಯರು ಸ್ಪಷ್ಟ ಪಡಿಸಲಿ ಎಂದು ಶ್ಯಾಮ್ ಚರಣ್ ಗುಪ್ತಾ ಸವಾಲೆಸೆದಿದ್ದಾರೆ.
ಎನ್ಡಿಟಿವಿ ಜೊತೆ ಮಾತನಾಡುತ್ತಾ ಗುಪ್ತಾ, ತಂಬಾಕು ಕಂಪೆನಿಗಳನ್ನು ಅನಗತ್ಯವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ತಂಬಾಕು ಉತ್ಪನ್ನಗಳಿಂದ ಕ್ಯಾನ್ಸರ್ ಬರುತ್ತದೆ ಎನ್ನುವುದಕ್ಕೆ ಭಾರತೀಯ ವೈದ್ಯಕೀಯ ಸರ್ವೇಯಲ್ಲಿ ಎಲ್ಲೂ ಪುರಾವೆಗಳಿಲ್ಲ ಎಂದು ಗುಪ್ತಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. (ತಂಬಾಕು, ಬಿಡಿಬಿಡಿ ಸಿಗರೇಟ್ ಮಾರಾಟ ನಿಷೇಧ)
ಬೀಡಿ ಕಂಪೆನಿಯೊಂದರ ಮಾಲೀಕರೂ ಆಗಿರುವ ಗುಪ್ತಾ, ಬೀಡಿ ಕೈಯಿಂದ ತಯಾರಿಸುವ ಉತ್ಪನ್ನ. ನಾವು WHO (World Health Organization) ಸಂಸ್ಥೆಯ ಇಷ್ಟದಂತೆ ಕೆಲಸ ಮಾಡಲು ಸಾಧ್ಯವೇ ಎಂದು ಗುಪ್ತಾ ಪ್ರಶ್ನಿಸಿದ್ದಾರೆ.
ಖಾದರ್ ಖಂಡನೆ: ಸಂಸದ ದಿಲೀಪ್ ಗಾಂಧಿ ಮತ್ತು ಗುಪ್ತಾ ಹೇಳಿಕೆಗೆ ರಾಜ್ಯ ಆರೋಗ್ಯ ಸಚಿವ ಯು ಟಿ ಖಾದರ್ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಸಂಸದರ ಹೇಳಿಕೆ ಬೇಜವಾಬ್ದಾರಿತನದ್ದು.
ಅನೇಕ ಸಂಶೋಧನೆ ತಂಬಾಕಿನಿಂದ ಕ್ಯಾನ್ಸರ್ ಬರುತ್ತೆ ಎನ್ನುವುದನ್ನು ದೃಢಪಡಿಸಿದೆ. ನಾವು ಈ ಸಂಬಂಧ ಪ್ರಧಾನಿಯವರಿಗೆ ಪತ್ರ ಬರೆದಿದ್ದಾಗಿ ಖಾದರ್ ಹೇಳಿದ್ದಾರೆ.












Click it and Unblock the Notifications