Haryana Election: ಹರಿಯಾಣ ಸಿಎಂ ಆಗಿ ನಯಾಬ್ ಸೈನಿ ಪ್ರಮಾಣವಚನ; ನರೇಂದ್ರ ಮೋದಿ, ಅಮಿತ್ ಶಾ ಭಾಗಿ
ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶಗಳನ್ನೆಲ್ಲಾ ತಲೆಕೆಳಗು ಮಾಡಿದ್ದ ಬಿಜೆಪಿ ಹರಿಯಾಣದಲ್ಲಿ ಸತತ ಮೂರನೇ ಬಾರಿಗೆ ಸರ್ಕಾರ ರಚಿಸಲು ಸಜ್ಜಾಗಿದೆ. ಚುನವಾಣೆಗೆ 200 ದಿನಗಳ ಮೊದಲು ಸಿಎಂ ಆಗಿ ಮ್ಯಾಜಿಕ್ ಮಾಡಿದ್ದ ನಯಾಬ್ ಸಿಂಗ್ ಸೈನಿ, ಇದೀಗ ಮುಂದಿನ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಸಜ್ಜಾಗಿದ್ದು, ಇಂದು ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಪಂಚಕುಲದಲ್ಲಿ ನಡೆಯಲಿರುವ ಈ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಸಾ ಮಾತ್ರವಲ್ಲದೆ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು ಕೂಡ ಭಾಗವಹಿಸಲಿದ್ದು. ಹರ್ಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ 50,000 ಕ್ಕೂ ಹೆಚ್ಚಿನ ಜನ ಭಾಗವಹಿಸುವ ನಿರೀಕ್ಷೆ ಇದ್ದು, ಪಂಚಕುಲದಲ್ಲಿ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಾರ್ಯಕ್ರಮ ಸ್ಥಳದ ಸುತ್ತಮುತ್ತ ಟ್ರಾಫಿಕ್ ಹೆಚ್ಚುವ ಕಾರಣದಿಂದ, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಾರ್ವಜನಿಕರಿಗೆ ಸೂಚನೆ ಕೊಡಲಾಗಿದೆ.

ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾದ ನಂತರ ನಯಾಬ್ ಸಿಂಗ್ ಸೈನಿ ಅವರು ಹರಿಯಾಣದಲ್ಲಿ ಮುಂದಿನ ಸರ್ಕಾರ ರಚಿಸಲು ಬುಧವಾರ ಹಕ್ಕು ಮಂಡಿಸಿದ್ದರು. ಶಾಸಕ ಕ್ರಿಶನ್ ಕುಮಾರ್ ಬೇಡಿ ಸೈನಿ ಅವರ ಹೆಸರನ್ನು ಪ್ರಸ್ತಾಪಿಸಿದರು, ಹಿರಿಯ ನಾಯಕ ಅನಿಲ್ ವಿಜ್ ಹರಿಯಾಣ ಸಿಎಂ ಆಗುವ ಆಕಾಂಕ್ಷೆ ಹೊಂದಿದ್ದರೂ, ಬಿಜೆಪಿ ಗೆಲುವಿನಲ್ಲಿ ನಯಾಬ್ ಸಿಂಗ್ ಸೈನಿ ಪ್ರಮುಖ ಪಾತ್ರ ವಹಿಸಿದ್ದರಿಂದ, ಅವರನ್ನೇ ಎರಡನೇ ಬಾರಿಗೆ ಸಿಎಂ ಆಗಿ ಆಯ್ಕೆ ಮಾಡಲಾಗಿದೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಂದ್ರ ವೀಕ್ಷಕರಾಗಿ ಅಮಿತ್ ಶಾ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಭಾಗವಹಿಸಿದ್ದರು. ಕೇಂದ್ರ ಸಚಿವರಾದ ಮನೋಹರ್ ಲಾಲ್ ಖಟ್ಟರ್, ರಾವ್ ಇಂದರ್‌ಜಿತ್ ಸಿಂಗ್ ಮತ್ತು ಧರ್ಮೇಂದ್ರ ಪ್ರಧಾನ್ ಮತ್ತು ಬಿಜೆಪಿ ನಾಯಕರಾದ ಬಿಪ್ಲವ್ ದೇವ್ ಮತ್ತು ಮೋಹನ್ ಲಾಲ್ ಬಡೋಲಿ ಕೂಡ ಹಾಜರಿದ್ದರು.
ಸ್ವತಂತ್ರ ಶಾಸಕರು ಬೆಂಬಲ
ಚುನಾವಣೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎನ್ನಲಾಗಿತ್ತು. ಆದರೆ ಫಲಿತಾಂಶದ ದಿನ ಎಲ್ಲವೂ ತಲೆಕೆಳಗಾಗಿತ್ತು, 90 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ 48 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸರ್ಕಾರ ರಚನೆಗೆ ಬಹುಮತ ಪಡೆದುಕೊಂಡಿತು. ಹಿಸಾರ್‌ನ ಸಾವಿತ್ರಿ ಜಿಂದಾಲ್ ಸೇರಿದಂತೆ ಮೂವರು ಸ್ವತಂತ್ರ ಶಾಸಕರು ಕೂಡ ಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ. ಹರಿಯಾಣದಲ್ಲಿ ಸತತ ಮೂರನೇ ಬಾರಿ ಸರ್ಕಾರ ರಚನೆ ಮಾಡುವ ಮೂಲಕ ಇತಿಹಾಸ ರಚನೆ ಮಾಡಿದೆ.
ವಾಲ್ಮೀಕಿ ಜಯಂತಿಯಂದು ಪ್ರಮಾಣ ವಚನ
ನಯಾಬ್ ಸಿಂಗ್ ಸೈನಿ ಪ್ರಮಾಣ ವಚನಕ್ಕೆ ಮುನ್ನ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಗೌರವ ಸಲ್ಲಿಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, "ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಮತ್ತು ಎನ್‌ಡಿಎ ಹಿರಿಯ ನಾಯಕರು ಭಾಗವಹಿಸಲಿದ್ದು, ನಂತರ ಎನ್‌ಡಿಎ ನಾಯಕರ ಸಭೆ ನಡೆಯಲಿದೆ" ಎಂದು ಮಾಹಿತಿ ನೀಡಿದರು.












Click it and Unblock the Notifications