ಹಿಮಾಚಲ ಪ್ರದೇಶ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
ಶಿಮ್ಲಾ, ಅಕ್ಟೋಬರ್: ಹಿಮಾಚಲ ಪ್ರದೇಶದ ಉನಾದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಬೆಳಗ್ಗೆ ಚಾಲನೆ ನೀಡಿದರು. ಹಿಮಾಚಲ ಪ್ರದೇಶದ ಉನಾ ರೈಲು ನಿಲ್ದಾಣಕ್ಕೆ ಆಗಮಿಸಿದ ಮೋದಿ, ದೇಶದ ನಾಲ್ಕನೇ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಿಸಿದರು. ಹಿಮಾಚಲ ಪ್ರದೇಶದ ಅಂಬ್ ಅಂಡೌರಾ ಹಾಗೂ ರಾಷ್ಟ್ರ ರಾಜಧಾನಿ ದೆಹಲಿ ನಡುವೆ ಈ ರೈಲು ಸಂಚರಿಸಲಿದೆ.
ಈಗಿರುವ ರೈಲುಗಳಿಗೆ ಹೋಲಿಸಿದರೆ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹೆಚ್ಚು ಸುಧಾರಿತವಾಗಿದ್ದು, ತೂಕ ಕಡಿಮೆ ಇದೆ. ಅಲ್ಪ ಅವಧಿಯಲ್ಲಿ ಹೆಚ್ಚಿನ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಬಾಲಾ, ಚಂಡೀಗಢ, ಆನಂದಪುರ ಸಾಹಿಬ್ ಮತ್ತು ಉನಾದಲ್ಲಿ ರೈಲು ನಿಲ್ಲಲಿದೆ. ಬುಧವಾರ ಹೊರತುಪಡಿಸಿ, ವಾರದಲ್ಲಿ ಆರು ದಿನಗಳಲ್ಲಿ ವಂದೇ ಭಾರತ್ ರೈಲು ಸಂಚರಿಸಲಿದೆ. ಇದು ಕೇವಲ 52 ಸೆಕೆಂಡುಗಳಲ್ಲಿ ಗಂಟೆಗೆ 100 ಕಿ.ಮೀ ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿದೆ. ಈ ರೈಲಿನಿಂದ ಪ್ರವಾಸೋದ್ಯಮ ಹೆಚ್ಚಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚಾಲನೆ ನೀಡುವುದಕ್ಕೂ ಮುನ್ನ ಉನಾದ ಪೆಖುಬೆಲಾ ಹೆಲಿಪ್ಯಾಡ್‌ಗೆ ಆಗಮಿಸಿದ ಪ್ರಧಾನಿ ಮೋದಿಯನ್ನು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜನರು ಮೋದಿ ಪರ ಘೋಷಣೆಗಳನ್ನು ಕೂಗಿದರು.
ರಾಜ್ಯದ ಎರಡು ಜಿಲ್ಲೆಗಳಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮಾಡಿದ ನಂತರ ಎರಡು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ. ಉನಾ ಮತ್ತು ಚಂಬಾ ಜಿಲ್ಲೆಗಳಲ್ಲಿ ಸಭೆಗಳನ್ನು ಆಯೋಜಿಸಲಾಗಿದೆ.
ಕಳೆದ ಐದು ವರ್ಷಗಳಲ್ಲಿ ಹಿಮಾಚಲ ಪ್ರದೇಶಕ್ಕೆ ಮೋದಿಯ ಒಂಬತ್ತನೇ ಭೇಟಿ ಇದಾಗಿದೆ. ಈ ವರ್ಷದ ಕೊನೆಯಲ್ಲಿ ಹಿಮಾಚಲ ಪ್ರದೇಶದ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ನವ ಭಾರತವು ವೇಗವಾಗಿ ಬೆಳೆಯುತ್ತಿದೆ: ಮೋದಿ
ಉನಾದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 'ನವ ಭಾರತವು ಹಿಂದಿನ ಸವಾಲುಗಳನ್ನು ಎದುರಿಸಿ ಗೆಲ್ಲುತ್ತಿದೆ ಮತ್ತು ವೇಗವಾಗಿ ಬೆಳೆಯುತ್ತಿದೆ' ಎಂದು ತಿಳಿಸಿದ್ದಾರೆ.
'ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ನೀರು ಸರಬರಾಜು, ಆರೋಗ್ಯ ಹಾಗೂ ಡಿಜಿಟಲ್ ಮೂಲಸೌಕರ್ಯಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ' ಎಂದು ಹೇಳಿದ್ದಾರೆ.
'ಉನಾ ಹಾಗೂ ಹಿಮಾಚಲ ಪ್ರದೇಶಕ್ಕೆ ದೀಪಾವಳಿ ಹಬ್ಬವು ಬೇಗನೇ ಬಂದಂತಿದೆ. ಇಂದು ನಾನು ಹೊಸ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದೇನೆ. ಇದು ದೇಶದಲ್ಲಿ ಪರಿಚಯಿಸಲಾದ ನಾಲ್ಕನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು' ಎಂದು ಮೋದಿ ತಿಳಿಸಿದ್ದಾರೆ.
ರಾಜ್ಯದಲ್ಲೂ ವಂದೇ ಭಾರತ್ ರೈಲು: ಕೇಂದ್ರ ರೈಲ್ವೆ ಸಚಿವ
ಬೆಂಗಳೂರು ಹಾಗೂ ಧಾರವಾಡದ ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮುಂದಿನ ವರ್ಷದ ಮಾರ್ಚ್‌ನಲ್ಲಿ ಆರಂಭವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.












Click it and Unblock the Notifications