INDIA VS NDA: ವಿಪಕ್ಷಗಳ ಒಕ್ಕೂಟದ ಬಗ್ಗೆ ಮಾಯಾವತಿ ಹೇಳಿದ್ದೇನು?
ಲಖನೌ: ಕಾಂಗ್ರೆಸ್ ನೇತೃತ್ವದಲ್ಲಿ ಬಿಜೆಪಿ ವಿರುದ್ಧ ತೊಡೆತಟ್ಟಲು ವಿಪಕ್ಷ ನಾಯಕರು ಈಗ ಒಗ್ಗೂಡಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ನಿನ್ನೆ ನಡೆದ ಮಹತ್ವದ ಸಭೆ ಇಡೀ ದೇಶವೇ ತಿರುಗಿ ನೋಡುವಂತಾಗಿದೆ. ಇದೇ ಸಂದರ್ಭದಲ್ಲಿ ವಿಪಕ್ಷಗಳ ಒಕ್ಕೂಟದ ಕುರಿತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ರಿಯಾಕ್ಷನ್ ಕೊಟ್ಟಿದ್ದಾರೆ. ತಮ್ಮ ಮಾತಿನ ಮೂಲಕ ವಿಪಕ್ಷಗಳ ಒಕ್ಕೂಟಕ್ಕೆ ಬಿಸಿ ಮುಟ್ಟಿಸಿದ್ದಾರೆ.
2024ರ ಚುನಾವಣೆ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವ ವಿರೋಧ ಪಕ್ಷ ನಾಯಕರು, ನಿನ್ನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಭೆ ನಡೆಸಿದ್ದರು. ಈ ಸಭೆಯಲ್ಲಿ 'ಇಂಡಿಯಾ' (INDIA) ಒಕ್ಕೂಟ ಎಂದು ವಿಪಕ್ಷಗಳು ತಮ್ಮ ಒಕ್ಕೂಟಕ್ಕೆ ಮರು ನಾಮಕರಣ ಮಾಡಿವೆ. ವಿರೋಧ ಪಕ್ಷಗಳ ಒಕ್ಕೂಟದ ಬಗ್ಗೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಪ್ರತಿಕ್ರಿಯಿಸಿದ್ದಾರೆ. 'ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಮಾನ ಮನಸ್ಕ ಜಾತಿವಾದಿ ಹಾಗೂ ಬಂಡವಾಳಶಾಹಿ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದೆ. ಬಿಜೆಪಿ ಎನ್‌ಡಿಎ ಬಲಪಡಿಸುತ್ತಿದೆ. ಆದ್ರೆ ಅವರ ನೀತಿಗಳು ದಲಿತ ಹಾಗೂ ಮುಸ್ಲಿಂ ವಿರೋಧಿ' ಎಂದು ಮಾಯಾವತಿ ಗಂಭೀರ ಆರೋಪ ಮಾಡಿದ್ದಾರೆ.

ಬಿಎಸ್‌ಪಿ ಒಂಟಿಯಾಗಿದ್ದು ಏಕೆ ಗೊತ್ತಾ?
ಹಾಗೇ ವಿಪಕ್ಷಗಳ ಒಕ್ಕೂಟದ ವಿರುದ್ಧ ಮತ್ತಷ್ಟು ಆರೋಪ ಮಾಡಿರುವ ಬಿಎಸ್‌ಪಿ ವರಿಷ್ಠೆ 'ಈ ಪಕ್ಷಗಳು ಜನರ ಕಲ್ಯಾಣಕ್ಕೆ ಕೆಲಸ ಮಾಡಲ್ಲ. ದಲಿತರು, ಮುಸ್ಲಿಮರು, ಅಲ್ಪಸಂಖ್ಯಾತರ ಕಲ್ಯಾಣಕ್ಕೂ ಏನನ್ನೂ ಮಾಡಿಲ್ಲ. ಕಾಂಗ್ರೆಸ್ ಅಥವಾ ಬಿಜೆಪಿ ಎಲ್ಲರೂ ಒಂದೇ. ಅಧಿಕಾರಕ್ಕೆ ಬಂದ ಮೇಲೆ ಭರವಸೆ ಮರೆತುಬಿಡುತ್ತಾರೆ. ಜನತೆಗೆ ನೀಡಿದ ಒಂದೇ ಒಂದು ಭರವಸೆಯನ್ನೂ ಈಡೇರಿಸಿಲ್ಲ. ಬಿಎಸ್‌ಪಿ ವಿಪಕ್ಷಗಳೊಂದಿಗೆ ಕೈಜೋಡಿಸದಿರಲು ಇದೇ ದೊಡ್ಡ ಕಾರಣ' ಎಂದು ಮಾಯಾವತಿ ಮಹತ್ವ ಮಾಹಿತಿ ನೀಡಿದ್ದಾರೆ. ಮಾಯಾವತಿ ಅವರ ಹೇಳಿಕೆ ಉತ್ತರ ಪ್ರದೇಶ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.
'ಯುಪಿಎ' ದಿಢೀರ್ 'ಇಂಡಿಯಾ' ಆಗಿದ್ದೇಕೆ?
2024ರ ಲೋಕಸಭೆ ಚುನಾವಣೆ ಬಿಜೆಪಿ ನೇತೃತ್ವದ ಎನ್‌ಡಿಎ ಪಾಲಿಗೆ ಸುಲಭದ ತುತ್ತಾಗಿಲ್ಲ. ಅದರಲ್ಲೂ ಸಾಲು ಸಾಲು ವಿಧಾನಸಭೆ ಚುನಾವಣೆಗಳ ಸೋಲು ಬಿಜೆಪಿಯನ್ನೇ ಕಂಗೆಡಿಸಿದೆ. ಹೀಗಾಗಿ 2019ರಲ್ಲಿ ಬಿಟ್ಟು ಹೋಗಿದ್ದ ದೋಸ್ತಿಗಳನ್ನು ಮತ್ತೆ ಕರೆಸಿ ಸ್ನೇಹ ಮಾಡಿಕೊಳ್ಳುತ್ತಿದೆ ಎನ್‌ಡಿಎ. ಆದರೆ ಈ ಸಂದರ್ಭದಲ್ಲಿ ವಿರೋಧ ಪಕ್ಷಗಳಿಂದ ಹೊಸ ಅಸ್ತ್ರ ಪ್ರಯೋಗವಾಗಿದ್ದು ಹಿಂದೆ ಇದ್ದ 'ಯುಪಿಎ' ಒಕ್ಕೂಟದ ಪದವೇ ಬದಲಾಗಿದೆ. 'ಯುಪಿಎ' ಈಗ 'ಇಂಡಿಯಾ' ಆಗಿ ಬದಲಾಗುವ ಮೂಲಕ ಬಿಜೆಪಿಗೆ ದೊಡ್ಡ ಆಘಾತ ನೀಡಿದೆ. ನಿನ್ನೆ ಮಹತ್ವದ ಘೋಷಣೆಗೆ ನೆಲೆಯಾಗಿದ್ದು ನಮ್ಮ ಬೆಂಗಳೂರು ಅನ್ನೋದು ಮತ್ತೊಂದು ವಿಶೇಷ.
ಯಾವೆಲ್ಲಾ ಪಕ್ಷಗಳು 'ಇಂಡಿಯಾ' ಒಕ್ಕೂಟಕ್ಕೆ?
ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎಎಪಿ, ಜೆಡಿ(ಯು), ಆರ್‌ಜೆಡಿ, ಎನ್‌ಸಿಪಿ, ರಾಷ್ಟ್ರೀಯ ಲೋಕದಳ, ಜಮ್ಮು ಕಾಶ್ಮೀರ್ ನ್ಯಾಷನಲ್ ಕಾನ್ಫರೆನ್ಸ್, ಅಪ್ನಾ ದಳ್ (ಕಮೆರಾವಾಡಿ), ಎಸ್‌ಪಿ, ಶಿವಸೇನಾ (ಉದ್ಧವ್ ಠಾಕ್ರೆ), ಜೆಎಂಎಂ, ಪಿಡಿಪಿ, ಸಿಪಿಐ, ಸಿಪಿಐ (ಎಂ), ಸಿಪಿಐ (ಎಂಎಲ್), ರೆವೆಲ್ಯುಷನರಿ ಸೋಷಿಯಲಿಸ್ಟ್ ಪಾರ್ಟಿ, ಆಲ್ ಇಂಡಿಯಾ ಫಾರ್ವಡ್ ಬ್ಲಾಕ್, ಎಂಡಿಎಂಕೆ, ವಿಸಿಕೆ (ವಿಡುದಲೈ ಚಿರುತೈಗಳ್ ಕಚ್ಚಿ), ಕೆಎಂಡಿಕೆ (ಕೊಂಗುನಾಡು ಮಕ್ಕಳ್ ದೇಸಿಯಾ ಕಚ್ಚಿ), ಎಂಎಂಕೆ (ಮಣಿತನೆಯ ಮಕ್ಕಳ್ ಕಚ್ಚಿ), ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸೇರಿದಂತೆ ಕೇರಳ ಕಾಂಗ್ರೆಸ್ (ಮಣಿ) ಹಾಗೂ ಕೇರಳ ಕಾಂಗ್ರೆಸ್ (ಜೋಸೆಫ್) ಪಕ್ಷಗಳು 'ಇಂಡಿಯಾ' ಒಕ್ಕೂಟದ ಭಾಗವಾಗಲಿವೆ.

ಮುಂದಿನ ಸಭೆ ಮುಂಭೈನಲ್ಲಿ ಫಿಕ್ಸ್
ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಇಂದು ನಡೆದ ಮಹತ್ವದ ಸಭೆಯ ನಂತರ ವಿಪಕ್ಷಗಳಲ್ಲಿ ಹಲವು ನಿರ್ಣಯ ಕೈಗೊಳ್ಳಲಾಗಿದೆ. ಪ್ರಮುಖವಾಗಿ 11 ಜನರ ಸಮನ್ವಯ ಸಮಿತಿಯನ್ನೂ ರಚಿಸಲು ತೀರ್ಮಾನ ಮಾಡಲಾಗಿದೆ. ಹಾಗೇ ಮುಂದಿನ ಸಭೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆಯಲಿದೆ. ಮುಂಬೈ ಸಭೆಯಲ್ಲಿ ಸಮಿತಿ ಬಗ್ಗೆ ಅಂತಿಮ ಚರ್ಚೆ ನಡೆಸಿ, ಸಮಿತಿಯಲ್ಲಿ ಯಾರೆಲ್ಲಾ ಇರುತ್ತಾರೆ ಎಂಬುದನ್ನು ಹೇಳಲಾಗುವುದು ಅಂತಾ ಎಐಸಿಸಿ ಅಧ್ಯಕ್ಷರಾದ ಖರ್ಗೆ ತಿಳಿಸಿದ್ದಾರೆ. ಇದು ಮುಂಬರುವ ಲೋಕಸಭೆ ಚುನಾವಣೆ ಮೇಲಿನ ನಿರೀಕ್ಷೆಯನ್ನ ಡಬಲ್ ಮಾಡುತ್ತಿದೆ.












Click it and Unblock the Notifications