ಮಣಿಪುರದಲ್ಲಿ ಎನ್‌ಪಿಪಿಗೆ ಯಾರೂ ಬೆಂಬಲ ನೀಡಲ್ಲ: ಅಸ್ಸಾಂ ಸಿಎಂ
ಇಂಫಾಲ, ಫೆಬ್ರವರಿ 21: ಬಿಜೆಪಿ ಆಡಳಿತವಿರುವ ಮಣಿಪುರದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ ಹೆಚ್ಚು ಸ್ಥಾನವನ್ನು ಗಳಿಸುವ ಸಾಧ್ಯತೆಯನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಳ್ಳಿ ಹಾಕಿದ್ದಾರೆ. ಈಶಾನ್ಯ ಪ್ರದೇಶದಲ್ಲಿ ಬಿಜೆಪಿಯ ತಂತ್ರಗಾರ ಎಂದು ಕರೆಯಲ್ಪಡುವ ಹಿಮಂತ ಬಿಸ್ವಾ ಶರ್ಮಾ "ದೇಶದಲ್ಲಿ ಯಾರಿಗೂ ನ್ಯಾಷನಲ್ ಪೀಪಲ್ಸ್ ಪಾರ್ಟಿ ತಿಳಿದಿಲ್ಲ ಮತ್ತು ಮಣಿಪುರದಲ್ಲಿ ಯಾರೂ ಅದಕ್ಕೆ ಮತ ಹಾಕುವುದಿಲ್ಲ," ಎಂದಿದ್ದಾರೆ.
ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ನ್ಯಾಷನಲ್ ಪೀಪಲ್ಸ್ ಪಾರ್ಟಿ ಅಥವಾ ಎನ್‌ಪಿಪಿಯ ಮುಖ್ಯಸ್ಥರಾಗಿದ್ದಾರೆ ಎಂದು ಈ ಸಂದರ್ಭದಲ್ಲಿ ಸ್ಮರಿಸಬಹುದು. ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಈಗಾಗಲೇ ಕೆಲವು ಗೋವಾ, ಉತ್ತರಾಖಂಡ, ಪಂಜಾಬ್‌ನಲ್ಲಿ ಚುನಾವಣೆ ನಡೆದಿದೆ. ಇನ್ನು ಉತ್ತರ ಪ್ರದೇಶದಲ್ಲಿ ಇನ್ನೂ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬಿಜೆಪಿ ನೇತೃತ್ವದ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟದ ಸಂಚಾಲಕರಾಗಿದ್ದಾರೆ. ಈ ಹಿಂದೆ ಮಣಿಪುರ ಸರ್ಕಾರದಲ್ಲಿ ಬಿಜೆಪಿಯ ಕಾರಣದಿಂದಾಗಿ ಎನ್‌ಪಿಪಿಯಿಂದ ಮಂತ್ರಿಗಳನ್ನು ಆಯ್ಕೆ ಮಾಡಲಾಯಿತು ಎಂದು ಕೂಡಾ ಹೇಳಿದರು.

ಬಿಜೆಪಿ ಸ್ವಂತವಾಗಿ ಸರ್ಕಾರ ರಚಿಸುತ್ತದೆ ಎಂದ ಅಸ್ಸಾಂ ಸಿಎಂ
"ಎನ್‌ಪಿಪಿಗೆ ಕೇಂದ್ರದಲ್ಲಿ ಯಾವುದೇ ಸರ್ಕಾರವಿಲ್ಲ. ನೀವು ಎನ್‌ಪಿಪಿ ಮೂಲಕ ಕೇಂದ್ರ ಸರ್ಕಾರಕ್ಕೆ ಏಕೆ ಹೋಗುತ್ತೀರಿ? ನೀವು ಮಣಿಪುರದಲ್ಲಿ ಬಿಜೆಪಿ ಸರ್ಕಾರವನ್ನು ಸ್ಥಾಪಿಸಿದರೆ, ನೀವು ನೇರವಾಗಿ ಹೋಗಬಹುದು," ಎಂದು ಮಣಿಪುರದ ಚುನಾವಣಾ ರ್‍ಯಾಲಿಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ಮಣಿಪುರ ಚುನಾವಣೆಯ ನಂತರ ಬಿಜೆಪಿ ಸ್ವಂತವಾಗಿ ಸರ್ಕಾರ ರಚಿಸುತ್ತದೆ ಮತ್ತು ಎನ್‌ಪಿಪಿಗೆ ಸ್ಥಾನವಿಲ್ಲ ಎಂದು ಕೂಡಾ ತಿಳಿಸಿದ್ದಾರೆ.
ಮೊಯಿರಾಂಗ್‌ನಲ್ಲಿ ಬಿಜೆಪಿಯ ಮೈರೆಂಬಮ್ ಪೃಥ್ವಿರಾಜ್ ಸಿಂಗ್ ಅವರು ಕಾಂಗ್ರೆಸ್‌ನ ಪುಖ್ರೆಮ್ ಶರತ್‌ಚಂದ್ರ ಸಿಂಗ್ ಮತ್ತು ಎನ್‌ಪಿಪಿಯ ತೊಂಗಮ್ ಶಾಂತಿ ಸಿಂಗ್ ಅವರೊಂದಿಗೆ ತ್ರಿಕೋನ ಸ್ಪರ್ಧೆಯಲ್ಲಿದ್ದಾರೆ. ಇನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕಾಂಗ್ರೆಸ್ ಅನ್ನು ಅದರ ನೀತಿಗನ್ನು ಟೀಕೆ ಮಾಡಿದ್ದಾರೆ. "ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ತ್ರಿಪುರಾದಲ್ಲಿ ಬಿಜೆಪಿ ತನ್ನದೇ ಆದ ಸರ್ಕಾರಗಳನ್ನು ಹೊಂದಿದೆ ಮತ್ತು ಮಣಿಪುರದಲ್ಲಿ ಪಕ್ಷವು ಎರಡನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲಿದೆ," ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು. ಇನ್ನು ಎನ್‌ಪಿಪಿ ಮುಖ್ಯಸ್ಥ, ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ತಮ್ಮ ಪಕ್ಷವು ರಾಜ್ಯದಲ್ಲಿ ಏಕೈಕ ದೊಡ್ಡ ಪಕ್ಷವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಕಳೆದ ಗುರುವಾರ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮಹಿಳೆಯರು ಹಾಗೂ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ಸಿದ್ಧಪಡಿಸಿದೆ. ಬಡ ಮಹಿಳೆಯರಿಗೆ ಎರಡು ಉಚಿತ ಅಡುಗೆ ಅನಿಲ ಸಿಲಿಂಡರ್, ಎಲ್ಲರಿಗೂ ಉಚಿತ ಸ್ಕೂಟಿ ಭರವಸೆ ನೀಡಲಾಗಿದೆ. ಪ್ರತಿಭಾವಂತ ಕಾಲೇಜು ವಿದ್ಯಾರ್ಥಿನಿಯರು ಅಥವಾ ಬಡ ಹೆಣ್ಣುಮಕ್ಕಳಿಗೆ 25 ಸಾವಿರ ಪ್ರೋತ್ಸಾಹಧನ ಮತ್ತು 12ನೇ ತರಗತಿಯಲ್ಲಿ ಉತ್ತೀರ್ಣರಾದ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡುವುದಾಗಿ ತಿಳಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಈ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಯುವಕರ ಕೌಶಲ್ಯವನ್ನು ಹೆಚ್ಚಿಸಲು ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಭರವಸೆಯನ್ನು ಬಿಜೆಪಿ ನೀಡಿದೆ. ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ಮತ್ತು ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.
ಎಲ್ಲಾ ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿಯನ್ನು 200 ರೂನಿಂದ 1 ಸಾವಿರಕ್ಕೆ ಏರಿಕೆ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನೀಡಲಾಗುವ ಹಣವನ್ನು 6 ರಿಂದ 8 ಸಾವಿರಕ್ಕೆ ಹೆಚ್ಚಳ ಮಾಡಲಾಗುವುದು ಎಂದು ಕೂಡಾ ಪ್ರಣಾಳಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications