ಮಲ್ಲಿಕಾರ್ಜುನ ಖರ್ಗೆಗಿಲ್ಲ ವಿಪಕ್ಷ ನಾಯಕ ಭಾಗ್ಯ
ನವದೆಹಲಿ, ಜೂನ್ 10: ಕರ್ನಾಟಕದ ಮಟ್ಟಿಗೆ ಇದು ನಿರಾಶಾದಾಯಕ ಸುದ್ದಿ. ಉತ್ತರ ಕರ್ನಾಟಕದ ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆ ಅವರ ಅಖಂಡ ನಿಷ್ಠೆಯನ್ನು ಮೆಚ್ಚಿ ಪಕ್ಷವು ಲೋಕಸಭೆಯಲ್ಲಿ ಅವರನ್ನು ತನ್ನ ನಾಯಕನನ್ನಾಗಿ ಆರಿಸಿಕೊಂಡಿದ್ದರೂ ಅವರಿಗೆ ವಿರೋಧ ಪಕ್ಷದ ಸಾರಥ್ಯ ವಹಿಸುವ ಅವಕಾಶ ತಪ್ಪಿದೆ. Rather ಅದಕ್ಕೆ ಅವಕಾಶವೇ ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷ ಒಂದು ಚಾನ್ಸ್ ತೆಗೆದುಕೊಂಡು ಖರ್ಗೆ ಅವರನ್ನು ಹೆಸರಿಸಿತ್ತು ಅಷ್ಟೇ!
ಏಕೆಂದರೆ ಮೋದಿ ಸುನಾಮಿಗೆ ಪ್ರತಿಪಕ್ಷಗಳು ಹೇಳಹೆಸರಿಲ್ಲದಂತೆ ನೆಲಕಚ್ಚಿದ್ದವು. ಕೊನೆಗೆ ಪುರಾತನ ಕಾಂಗ್ರೆಸ್ ಪಕ್ಷವೂ 44ಕ್ಕಿಂತ ಹೆಚ್ಚು ಸೀಟು ಗಳಿಸಲು ವಿಫಲವಾಗಿತ್ತು. ಆದರೆ ಲೀಡರ್ ಆಫ್ ಅಪೊಸಿಷನ್ ಪ್ರಾಪ್ತಿಯಾಗಲು ಆಡಳಿತ ಪಕ್ಷವನ್ನು ಬಿಟ್ಟು ಉಳಿದ ಯಾವುದೇ ಪಕ್ಷ ಕನಿಷ್ಠ 54 ಸೀಟು ಗೆದ್ದಿರಲೇಬೇಕು. ಹಾಗಾಗಿ ಕಾಂಗ್ರೆಸ್ಸು 10 ಸ್ಥಾನಗಳಿಂದ ಹಿಂದುಳಿದಿದೆ. ಜಯಲಲಿತಾರ ಅಣ್ಣಾ ಡಿಎಂಕೆ 37 ಸಂಸದರನ್ನು ಹೊಂದಿದ್ದು, ಮೂರನೆಯ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಈ ಹಿಂದೆಯೂ ಇಂತಹುದೆ ಪರಿಸ್ಥಿತಿ ಉದ್ಭವಿಸಿತ್ತು. 1984ರಲ್ಲಿ ಇಂದಿರಾ ಗಾಂಧಿ ಹತ್ಯೆಯ ಅನುಕಂಪದಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ 404 ಸ್ಥಾನಗಳನ್ನು ಬಾಚಿಕೊಂಡಾಗ ಸಿಪಿಐ 22 ಸದಸ್ಯರೊಂದಿಗೆ ಎರಡನೆಯ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಮೊದಲ ಮೂರು ಲೋಕಸಭೆಗಳು, 5, 7 ಮತ್ತು 8ನೇ ಲೋಕಸಭೆಗಳಲ್ಲೂ ಪ್ರತಿಪಕ್ಷದ ನಾಯಕರಿರಲಿಲ್ಲ. ಇದನ್ನೇ ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ಸಿಗೆ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ನೀಡದಿರಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಖರ್ಗೆಗಿಲ್ಲ ವಿಪಕ್ಷ ನಾಯಕ ಸಾರಥ್ಯ:
ಹಾಲಿ 16ನೇ ಲೋಕಸಭೆಯಲ್ಲಿ ಬಿಜೆಪಿ ಅಭೂತಪೂರ್ವ ಸ್ಥಾನಗಳ ಮೇಲಾಟ (ಬಿಜೆಪಿ 282, ಎನ್ ಡಿಎ ಮೈತ್ರಿಕೂಟ 336 ಸಂಸದರು) ನಡೆಸಿರುವಾಗ ಬೇರೆ ಯಾವುದೇ ಪಕ್ಷದ ನಾಯಕನನ್ನೂ ವಿಪಕ್ಷದ ನಾಯಕ ಎಂದು ಪರಿಗಣಿಸದಿರಲು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಪ್ರಧಾನಿ ಮೋದಿ ಜತೆ ಚರ್ಚಿಸಿ, ಎಲ್ಲ ಸಾಧಕ ಬಾಧಕಗಳನ್ನೂ ಪರಿಗಣಿಸಿ ಸ್ಪೀಕರ್ ಸುಮಿತ್ರಾ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. (ಕಾಂಗ್ರೆಸ್ಸಿಗೆ ವಿರೋಧ ಪಕ್ಷದ ಸ್ಥಾನಮಾನವೂ ಇಲ್ಲ!)
ಇದರಿಂದ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿ ಮುಂದುವರಿಯುತ್ತಾರೆಯೇ ಹೊರತು ವಿರೋಧ ಪಕ್ಷದ ನಾಯಕರಾಗಲು ಅವರಿಗೆ ಅವಕಾಶ ಇಲ್ಲದಾಗಿದೆ. ತತ್ಫಲವಾಗಿ, ಅವರಿಗೆ ಯಾವುದೇ ಫಲ ಪ್ರಾಪ್ತಿಯಾಗುವುದಿಲ್ಲ. ಅಂದರೆ ಸಚಿವ ಸ್ಥಾನಮಾನ, ಸಂಬಳ, ಸವಲತ್ತು, ಭತ್ಯೆಗಳು ಅವರಿಗೆ ಪಾಲಿಗೆ ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಅಂದಹಾಗೆ 15ನೇ ಲೋಕಸಭೆಯಲ್ಲಿ ಬಿಜೆಪಿಯ ಹಿರಿಯ ನಾಯಕಿ ಸುಷ್ಮನಾ ಸ್ವರಾಜ್ ಅವರು ವಿರೋಧ ಪಕ್ಷದ ನಾಯಕಿಯಾಗಿದ್ದರು.












Click it and Unblock the Notifications