ಮಹಾರಾಷ್ಟ್ರ ಭೂಕುಸಿತ: 30ಕ್ಕೂ ಹೆಚ್ಚು ಕುಟುಂಬ ಸಿಲುಕಿರುವ ಶಂಕೆ, 4 ಸಾವು, ಮುಂದುವರಿದ ರಕ್ಷಣಾ ಕಾರ್ಯ
ಮುಂಬೈ, ಜುಲೈ 20: ಮಹಾರಾಷ್ಟ್ರ ರಾಜ್ಯದ ರಾಯಗಢ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ಭೂಕುಸಿತ ಸಂಭವಿಸಿದೆ. ಪರಿಣಾಮವಾಗಿ ಘಟನೆಯಲ್ಲಿ 30ಕ್ಕೂ ಹೆಚ್ಚು ಕುಟುಂಬಗಳು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ನಾಲ್ಕು ಮಂದಿ ಮೃತಪಟ್ಟ ಬಗ್ಗೆ ಎಎನ್‌ಐ ವರದಿ ಮಾಡಿದೆ.
ರಾಯಗಢ ಜಿಲ್ಲೆಯ ಖಲಾಪುರ ಬಳಿ ಈ ಭೂಕುಸಿತ ಸಂಭವಿಸಿದೆ. ಇಲ್ಲಿ ಸಾಕಷ್ಟು ಬುಡಕಟ್ಟು ಜನಾಂಗದ ಮನೆಗಳು ಇವೆ ಎಂದು ತಿಳಿದು ಬಂದಿದೆ. ಇರುವ ಖಲಾಪುರ ಬಳಿ ಈ ಘಟನೆ ನಡೆದಿದೆ. ಘಟನೆ ಜರುಗಿದಾಗಿನಿಂದ ಗುರುವಾರ ಬೆಳಗ್ಗೆವರೆಗೆ ಸುಮಾರು 25 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಒಟ್ಟು ನಾಲ್ವರು ಅಸುನೀಗಿದ್ದು, ಉಳಿದ 21 ಮಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ನಂತರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಎರಡು ತಂಡಗಳು ಸ್ಥಳಕ್ಕೆ ಧಾವಿಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿವೆ. ಭರದಿಂದ ಸಾಗಿರುವ ರಕ್ಷಣೆ ಕಾರ್ಯದಲ್ಲಿ ಪಾಲ್ಗೊಳ್ಳಲು ಇನ್ನೂ ಎರಡು ತಂಡಗಳು ಮುಂಬೈನಿಂದ ಖಲಾಪುರಕ್ಕೆ ಆಗಮಿಸಲಿವೆ.
ಈ ಅವಘಡ ಸಂಭವಿಸಿದ್ದು ರಾತ್ರಿ ಹೀಗಾಗಿ ಅದರ ತೀವ್ರತೆ, ಪರಿಣಾಮ ಬಗ್ಗೆ ನಿಖರವಾಗಿ ತಿಳಿದು ಬಂದಿಲ್ಲ. ಗುರುವಾರ ಹಗಲು ಸ್ಥಳಕ್ಕೆ ಬಂದಾಗ ಘಟನಾ ಸ್ಥಳದಲ್ಲಿನ ಸ್ಥಿತಿ ಗತಿ ಕಲ್ಪನೆ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

100 ಕ್ಕೂ ಹೆಚ್ಚು ಜನರಿಂದ ರಕ್ಷಣಾ ಕಾರ್ಯ
ಪ್ರಸ್ತುತ ಪೊಲೀಸ್ ಮತ್ತು ಜಿಲ್ಲಾಡಳಿತದಿಂದ 100 ಕ್ಕೂ ಹೆಚ್ಚು ಜನರು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ನಾವು ಎನ್‌ಡಿಆರ್‌ಎಫ್ ಹಾಗೂ ಸ್ಥಳೀಯರು ಮತ್ತು ಕೆಲವು ಸರ್ಕಾರೇತರ ಸಂಸ್ಥೆಗಳಿಂದ (NGO) ಸಹಾಯ ಪಡೆಯುತ್ತಿದ್ದೇವೆ ಎಂದು ರಾಯಗಢ ಪೊಲೀಸರು ಎಎನ್‌ಐಗೆ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಅತ್ಯಧಿಕ ಮಳೆ ದಾಖಲಾಗಿದೆ. ಇಂದು ಸಹ ಕೆಲವು ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ. ರಾಯಗಡ ಜಿಲ್ಲೆಯ ಆರು ಪ್ರಮುಖ ನದಿಗಳ ಪೈಕಿ ಎರಡು ನದಿಗಳಾದ ಸಾವಿತ್ರಿ ಮತ್ತು ಪಾತಾಳಗಾನಗಾ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕುಂಡಲಿಕಾ ಮತ್ತು ಅಂಬಾ ನದಿಗಳು ಎಚ್ಚರಿಕೆ ಮಟ್ಟ ಮೀರಿವೆ. ಗಧಿ ಮತ್ತು ಉಲ್ಲಾಸ್ ನದಿಗಳು ಸಹ ಅಪಾರ ಮಟ್ಟ ತಲುಪುತ್ತಿವೆ.
ಭಾರತೀಯ ಹವಾಮಾನ ಇಲಾಖೆ (IMD) ಮುಂಬೈ, ರಾಯಗಢ ಮತ್ತು ಪಾಲ್ಘರ್ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಒಂದೆಡೆ ನದಿ ಹರಿವು ಹೆಚ್ಚಾಗಿದ್ದರೆ ಮತ್ತೊಂದೆಡೆ ಮಳೆಯು ಸಹ ನಿಲ್ಲದಾಗಿದೆ. ಈ ಸಂಬಂಧ ಜಿಲ್ಲಾಡಳಿತ ಮತ್ತು ಸರ್ಕಾರಗಳು ಅಗತ್ಯ ಮುನ್ನೆಚ್ಚರಿಕೆ ವಹಿಸಿವೆ ಎನ್ನಲಾಗಿದೆ.
ಮಹಾರಾಷ್ಟ್ರ ರಾಜ್ಯದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ NDRF 12 ತಂಡಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಮುಂಬೈನಲ್ಲಿ ಐದು ತಂಡಗಳು ಮತ್ತು ಪಾಲ್ಘರ್, ರಾಯಗಡ, ರತ್ನಗಿರಿ, ಕೊಲ್ಲಾಪುರ, ಸಾಂಗ್ಲಿ, ನಾಗ್ಪುರ ಮತ್ತು ಥಾಣೆಯಲ್ಲಿ ತಲಾ ಒಂದೊಂದು ತಂಡಗಳು ನಿಯೋಜನೆಗೊಂಡಿವೆ.
ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಬೈನ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಗುರುವಾರ ಸಾರ್ವತ್ರಿಕ ರಜೆ ಘೋಷಿಸಲಾಗಿದೆ ಎಂದು ವರದಿ ಆಗಿದೆ.












Click it and Unblock the Notifications