Maharashtra Assembly Election 2024: ವರ್ಲಿ ಚುನಾವಣಾ ಕಣ, ಮಿಲಿಂದ್ ದಿಯೋರಾ V/S ಆದಿತ್ಯ ಠಾಕ್ರೆ
ಮುಂಬೈ, ಅಕ್ಟೋಬರ್ 26: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024ರ ವೇಳಾಪಟ್ಟಿ ಘೋಷಣೆಯಾಗಿದೆ. ಮಹಾವಿಕಾಸ್ ಅಘಾಡಿ (ಎಂವಿಎ) ಮತ್ತು ಮಹಾಯತಿ ಮೈತ್ರಿಕೂಟದ ಸೀಟು ಹಂಚಿಕೆ ಮುಗಿದು ಅಭ್ಯರ್ಥಿಗಳ ಘೋಷಣೆಯಾಗುತ್ತಿದೆ. ರಾಜ್ಯದ 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 146.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳು ಭಾರೀ ಕುತೂಹಲಕ್ಕೆ ಕಾರಣವಾಗಿವೆ. ಇದರಲ್ಲಿ ಮುಂಬೈನ ವರ್ಲಿ ಕ್ಷೇತ್ರ ಸಹ ಒಂದಾಗಿದೆ. ಶಿವಸೇನೆ (ಏಕನಾಥ್ ಶಿಂಧೆ ಬಣ)ಯಿಂದ ಕ್ಷೇತ್ರಕ್ಕೆ ಮಿಲಿಂದ್ ದಿಯೋರಾ ಅಭ್ಯರ್ಥಿ. ಶಿವ ಸೇನೆ (ಉದ್ಧವ್ ಠಾಕ್ರೆ ಬಣ)ಯಿಂದ ಆದಿತ್ಯ ಠಾಕ್ರೆ ಅಭ್ಯರ್ಥಿ. ಆದ್ದರಿಂದ ಈ ಕ್ಷೇತ್ರ ಕುತೂಹಲವನ್ನು ಮೂಡಿಸಿದೆ.

ಕೇಂದ್ರದ ಮಾಜಿ ಸಚಿವ ಮಿಲಿಂದ್ ದಿಯೋರಾ ಕಾಂಗ್ರೆಸ್ ಬಿಟ್ಟು ಶಿವಸೇನೆ ಸೇರಿದ್ದವರು. ಅವರು ಹಾಲಿ ರಾಜ್ಯಸಭಾ ಸದಸ್ಯರು. ಮುಂಬೈ ದಕ್ಷಿಣದಿಂದ ಅವರು ಮೂರು ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಹಾಲಿ ರಾಜ್ಯಸಭಾ ಸದಸ್ಯರನ್ನು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕಣಕ್ಕಿಳಿಸುವ ಮೂಲಕ ಚುನಾವಣೆ ಕಾವು ಏರಿಸಲು ಶಿವಸೇನೆ (ಏಕನಾಥ್ ಶಿಂಧೆ ಬಣ) ತಯಾರಾಗಿದೆ.
ನಾಮಪತ್ರ ಸಲ್ಲಿಕೆ: ಆದಿತ್ಯ ಠಾಕ್ರೆ ಅಭ್ಯರ್ಥಿ ನವೆಂಬರ್ 20ರಂದು ನಡೆಯುವ ಚುನಾವಣೆಗೆ ಶಿವ ಸೇನೆ (ಉದ್ಧವ್ ಠಾಕ್ರೆ ಬಣ)ದಿಂದ ವರ್ಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ ಮರುದಿನ ಶಿವಸೇನೆ (ಏಕನಾಥ್ ಶಿಂಧೆ ಬಣ ಮಿಲಿಂದ್ ದಿಯೋರಾ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. 2024ರ ಲೋಕಸಭೆ ಚುನಾವಣೆಯಲ್ಲಿಯೂ ವರ್ಲಿ ಕ್ಷೇತ್ರದ ಉಸ್ತುವಾರಿಯನ್ನು ಮಿಲಿಂದ್ ದಿಯೋರಾಗೆ ಪಕ್ಷ ವಹಿಸಿತ್ತು.
ರಾಜಸ್ಥಾನದಲ್ಲಿ ಜನಿಸಿದ 47 ವರ್ಷದ ಮಿಲಿಂದ್ ದಿಯೋರಾ ಕೇಂದ್ರ ಸರ್ಕಾರದಲ್ಲಿ ಹಲವು ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಯುಪಿಎ-2 ಪ್ರಧಾನಿ ಮನಮೋಹನ್ ಸಿಂಗ್ ಸಂಪುಟದಲ್ಲಿ ಅವರು ಮಾಹಿತಿ & ಸಂವಹನ ಖಾತೆ ರಾಜ್ಯ ಸಚಿವರಾಗಿ, ಬಂದರು ಖಾತೆಯ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
27ನೇ ವರ್ಷಕ್ಕೆ ಸಂಸತ್ ಪ್ರವೇಶ ಮಾಡಿದ ಮಿಲಿಂದ್ ದಿಯೋರಾ ಅತಿ ಚಿಕ್ಕ ವಯಸ್ಸಿನ ಸಂಸದ ಎಂಬ ಹೆಗ್ಗಳಿಕೆ ಪಡೆದಿದ್ದರು. ಪ್ರತಿಷ್ಠಿತ ಮುಂಬೈ ದಕ್ಷಿಣ ಕ್ಷೇತ್ರದಿಂದ ಅವರು 14 ಮತ್ತು 15ನೇ ಲೋಕಸಭೆಗೆ ಆಯ್ಕೆಯಾಗಿದ್ದರು.
ಮುಂಬೈ ನಗರದ ಹಲವು ಅಭಿವೃದ್ಧಿ ಕಾರ್ಯಗಳು, ಸಾರ್ವಜನಿಕ ಶೌಚಾಲಯಗಳ ನಿರ್ಮಾಣ, ಆರೋಗ್ಯ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ತಂದಿದ್ದಾರೆ. ಮಿಲಿಂದ್ ದಿಯೋರಾ ತಂದೆ ಮುರಳಿ ದಿಯೋರಾ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿದ್ದರು. ಮುಂಬೈ ಪ್ರಾದೇಶಿಕ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಅತಿ ಹೆಚ್ಚು ವರ್ಷ ಕಾರ್ಯ ನಿರ್ವಹಣೆ ಮಾಡಿದ ಹೆಗ್ಗಳಿಕೆ ಅವರದ್ದು.
ಮುಂಬೈ ಮೇಯರ್ ಆಗಿ ಸಂಸತ್‌ನ ಉಭಯ ಸದನಗಳ ಸದಸ್ಯರಾಗಿಯೂ ಅವರು ಕಾರ್ಯ ನಿರ್ವಹಣೆ ಮಾಡಿದ್ದಾರೆ. ಮಿಲಿಂದ್ ದಿಯೋರಾ ಜನವರಿ 14, 2024ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದರು. ಆ ಮೂಲಕ ಪಕ್ಷದೊಂದಿಗಿನ ಅವರ, ಕುಟುಂಬದ ಸಂಬಂಧ ಕೊನೆಗೊಂಡಿತು. ಬಳಿಕ ಅವರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾದರು.
ಆದಿತ್ಯ ಠಾಕ್ರೆ ಹೊರತಾಗಿಯೂ ವರ್ಲಿ ಕ್ಷೇತ್ರದಲ್ಲಿ ಶಿವ ಸೇನೆ (ಉದ್ಧವ್ ಠಾಕ್ರೆ ಬಣ) 6500 ಮತಗಳ ಮುನ್ನಡೆಯನ್ನು ಹೊಂದಿದೆ. ಆದಿತ್ಯ ಠಾಕ್ರೆ ಮತ್ತು ಮಿಲಿಂದ್ ದಿಯೋರಾಗೆ ಕ್ಷೇತ್ರದಲ್ಲಿ ಎಂಎನ್‌ಎಸ್‌ನ ಸಂದೀಪ್ ದೇಶಪಾಂಡೆ ಎದುರಾಳಿಯಾಗಿದ್ದಾರೆ.












Click it and Unblock the Notifications