ತೆಲಂಗಾಣ ಉಪ ಮುಖ್ಯಮಂತ್ರಿಯಾಗಿ ಭಟ್ಟಿ ವಿಕ್ರಮಾರ್ಕ ಮಲ್ಲು, ಯಾರು ಈತ, ಇವರ ಹಿನ್ನೆಲೆ ತಿಳಿಯಿರಿ?
ಹೈದರಾಬಾದ್, ಡಿಸೆಂಬರ್ 7: ತೆಲಂಗಾಣ ಉಪ ಮುಖ್ಯಮಂತ್ರಿಯಾಗಿ ಭಟ್ಟಿ ವಿಕ್ರಮಾರ್ಕ ಮಲ್ಲು ಗುರುವಾರ (ಡಿಸೆಂಬರ್ 7) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರಿಗಿಂತ ಮೊದಲು ರೇವಂತ್ ರೆಡ್ಡಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಕರ್ನಾಟಕ ಮಾದರಿ ಕ್ಯಾಬಿನೆಟ್‌ಗೆ ಮುನ್ನಡಿ ಬರೆದಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ತೆಲಂಗಾಣ ಚುನಾವಣೆಯಲ್ಲಿ ಖಮ್ಮಂ ಜಿಲ್ಲೆಯ ಮಧಿರಾ ವಿಧಾನಸಭಾ ಕ್ಷೇತ್ರದಿಂದ 35,452 ಮತಗಳಿಂದ ಜಯಗಳಿಸಿದ ಭಟ್ಟಿ, ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಚೊಚ್ಚಲ ವಿಜಯವನ್ನು ದಾಖಲಿಸಿದ ನಂತರ ಇಂದು ಉಪನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಭಟ್ಟಿ ವಿಕ್ರಮಾರ್ಕ ಯಾರು?
ಖಮ್ಮಂ ಜಿಲ್ಲೆಯ ವೈರಾ ಮಂಡಲದ ಸ್ನಾನಲ ಲಕ್ಷ್ಮೀಪುರಂ ಗ್ರಾಮದಲ್ಲಿ ಜೂನ್ 15, 1961 ರಂದು ಜನಿಸಿದ ಭಟ್ಟಿ ವಿಕ್ರಮಾರ್ಕ ಮಲ್ಲು ಅವರು ಮಧಿರಾ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು 2009, 2014, 2018, ಮತ್ತು 2023 ರ ಚುನಾವಣೆಗಳಲ್ಲಿ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದರು.
2007ರಲ್ಲಿ ಖಮ್ಮಂ ಜಿಲ್ಲೆಯಿಂದ ಎಂಎಲ್‌ಸಿಯಾಗಿ ಗೆದ್ದಿದ್ದರು. ಅವರು 2009 ಮತ್ತು 2011 ರ ನಡುವೆ ಆಂಧ್ರಪ್ರದೇಶ ಸರ್ಕಾರದ ಮುಖ್ಯ ಸಚೇತಕರಾಗಿದ್ದರು. ಭಟ್ಟಿ ಅವರು 2011 ರಿಂದ 2014 ರವರೆಗೆ ಆಂಧ್ರ ಪ್ರದೇಶ ವಿಧಾನಸಭೆಯ ಉಪ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದಾರೆ.
ಭಟ್ಟಿ ವಿಕ್ರಮಾರ್ಕ ಮಲ್ಲು ತಂದೆ ಅಖಂಡ ಮತ್ತು ತಾಯಿ ಮಲ್ಲು ಮಾಣಿಕ್ಯಂ. ಅವರ ಸ್ಥಳೀಯ ಗ್ರಾಮ ವೈರಾ ಮಂಡಲದ (ಖಮ್ಮಂ ಜಿಲ್ಲೆ) ಸ್ನಾನಲ ಲಕ್ಷ್ಮೀಪುರಂ. ಅವರು ಹೈದರಾಬಾದ್‌ನ ನಿಜಾಮ್ ಕಾಲೇಜಿನಲ್ಲಿ ಪದವಿ ಮತ್ತು ಹೈದರಾಬಾದ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರಿಗೆ ಇಬ್ಬರು ಸಹೋದರರು, ಎ ಆರ್ ಮಲ್ಲು ಮತ್ತು ಮಾಜಿ ಸಂಸದರಾಗಿರುವ ಮಲ್ಲು ರವಿ. ಮಲ್ಲು ಭಟ್ಟಿ ವಿಕ್ರಮಾರ್ಕ ಅವರು ನಂದಿನಿ ಅವರನ್ನು ವಿವಾಹವಾಗಿದ್ದಾರೆ. ಇವರಿಗೆ ಇಬ್ಬರು ಪುತ್ರರು ಇದ್ದಾರೆ.

ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದವರು ಯಾರು:
ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದರು. ಪ್ರಜಾಸತ್ತಾತ್ಮಕ ಮತ್ತು ಪಾರದರ್ಶಕ ಆಡಳಿತ ನೀಡುವ 'ಜನರ ಸರ್ಕಾರ' ಡಿಸೆಂಬರ್ 7 ರಂದು ಅಧಿಕಾರ ವಹಿಸಿಕೊಳ್ಳಲಿದೆ ಎಂದು ಹೇಳಿದ್ದ ರೇವಂತ್ ರೆಡ್ಡಿ, ಕಾರ್ಯಕ್ರಮಕ್ಕೆ ಹಾಜರಾಗುವಂತೆ ಜನರಿಗೆ ಮುಕ್ತ ಆಹ್ವಾನ ನೀಡಿದ್ದರು.
ಇದರೊಂದಿಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದರು. ಹೈದರಾಬಾದ್‌ನಲ್ಲಿ ಸಿಎಲ್‌ಪಿ ಸಭೆಯನ್ನು ಸಂಘಟಿಸಲು ಪಕ್ಷದ ನಾಯಕತ್ವ ನೇಮಿಸಿದ ಎಐಸಿಸಿ ವೀಕ್ಷಕರಲ್ಲಿ ಶಿವಕುಮಾರ್ ಒಬ್ಬರು.
ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರಿಗೂ ರೇವಂತ್ ರೆಡ್ಡಿ ಆಹ್ವಾನ ನೀಡಿದ್ದರು.
ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದರು. ಡಿಸೆಂಬರ್ 3 ರಂದು ತೆಲಂಗಾಣದಲ್ಲಿ ಕಾಂಗ್ರೆಸ್ 64 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಾಗ ಚುನಾವಣಾ ಫಲಿತಾಂಶಗಳು ಹೊರಬಿದ್ದ ಬೆನ್ನಲ್ಲೇ, ಮುಖ್ಯಮಂತ್ರಿ ಹುದ್ದೆಯ ಓಟದಲ್ಲಿ ಭಟ್ಟಿಯ ಬಗ್ಗೆ ಊಹಾಪೋಹಗಳು ಇದ್ದವು. ಜೊತೆಗೆ ಉತ್ತಮ್ ಕುಮಾರ್ ಅವರು ಕೊನೆಯ ಕ್ಷಣದವರೆಗೂ ಸಿಎಂ ಕುರ್ಚಿಗೆ ಪ್ರಯತ್ನಗಳನ್ನು ನಡೆಸಿದರು. ಆದರೆ ರೇವಂತ್ ರೆಡ್ಡಿಯನ್ನು ಸಿಎಂ ಆಗಿ ಆಯ್ಕೆ ಮಾಡುವ ಬಗ್ಗೆ ಪಕ್ಷದ ಅಧಿಕೃತ ಘೋಷಣೆಯ ನಂತರ ಕುಮಾರ್ ತಣ್ಣಗಾದರು.












Click it and Unblock the Notifications