Sabarimala Temple: ಶಬರಿಮಲೆಗೆ ಹೋಗುವ ಭಕ್ತರಿಗೆ ಶಾಕ್, ಕೇರಳ ಸರ್ಕಾರದಿಂದ ಹೊಸ ರೂಲ್ಸ್
ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶಬರಿಮಲೆಗೆ ಅಯ್ಯಪ್ಪನ ಭಕ್ತರು ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ದೇಶದ ಮೂಲೆ ಮೂಲೆಯಿಂದ ಭಕ್ತರು ಶಬರಿಮಲೆಯತ್ತ ಯಾತ್ರೆ ಹೊರಟಿದ್ದಾರೆ. ಆದರೆ ಈ ಬಾರಿ ಕೇರಳ ಸರ್ಕಾರವು ಶಬರಿಮಲೆ ಅಯ್ಯಪ್ಪನ ಭಕ್ತರಿಗೆ ಶಾಕ್ ನೀಡಿದೆ. ಈಗಾಗಲೇ ಯಾತ್ರೆ ಕೈಗೊಂಡಿರುವವರಿಗೆ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಭಕ್ತರು ಈ ನಿಯಮವನ್ನು ತಪ್ಪದೇ ಪಾಲಿಸಬೇಕು ಎಂದು ಖಡಕ್ ಸೂಚನೆಯೂ ಕೊಟ್ಟಿದೆ.
ಕೇರಳ ಆರೋಗ್ಯ ಇಲಾಖೆಯು ಶಬರಿಮಲೆ ಭಕ್ತರ ಗಮನಕ್ಕಾಗಿ ಮಹತ್ವದ ಆದೇಶ ಹೊರಡಿಸಿದೆ. ನವೆಂಬರ್ 17ರಿಂದ ವಾರ್ಷಿಕ ತೀರ್ಥಯಾತ್ರೆ ಆರಂಭವಾಗಲಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಭಕ್ತರಿಗೆ ಸೂಚನೆ ನೀಡಿದೆ. ಕೇರಳದಲ್ಲಿ ಮೆದುಳು ಜ್ವರ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವ ಹಿನ್ನೆಲೆ ಭಕ್ತರಿಗೆ ನದಿ ಸ್ನಾನ ಸೇರಿದಂತೆ ಆರೋಗ್ಯ ಇಲಾಖೆಯಿಂದ ಸಲಹೆ ನೀಡಲಾಗಿದೆ.

ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಯಾತ್ರಿಕರು ತಮ್ಮ ಆರೋಗ್ಯ ದಾಖಲೆಗಳು ಮತ್ತು ಔಷಧಿಗಳನ್ನು ಜೊತೆಯಲ್ಲೇ ಕೊಂಡೊಯ್ಯಬೇಕೆಂದು ಇಲಾಖೆ ಹೇಳಿದೆ. ಶಬರಿಮಲೆ ಯಾತ್ರೆಗೆ ತಯಾರಿ ನಡೆಸುವಾಗ ನಿಯಮಿತ ಔಷಧಿಗಳನ್ನು ನಿಲ್ಲಿಸಬಾರದು ಎಂದು ಸಲಹೆ ನೀಡಿದೆ. ಮುಖ್ಯವಾಗಿ ಶಬರಿಮಲೆ ಭಕ್ತರ ಮೂಗಿನೊಳಗೆ ನೀರು ಬರದಂತೆ ಜಾಗ್ರತೆ ವಹಿಸಬೇಕು ಎಂದು ಕೇರಳ ಆರೋಗ್ಯ ಇಲಾಖೆ ಹೇಳಿದೆ. ಶಬರಿಮಲೆ ನದಿಗಳಲ್ಲಿ ಸ್ನಾನ ಮಾಡುವ ಭಕ್ತರು ತಮ್ಮ ಮೂಗಿಗೆ ನೀರು ಬರದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದೆ. ನದಿಗಳಲ್ಲಿ ಸ್ನಾನ ಮಾಡುವ ಬಗ್ಗೆ ಎಚ್ಚರಿಕೆ ವಹಿಸಬೇಕು. ಕೇರಳದಲ್ಲಿ ಇತ್ತೀಚೆಗೆ ಮೆದುಳು ಜ್ವರದ ಪ್ರಕರಣಗಳು ಹೆಚ್ಚಾಗಿರುವ ಕಾರಣ ಈ ನಿರ್ದೇಶನಗಳನ್ನು ನೀಡಲಾಗಿದೆ.
ಭಕ್ತರ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಶಬರಿಮಲೆ ಯಾತ್ರೆಗೆ ಮುಂಚಿನ ದಿನಗಳಲ್ಲಿ ನಡಿಗೆಯಂತಹ ಸರಳ ವ್ಯಾಯಾಮವನ್ನು ಶಿಫಾರಸು ಮಾಡಲಾಗಿದೆ. ಯಾತ್ರಿಕರು ನಿಧಾನವಾಗಿ ಹತ್ತಲು, ವಿರಾಮಗಳನ್ನು ತೆಗೆದುಕೊಳ್ಳಲು ಮತ್ತು ಆಯಾಸ, ಎದೆ ನೋವು, ಉಸಿರಾಟದ ತೊಂದರೆ ಅಥವಾ ದೌರ್ಬಲ್ಯವನ್ನು ಅನುಭವಿಸಿದರೆ ವೈದ್ಯಕೀಯ ಸಹಾಯವನ್ನು ಪಡೆಯಲು ಸೂಚಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಭಕ್ತರು 04735 203232 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಹೇಳಿದೆ.
ಭಕ್ತರು ಏನೆಲ್ಲ ಪಾಲಿಸಬೇಕು?
ಭಕ್ತರು ಕಾಯಿಸಿದ ನೀರನ್ನು ಮಾತ್ರ ಕುಡಿಯಿರಿ, ತಿನ್ನುವ ಮೊದಲು ಕೈ ತೊಳೆಯಿರಿ, ತೊಳೆದ ಹಣ್ಣುಗಳನ್ನು ಸೇವಿಸಿ, ಉತ್ತಮ ಆಹಾರವನ್ನು ಸೇವಿಸಲು ಸಲಹೆ ನೀಡಲಾಗಿದೆ. ಅಲ್ಲದೆ ಶಬರಿಮಲೆಯಲ್ಲಿ ಬಯಲು ಮಲವಿಸರ್ಜನೆಯನ್ನು ನಿಷೇಧಿಸಲಾಗಿದೆ. ಶೌಚಾಲಯಗಳನ್ನು ಬಳಸಿದ ನಂತರ ಸರಿಯಾಗಿ ಕೈ ತೊಳೆಯಿರಿ. ತ್ಯಾಜ್ಯವನ್ನು ಗೊತ್ತುಪಡಿಸಿದ ತೊಟ್ಟಿಗಳಲ್ಲಿ ಮಾತ್ರವೇ ವಿಲೇವಾರಿ ಮಾಡಬೇಕು. ಹಾವು ಕಡಿತದ ಸಂದರ್ಭದಲ್ಲಿ, ಯಾತ್ರಿಕರು ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆಯಲು ಆಸ್ಪತ್ರೆಗಳಲ್ಲಿ ವಿಷ ವಿರೋಧಿ ಔಷಧ ಲಭ್ಯವಿದೆ ಎಂದು ಸಲಹಾ ಮಂಡಳಿ ಕೂಡ ತಿಳಿಸಿದೆ.

ಶಬರಿಮಲೆ ತೀರ್ಥಯಾತ್ರೆಯ ಮಾರ್ಗಗಳಲ್ಲಿ ವೈದ್ಯಕೀಯ ಕಾಲೇಜುಗಳ ವೈದ್ಯರು ಮತ್ತು ತರಬೇತಿ ಪಡೆದ ಸ್ವಯಂಸೇವಕ ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಪಂಪಾದಲ್ಲಿ 24 ಗಂಟೆಗಳ ಕಂಟ್ರೋಲ್ ರೂಂ ಕಾರ್ಯನಿರ್ವಹಿಸಲಿದೆ. ಬೆಟ್ಟ ಹತ್ತುವಾಗ ಯಾವುದೇ ಸುಸ್ತು ಅನುಭವಿಸುವ ಯಾತ್ರಿಕರು ಹತ್ತಿರದ ಆರೋಗ್ಯ ಕೇಂದ್ರದಲ್ಲಿ ತಕ್ಷಣ ಚಿಕಿತ್ಸೆ ಪಡೆಯಿರಿ ಎಂದು ಹೇಳಿದೆ.
ಅಲ್ಲದೆ ಎಲ್ಲ ಭಾಷೆಗಳಲ್ಲಿ ಜಾಗೃತಿ ಸಾಮಗ್ರಿಗಳನ್ನು ಸಿದ್ಧಪಡಿಸಲಾಗಿದೆ. ತಿರುವಾಂಕೂರು ದೇವಸ್ವಂ ಮಂಡಳಿಯೊಂದಿಗೆ ಸಮನ್ವಯದಿಂದ ಸಮಗ್ರ ವೈದ್ಯಕೀಯ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ. ಪಂಪಾದಿಂದ ಸನ್ನಿಧಾನಕ್ಕೆ ಹೋಗುವ ಮಾರ್ಗದಲ್ಲಿ ತುರ್ತು ವೈದ್ಯಕೀಯ ಕೇಂದ್ರಗಳನ್ನು ತೆರೆಯಲಾಗಿದೆ. ಪತ್ತನಂತಿಟ್ಟ ಜನರಲ್ ಆಸ್ಪತ್ರೆಯಲ್ಲಿ ತುರ್ತು ಹೃದ್ರೋಗ ಸೇವೆಗಳು ಸಿಗಲಿದೆ. ಹೃದಯ ಸಂಬಂಧಿ ತುರ್ತು ಪರಿಸ್ಥಿತಿಗಳಿಗೆ ಸಜ್ಜಾದ ಆಂಬ್ಯುಲೆನ್ಸ್‌ಗಳು ಸಹ ಲಭ್ಯವಿದೆ. ಸನ್ನಿಧಾನಂ ಮತ್ತು ಪಂಪಾ ನಡುವೆ ವಿಶೇಷ ಆಂಬ್ಯುಲೆನ್ಸ್ ಸೇವೆ ಕೂಡ ಇರಲಿದೆ. ಮೆದುಳು ಜ್ವರದ ಕೇಸ್‌ಗಳು ಹೆಚ್ಚಾಗಿರುವ ಕಾರಣ ಮುಂಜಾಗ್ರತೆ ವಹಿಸಲು ಭಕ್ತರಿಗೆ ಸೂಚನೆ ನೀಡಲಾಗಿದೆ.












Click it and Unblock the Notifications