ಉತ್ತರಾಖಂಡದಲ್ಲಿ ಭಾರೀ ಮಳೆ; ಕೇದಾರನಾಥ ಯಾತ್ರೆ ಸ್ಥಗಿತ
ನವದೆಹಲಿ, ಜೂನ್ 25; ಭಾರೀ ಮಳೆ ಹಿನ್ನಲೆಯಲ್ಲಿ 2023ನೇ ಸಾಲಿನ ಕೇದಾರನಾಥ ಯಾತ್ರೆಯನ್ನು ಮುಂದಿನ ಆದೇಶದ ತನಕ ಸ್ಥಗಿತಗೊಳಿಸಲಾಗಿದೆ. ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಭಕ್ತರ ರಕ್ಷಣೆಯ ದೃಷ್ಟಿಯಿಂದ ಯಾತ್ರೆ ಸ್ಥಗಿತಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಭಾನುವಾರ ಉತ್ತರಾಖಂಡ ಸರ್ಕಾರ ಕೇದಾರನಾಥ ಯಾತ್ರೆ ಸ್ಥಗಿತಗೊಳಿಸುವ ಆದೇಶ ಹೊರಡಿಸಿದೆ. ಮುಂದಿನ ಆದೇಶದ ತನಕ ಕೇದಾರನಾಥ ಯಾತ್ರೆಗೆ ಭಕ್ತರಿಗೆ ಅವಕಾಶವಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಉತ್ತರಾಖಂಡ್ ರಾಜ್ಯದ ರುದ್ರಪ್ರಯಾಗ್ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಜಿಲ್ಲಾಡಳಿತ ನೀಡಿರುವ ಮಾಹಿತಿಯಂತೆ ಮಳೆ ಇನ್ನೂ ಮೂರು ದಿನ ಮುಂದುವರೆಯುವ ಮುನ್ಸೂಚನೆ ಇದೆ. ಆದ್ದರಿಂದ ಕೇದಾರನಾಥ ಯಾತ್ರೆ ಸ್ಥಗಿತಗೊಳಿಸಿ ಆದೇಶಿಸಲಾಗಿದೆ.
ಜಿಲ್ಲಾ ವಿಪತ್ತು ನಿರ್ವಹಣಾ ಪಡೆಯ ಮುಖ್ಯಸ್ಥ ನಂದನ ಸಿಂಗ್ ರಾಜ್ವರ್ ಅವರ ಮಾಹಿತಿಯಂತೆ ಜಿಲ್ಲಾಡಳಿತ ಯಾತ್ರೆ ರದ್ದುಗೊಳಿಸಿ ಆದೇಶಿಸಿದೆ. ಭಾನುವಾರ ಮುಂಜಾನೆಯಿಂದ ಜಿಲ್ಲೆಯ ವಿವಿಧ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮುಖ್ಯಮಂತ್ರಿಗಳ ಭೇಟಿ; ರಾಜ್ಯದಲ್ಲಿ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂಗೆ ಭೇಟಿ ನೀಡಿ ಭಾನುವಾರ ಮಾಹಿತಿ ಪಡೆದರು. ಇಂದು ಬೆಳಗ್ಗೆ 8 ಗಂಟೆಗೆ 5,828 ಯಾತ್ರಾರ್ಥಿಗಳು ಕೇದಾರನಾಥ ಯಾತ್ರೆಯನ್ನು ಆರಂಭಿಸಿದ್ದರು.
ಯಾತ್ರಾರ್ಥಿಗಳು ಇರುವ ಸ್ಥಳವನ್ನು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿಯೂ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿಯ ಆತಂಕ ಎದುರಾಗಿದೆ. ಮುಖ್ಯಮಂತ್ರಿಗಳು ರಕ್ಷಣಾ ಕಾರ್ಯಕ್ಕೆ ಬೇಕಾದ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.
ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ ಭೇಟಿ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಹವಾಮಾನ ಮುನ್ಸೂಚನೆ, ಜಿಲ್ಲೆಗಳಲ್ಲಿನ ಪರಿಸ್ಥಿತಿ, ನದಿಗಳ ನೀರಿನ ಮಟ್ಟ ಮುಂತಾದವುಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಕೇದಾರನಾಥ ಯಾತ್ರೆ ನಡೆಯುತ್ತಿರುವ ಪ್ರದೇಶದಲ್ಲಿನ ಪರಿಸ್ಥಿತಿ ಕುರಿತು ಸಹ ಮಾಹಿತಿಯನ್ನು ಸಂಗ್ರಹಿಸಿದರು.
ಕಳೆದ 24 ಗಂಟೆಯಲ್ಲಿ ಹರಿದ್ವಾರದಲ್ಲಿ 78 ಮಿ. ಮೀ., ಡೆಹರಾಡೂನ್‌ನಲ್ಲಿ 32.2 ಮಿ. ಮೀ., ಉತ್ತರಕಾಶಿಯಲ್ಲಿ 27.7 ಮಿ. ಮೀ. ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಆರೋಗ್ಯ, ಪೊಲೀಸ್, ಎಸ್‌ಡಿಆರ್‌ಎಫ್ ಪಡೆಗೆ ರಕ್ಷಣಾ ಕಾರ್ಯಕ್ಕೆ ಸನ್ನದ್ಧರಾಗಿ ಇರುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
ಏಪ್ರಿಲ್ 25ರಿಂದ ಯಾತ್ರೆ; ಈ ಬಾರಿಯ ಕೇದಾರನಾಥ ಯಾತ್ರೆ ಏಪ್ರಿಲ್ 25ರಂದು ಆರಂಭವಾಗಿತ್ತು. ಈ ಬಾರಿ ಪ್ರತಿದಿನ 13 ಸಾವಿರ ಯಾತ್ರಿಕರ ಭೇಟಿಗೆ ಮಾತ್ರ ರಾಜ್ಯ ಸರ್ಕಾರ ಅವಕಾಶ ನೀಡಿದೆ. ಸುಗಮ ಯಾತ್ರೆಗಾಗಿ ಸರ್ಕಾರ ಈ ಬಾರಿ ಟೋಕನ್ ವ್ಯವಸ್ಥೆಯನ್ನು ಪರಿಚಯಿಸಿದೆ. 22 ವೈದ್ಯರು, ಸಹಾಯಕರು, 12 ವೈದ್ಯಕೀಯ ಶಿಬಿರ ತೆರೆಯಲಾಗಿದ್ದು, ಯಾತ್ರಾರ್ಥಿಗಳ ಆರೋಗ್ಯದ ಬಗ್ಗೆ ಗಮನಹರಿಸಲಾಗುತ್ತಿದೆ.
ಕೇದಾರನಾಥ ನಗರ ಪಂಚಾಯಿತಿ ದೇವಾಲಯದ ಸುತ್ತಮುತ್ತಲಿನ ಸ್ವಚ್ಛತೆ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಯಾತ್ರಾರ್ಥಿಗಳಿಗೆ ಗಂಭೀರ ಆರೋಗ್ಯ ಸಮಸ್ಯೆ ಉಂಟಾದರೆ ಅವರನ್ನು ಏರ್‌ಲಿಫ್ಟ್ ಮಾಡಲು ಏರ್ ಅಂಬ್ಯುಲೆನ್ಸ್ ಸೇವೆಗೆ ಸಹ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಕೇದಾರನಾಥ ದೇವಾಲಯದ ಬಾಗಿಲನ್ನು ಏಪ್ರಿಲ್ 25ರಂದು ತೆರೆಯಲಾಗಿದೆ. ಚಳಿಗಾಲದಲ್ಲಿ ಭಾರೀ ಹಿಮಪಾತದ ಕಾರಣ ಎರಡು ಬಾರಿ ತಾತ್ಕಾಲಿಕವಾಗಿ ಕೇದಾರನಾಥ ಯಾತ್ರೆ ಸ್ಥಗಿತಗೊಳಿಸಲಾಗಿತ್ತು. ಭಕ್ತರ ರಕ್ಷಣೆಗೆ ರಾಜ್ಯ ಸರ್ಕಾರ ಅತ್ಯಂತ ಮಹತ್ವ ನೀಡುತ್ತದೆ. ಆದ್ದರಿಂದ ಹವಾಮಾನ ಇಲಾಖೆ ನೀಡುವ ಮುನ್ಸೂಚನೆಗಳನ್ನು ಆಧರಿಸಿ ಜಿಲ್ಲಾಡಳಿತ ಯಾತ್ರೆಯಲ್ಲಿ ಬದಲಾವಣೆಗಳನ್ನು ಮಾಡುತ್ತಲಿರುತ್ತದೆ.
ಈ ಬಾರಿ ಏಪ್ರಿಲ್ 25ರಿಂದ ನವೆಂಬರ್ 14ರ ತನಕ ಕೇದಾರನಾಥ ಯಾತ್ರೆಗೆ ಅವಕಾಶ ನೀಡಲಾಗಿದೆ. ಆದರೆ ಮಳೆ, ಹಿಮಪಾತದಂತಹ ಪ್ರತಿಕೂಲ ಹವಾಮಾನದ ಪರಿಸ್ಥಿತಿಯಲ್ಲಿ ಯಾತ್ರೆಯನ್ನು ಮೊಟಕುಗೊಳಿಸಲಾಗುತ್ತದೆ. ಆಗ ಯಾತ್ರಾರ್ಥಿಗಳು ಶಿಬಿರದಲ್ಲಿಯೇ ಇರಬೇಕಿದೆ. ಹವಾಮಾನ ಪರಿಸ್ಥಿತಿ ತಿಳಿಯಾದ ಮೇಲೆ ಮತ್ತೆ ಯಾತ್ರೆಯನ್ನು ಆರಂಭಿಸಲಾಗುತ್ತದೆ.












Click it and Unblock the Notifications