ರಾಷ್ಟ್ರೀಯ ಪಕ್ಷಗಳಿಗೆ ದಳಪತಿಗಳು ಠಕ್ಕರ್; ಜೆಡಿಎಸ್ ಪರ ಮಮತಾ ಬ್ಯಾನರ್ಜಿ ಪ್ರಚಾರ
ಕೋಲ್ಕತಾ, ಮಾರ್ಚ್24: 2023 ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಹಾಗೂ ಬಿಜೆಪಿ ರಾಜ್ಯ ನಾಯಕರು ಹೈಕಮಾಂಡ್ ನಾಯಕರ ಮೂಲಕ ಪ್ರಚಾರವನ್ನ ನಡೆಸುತ್ತಿದ್ದಾರೆ. ಇತ್ತ ಜೆಡಿಎಸ್ ಅನ್ಯ ಪ್ರಾದೇಶಿಕ ಪಕ್ಷದ ನಾಯಕರನ್ನ ಕರೆತರುವ ಪ್ಲಾನ್ ಮಾಡಿದೆ.
ಕರ್ನಾಟಕದ ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ಕ್ಷೇತ್ರದಲ್ಲಿ ಇಂದು ಪಂಚರತ್ನ ರಥಯಾತ್ರೆ ಮುಗಿಸಿ ಮಧ್ಯಾಹ್ನ ವಿಶೇಷ ವಿಮಾನದಲ್ಲಿ ಕೊಲ್ಕತಾಗೆ ಆಗಮಿಸಿದ ಅವರು ಮಮತಾ ಬ್ಯಾನರ್ಜಿ ಅವರ ಭವಾನಿಪುರ ನಿವಾಸದಲ್ಲಿ ಭೇಟಿಯಾಗಿ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕುಮಾರಸ್ವಾಮಿ, ಮಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಪರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ ಅವರು ಪ್ರಚಾರ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಜತೆ ಸುದೀರ್ಘ ಮಾತುಕತೆ ನಡೆಸಲಾಯಿತು. ಮುಂಬರುವ ಕರ್ನಾಟಕದ ವಿಧಾನಸಭೆ ಚುನಾವಣೆ, ರಾಷ್ಟ್ರ ರಾಜಕಾರಣ, ರಾಹುಲ್ ಗಾಂಧಿ ಅವರ ಅನರ್ಹತೆ ಸೇರಿ ಅನೇಕ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಬಾರಿ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ, ಕಳೆದ ಬಾರಿ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆದಾಗಲೂ ಕೇಂದ್ರ ಸರಕಾರ ವಿಪರೀತ ಕಿರುಕುಳ ನೀಡಿತು. ಆದರೂ ಜನತೆಯ ಆಶೀರ್ವಾದದಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬಂತು. ಅದೇ ರೀತಿ ಕರ್ನಾಟಕದಲ್ಲಿ ಜೆಡಿಎಸ್ ಕೂಡ ಅಧಿಕಾರಕ್ಕೆ ಬರಲಿದೆ ಎಂದು ಮಮತಾ ಅವರು ಹೇಳಿದ್ದಾಗಿ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ನೀವು ಯಾವಾಗ ಹೇಳಿದರೂ ನಾನು ಕರ್ನಾಟಕಕ್ಕೆ ಬಂದು ಜೆಡಿಎಸ್ ಪಕ್ಷದ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತೇನೆ. ನೀವು ವೇಳಾಪಟ್ಟಿಯನ್ನು ಸಿದ್ಧಪಡಿಸಿ ತಿಳಿಸಿ ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದರು. ಇದರಿಂದ ನನಗೆ ಬಹಳ ಸಂತಸ ಆಗಿದೆ. ಇಂದು ಅವರು ನನ್ನನ್ನು ಅತ್ಯಂತ ಅದರಪೂರ್ವಕವಾಗಿ ಸ್ವಾಗತಿಸಿ ಗೌರವಿಸಿದರು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಇದೇ 26ರಂದು ಮೈಸೂರಿನಲ್ಲಿ ನಡೆಯಲಿರುವ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾವೇಶದ ಬಗ್ಗೆಯೂ ಮಮತಾ ಅವರು ಮಾಹಿತಿ ಪಡೆದರು. ಅಲ್ಲದೆ, ಕರ್ನಾಟಕದ ರಾಜಕೀಯ ವಿದ್ಯಮಾನಗಳ ಚರ್ಚಿಸಿದರು ಎಂಬುದಾಗಿ ಕುಮಾರಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.
2024 ರ ಚುನಾವಣೇಗೆ ಕಾಂಗ್ರೆಸ್ಸೇತರ ಹಾಗೂ ಬಿಜೆಪಿಯೇತರ ಪಕ್ಷಗಳ ಜೊತೆಗೆ ಸಾಲು ಸಾಲು ಸಭೆಗಳನ್ನ ನಡೆಸುತ್ತಿದ್ದು, ಕಳೆದ ವಾರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಮಮತಾ ಬ್ಯಾನರ್ಜಿ ನಡುವೆ ಮಾತುಕತೆ ನಡೆದಿದ್ದು, ಸಭೆಯ ಬಳಿಕ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಸಮಾನ ಅಂತರ ಕಾಯ್ದುಕೊಳ್ಳುವುದಾಗಿ ಸಮಾಜವಾದಿ ಪಕ್ಷ ಮತ್ತು ಟಿಎಂಸಿ ಘೋಷಿಸಿದ್ದವು. ಅದಲ್ಲದೇ ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿಯೂ ಹೇಳಿದ್ದವು.
ಈಗಾಗಲೇ ಬಿಆರ್‌ಎಸ್ ಮುಖ್ಯಸ್ಥ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಜೊತೆ ಎಚ್. ಡಿ ಕುಮಾರಸ್ವಾಮಿ ಮಾತುಕತೆ ನಡೆಸಿದ್ದು, ಈಗ ಮಮತಾ ಬ್ಯಾನರ್ಜಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಇನ್ನೂ ಕರ್ನಾಟಕ ರಾಜಕೀಯ ಪ್ರಚಾರಕ್ಕೆ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಂಟ್ರಿಯಾಗಲಿದ್ದು, ಕುಮಾರಸ್ವಾಮಿ ಮತ್ತೆ ರಾಷ್ಟ್ರ ರಾಜಕಾರಣಕ್ಕೆ ಮರಳುತ್ತಾರೆ ಎಂಬ ಕುತೂಹಲವನ್ನ ಹುಟ್ಟಿಸಿದೆ.












Click it and Unblock the Notifications