ಜಮ್ಮು ಕಾಶ್ಮೀರ, ಜಾರ್ಖಂಡ್ ಚುನಾವಣಾ ವೇಳಾಪಟ್ಟಿ

Posted By:
Subscribe to Oneindia Kannada

ನವದೆಹಲಿ, ಅ.25 : ಜಮ್ಮು ಮತ್ತು ಕಾಶ್ಮೀರ ಹಾಗೂ ಜಾರ್ಖಂಡ್ ವಿಧಾನಸಭೆ ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ. ಉಭಯ ರಾಜ್ಯಗಳ ಚುನಾವಣೆ ಜೊತೆಗೆ ನವದೆಹಲಿಯ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಯೂ ನಡೆಯಲಿದ್ದು, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ.

ಶನಿವಾರ ಮಧ್ಯಾಹ್ನ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ವಿ. ಎಸ್. ಸಂಪತ್ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದರು. ಒಟ್ಟು 5 ಹಂತಗಳಲ್ಲಿ ಎರಡು ರಾಜ್ಯ ಮತ್ತು ದೆಹಲಿಯ ಮೂರು ಕ್ಷೇತ್ರಗಳ ಚುನಾವಣೆ ನಡೆಯಲಿದ್ದು, ಮತ ಎಣಿಕೆ ಡಿ.23ರಂದು ನಡೆಯಲಿದೆ.

Election Commissioner V.S. Sampath

ಜಮ್ಮು ಮತ್ತು ಕಾಶ್ಮೀರದಲ್ಲಿ 10,015 ಮತಗಟ್ಟೆಯನ್ನು ಮತ್ತು ಜಾರ್ಖಂಡ್‌ ರಾಜ್ಯದಲ್ಲಿ 24,648 ಮತಗಟ್ಟೆಯನ್ನು ಸ್ಥಾಪಿಸಲಾಗುತ್ತದೆ ಎಂದು ವಿ.ಎಸ್.ಸಂಪತ್ ಹೇಳಿದರು. ನವೆಂಬರ್ 25ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು ಒಟ್ಟು ಐದು ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತದೆ. ಡಿ.23ರಂದು ಮತ ಎಣಿಕೆ ನಡೆಯಲಿದೆ ಎಂದು ಸಂಪತ್ ಮಾಹಿತಿ ನೀಡಿದರು.

ಜಮ್ಮು ಮತ್ತು ಕಾಶ್ಮೀರದ 87 ಸ್ಥಾನಗಳಿಗೆ, ಜಾರ್ಖಂಡ್ ರಾಜ್ಯದ 81 ಸ್ಥಾನಗಳಿಗೆ ಮತ್ತು ದೆಹಲಿಯ ಮೂರು ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ನವೆಂಬರ್ 25ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಡಿಸೆಂಬರ್ 2 ಎರಡನೇ ಹಂತದ ಮತದಾನ, ಡಿ.9ರಂದು ಮೂರನೇ ಹಂತದ ಮತದಾನ, ಡಿ.14ರಂದು ನಾಲ್ಕನೇ ಹಂತದ ಮತದಾನ ಹಾಗೂ ಡಿ.20ರಂದು ಐದನೇ ಹಂತದ ಮತದಾನ ನಡೆಯಲಿದೆ.

ಎರಡೂ ರಾಜ್ಯಗಳಲ್ಲಿ ಭದ್ರತಾ ಸಮಸ್ಯೆ ಹೆಚ್ಚಿರುವುದರಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಮತದಾನ ಮಾಡಲು ಅನುಕೂಲವಾಗುವಂತೆ ಚುನಾವಣಾ ಆಯೋಗ ಸೇನೆಯ ನೆರವನ್ನು ಪಡೆಯಲಿದೆ ಎಂದು ಸಂಪತ್ ಹೇಳಿದರು. ನ.7 ರಿಂದ ಉಭಯ ರಾಜ್ಯಗಳ ಚುನಾವಣಾ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ.

ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ ದೆಹಲಿಯ ಮೂವರು ಶಾಸಕರು ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿರುವ ಕಾರಣ ಅವರು ಪ್ರತಿನಿಧಿಸಸುತ್ತಿದ್ದ 3 ವಿಧಾನಸಭಾ ಕ್ಷೇತ್ರಗಳಿಗೆ ನ.25ರಂದು ಉಪಚುನಾವಣೆ ನಡೆಯಲಿದೆ.

ಚುನಾವಣಾ ವೇಳಾಪಟ್ಟಿ

* ಜಮ್ಮು ಮತ್ತು ಕಾಶ್ಮೀರದ 87, ಜಾರ್ಖಂಡ್‌ನ 81 ಕ್ಷೇತ್ರಗಳಿಗೆ ಚುನಾವಣೆ"
* ಜೊತೆಗೆ ದೆಹಲಿಯ ಮೂರು ಕ್ಷೇತ್ರಗಳಿಗೂ ಉಪ ಚುನಾವಣೆ
* ನ.7ರಿಂದ ಪ್ರಕ್ರಿಯೆ ಆರಂಭ, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿ
* ನ.25ರಂದು ಮೊದಲ ಹಂತ, ಡಿ.2ರಂದು ಎರಡನೇ ಹಂತ, ಡಿ.9ರಂದು 3ನೇ ಹಂತ, ಡಿ.14ರಂದು 4ನೇ ಹಂತ ಹಾಗೂ ಡಿ.20ರಂದು 5ನೇ ಹಂತದ ಮತದಾನ ನಡೆಯಲಿದೆ.
* ಡಿ.23ರಂದು ಮತ ಎಣಿಕೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Election Commission announced schedule for assembly elections in Jammu and Kashmir and Jharkhand. Chief Election Commissioner V.S. Sampath addressed press conference in Delhi and announced schedule. 5 phase election in Jharkhand and J&K counting will be held on December 23.
Please Wait while comments are loading...