Jammu And Kashmir Assembly Election 2024 Results; ಐತಿಹಾಸಿಕ ಸಾಧನೆ ಮಾಡಿದ ಎಎಪಿ
ಶ್ರೀನಗರ, ಅಕ್ಟೋಬರ್ 08: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ 2024ರಲ್ಲಿ ಆಮ್ ಆದ್ಮಿ ಪಕ್ಷ ಐತಿಹಾಸಿಕ ಸಾಧನೆ ಮಾಡಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಪರೆನ್ಸ್ ಮೈತ್ರಿಕೂಟ ಬಹುಮತ ಪಡೆದಿದ್ದು, 10 ವರ್ಷಗಳ ಬಳಿಕ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ರಾಜ್ಯದ ಒಟ್ಟು ವಿಧಾನಸಭಾ ಕ್ಷೇತ್ರಗಳು 90, ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 46. ನ್ಯಾಷನಲ್ ಕಾನ್ಪರೆನ್ಸ್ ಓಮರ್ ಅಬ್ದುಲ್ಲಾ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದೆ.
4.36ರ ಮಾಹಿತಿಯಂತೆ ನ್ಯಾಷನಲ್ ಕಾನ್ಫರೆನ್ಸ್ 41, ಕಾಂಗ್ರೆಸ್ 6, ಬಿಜೆಪಿ 27 ಸ್ಥಾನ, ಪಿಡಿಪಿ 3, ಜೆಪಿಸಿ 1 ಮತ್ತು ಇತರರು 7 ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ಇನ್ನೂ 3 ಕ್ಷೇತ್ರದ ಚುನಾವಣಾ ಫಲಿತಾಂಶ ಘೋಷಣೆ ಬಾಕಿ ಇದೆ. ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಪರೆನ್ಸ್ ಮೈತ್ರಿಕೂಟ ಸರ್ಕಾರ ರಚನೆ ಮಾಡಲಿದೆ.

ಆಮ್ ಆದ್ಮಿ ಪಕ್ಷ ಜಮ್ಮು ಮತ್ತು ಕಾಶ್ಮೀರ ಚುನಾವಣೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ 1 ಸ್ಥಾನದಲ್ಲಿ ಜಯಗಳಿಸಿದೆ. ಮೆಹರಾಜ್ ಮಾಲೀಕ್ 4,538 ಮತಗಳ ಅಂತರದಿಂದ ಗೆಲ್ಲುವ ಮೂಲಕ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಪಕ್ಷದ ಮೊದಲ ಶಾಸಕರು ಆಯ್ಕೆಯಾಗಿದ್ದಾರೆ.
2020ರಲ್ಲಿ ನಡೆದ ಜಮ್ಮು ಮತ್ತು ಕಾಶ್ಮೀರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದ ಮೆಹರಾಜ್ ಮಾಲೀಕ್ 2024ರ ವಿಧಾನಸಭೆ ಚುನಾವಣೆಗೆ ದೊಡ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಚುನಾವಣೆಯಲ್ಲಿ ಅವರು 23,228 ಮತಗಳನ್ನು ಪಡೆದು 4,538 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕ್ಷೇತ್ರದಲ್ಲಿ ಬಿಜೆಪಿಯ ಗಜಯ್ ಸಿಂಗ್ ರಾಣಾ 18,690 ಮತಗಳನ್ನು ಪಡೆದು 2ನೇ ಸ್ಥಾನ ಮತ್ತು ನ್ಯಾಷನಲ್ ಕಾನ್ಪರೆನ್ಸ್‌ನ ಖಾಲಿದ್ ನಜೀಬ್ ಶೂರ್ವಾಡಿ 13,334 ಮತಗಳನ್ನು ಪಡೆದು 3ನೇ ಸ್ಥಾನವನ್ನು ಪಡೆದಿದ್ದಾರೆ.
2014ರ ಚುನಾವಣೆಯಲ್ಲಿ ಶಕ್ತಿ ರಾಜ್ ಕ್ಷೇತ್ರದಲ್ಲಿ ಗೆದ್ದಿದ್ದರು. 1962ರಿಂದಲೂ ಕ್ಷೇತ್ರದಲ್ಲಿ ನ್ಯಾಷನಲ್ ಕಾನ್ಪರೆನ್ಸ್ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ನಡೆದಿತ್ತು. ಆದರೆ ಈ ಬಾರಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡ ಕಾರಣ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿದಿರಲಿಲ್ಲ.
ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ಸೀಟು ಎಎಪಿ ಗೆದ್ದಿದ್ದರೆ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ತವರು ರಾಜ್ಯ ಹರಿಯಾಣದಲ್ಲಿ ಪಕ್ಷ ಯಾವುದೇ ಸೀಟು ಗೆದ್ದಿಲ್ಲ. ಇದು ಪಕ್ಷಕ್ಕೆ ಆಘಾತವನ್ನು ತಂದಿದೆ. ದೆಹಲಿ ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಇದು ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ.
ಹರಿಯಾಣದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸೀಟು ಹಂಚಿಕೆ ಮಾಡಿಕೊಳ್ಳಲು ಕಾಂಗ್ರೆಸ್ ನಿರಾಕರಿಸಿತ್ತು. ದೆಹಲಿಯಲ್ಲಿ ಮಾತುಕತೆಗಳು ನಡೆದರೂ ಸಹ ಬಳಿಕ ಪಕ್ಷ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತೇವೆ ಎಂದು ಘೋಷಣೆ ಮಾಡಿತ್ತು. 'ಇಂಡಿಯಾ' ಮೈತ್ರಿಕೂಟದಲ್ಲಿ ಎರಡು ಪಕ್ಷಗಳು ಪಾಲುದಾರರು. ಆದರೆ ರಾಜ್ಯದಲ್ಲಿ ಮೈತ್ರಿಗೆ ಎಎಪಿ ವಿರೋಧ ವ್ಯಕ್ತಪಡಿಸಿತ್ತು.
ಲೋಕಸಭೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೈತ್ರಿಯ ಆಹ್ವಾನವನ್ನು ನೀಡಿದರೂ ಸಹ ಎಎಪಿ ಅದನ್ನು ನಿರಾಕರಿಸಿತ್ತು. ಈಗ ಚುನಾವಣೆಯಲ್ಲಿ ಒಂದೂ ಸ್ಥಾನವನ್ನು ಗೆಲ್ಲದೇ ಹೀನಾಯ ಸೋಲು ಕಂಡಿದೆ.












Click it and Unblock the Notifications