500 ಬಿಲಿಯನ್ ಡಾಲರ್ ಹೂಡಿಕೆ ಮತ್ತು ರಷ್ಯಾ ತೈಲ ಖರೀದಿ ಬಗ್ಗೆ ಅಮೆರಿಕ ಹೇಳಿಕೆ | Indian Energy Sector
ಭಾರತ ಮತ್ತು ಅಮೆರಿಕ ನಡುವೆ ನಡೆದ ಮಹತ್ವದ ವ್ಯಾಪಾರ ಒಪ್ಪಂದ ಇದೀಗ ಇಡೀ ಜಗತ್ತು ತಿರುಗಿ ನೋಡುವಂತೆ ಮಾಡಿದೆ. ಭಾರತ ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ದೇಶಗಳ ಪೈಕಿ ಒಂದಾಗಿದ್ದರೆ, ಇನ್ನೊಂದು ಕಡೆ ಅಮೆರಿಕ ಜಗತ್ತಿನ ಅತ್ಯಂತ ಶ್ರೀಮಂತ ದೇಶ ಎಂಬ ಬಿರುದು ಪಡೆದಿದೆ. ಹೀಗಿದ್ದಾಗ ಅಮೆರಿಕ ಮತ್ತು ಭಾರತ ಒಂದುಗೂಡಿ ಆರ್ಥಿಕ ಅಭಿವೃದ್ಧಿ ಕಡೆಗೆ ಹೆಜ್ಜೆ ಇಟ್ಟರೆ ಹೊಸ ಇತಿಹಾಸ ನಿರ್ಮಾಣ ಆಗುವುದು ಗ್ಯಾರಂಟಿ ಅನ್ನೋದು ಎಲ್ಲರ ಮಾತಾಗಿತ್ತು.
ಆರಂಭದಲ್ಲಿ ಡೊನಾಲ್ಡ್ ಟ್ರಂಪ್ ಅವರು ಕಿರಿಕ್ ಮಾಡಿದ್ದರೂ, ಈಗ ಭಾರತದ ಜೊತೆ ಐತಿಹಾಸಿಕ ವ್ಯಾಪಾರ ಒಪ್ಪಂದ ಮಾಡಿಕೊಂಡು ಗಮನ ಸೆಳೆದಿದ್ದಾರೆ. ಈ ಸಮಯದಲ್ಲೇ ಅಮೆರಿಕ ಅಧ್ಯಕ್ಷರ ಕಚೇರಿ ಮಹತ್ವದ ಹೇಳಿಕೆ ಒಂದನ್ನ ನೀಡಿದ್ದು, ಈ ಹೇಳಿಕೆಯಿಂದ ಭಾರತ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ತೈಲ ಖರೀದಿ ವಿಚಾರದಲ್ಲಿ ಹಲ್‌ಚಲ್ ಎದ್ದಿದೆ. ಅಲ್ಲದೆ ಇದೇ ವೇಳೆ, ಭವಿಷ್ಯದಲ್ಲಿ ರಷ್ಯಾ & ಭಾರತದ ಸ್ನೇಹದ ಮೇಲೆ ಆಗುವ ಪರಿಣಾಮ ಹೇಗಿರಲಿವೆ? ಎಂಬ ಚರ್ಚೆ ಶುರುವಾಗಿದೆ.

ರಷ್ಯಾ ಮತ್ತು ಉಕ್ರೇನ್ ಯುದ್ಧ ಹಿನ್ನೆಲೆ ರಷ್ಯಾ ಮೂಲಕ ತೈಲ ಖರೀದಿ ನಿಲ್ಲಿಸಬೇಕು ಎಂಬುದು ಅಮೆರಿಕ ನಿರ್ಬಂಧ ಆಗಿತ್ತು. ಆದರೆ ಭಾರತ ಮಾತ್ರ ರಷ್ಯಾ ಕಚ್ಚಾ ತೈಲ ಖರೀದಿ ಮುಂದುವರಿಸಿತ್ತು, ಇಷ್ಟೆಲ್ಲದರ ಮಧ್ಯೆ ಅಮೆರಿಕ & ಭಾರತದ ನಡುವೆ ನಡೆದಿರುವ ಹೊಸ ವ್ಯಾಪಾರ ಒಪ್ಪಂದ ರಷ್ಯಾ ತೈಲ ಖರೀದಿಗೆ ಬ್ರೇಕ್ ಹಾಕುತ್ತೆ ಎಂದಿದೆ ವೈಟ್‌ಹೌಸ್. ಹೀಗೆ ಶ್ವೇತಭವನ ನೀಡಿರುವ ಹೇಳಿಕೆಯೇ ಗೊಂದಲದ ವಾತಾವರಣ ಸೃಷ್ಟಿ ಮಾಡಿದೆ.
500 ಶತಕೋಟಿ ಡಾಲರ್ ಹೂಡಿಕೆ
ಅಮೆರಿಕ ಅಧ್ಯಕ್ಷರ ನಿರ್ಧಾರದ ನಂತರ ವೈಟ್‌ಹೌಸ್ ಇದೀಗ ಮಹತ್ವದ ಹೇಳಿಕೆ ನೀಡಿದ್ದು, ಈ ಹೇಳಿಕೆ ಜಾಗತಿಕ ಮಟ್ಟದಲ್ಲಿ ಭಾರಿ ಮಹತ್ವ ಪಡೆದಿದೆ. ಭಾರತದ ಜೊತೆಯಲ್ಲಿ ಹೊಸ ವ್ಯಾಪಾರ ಒಪ್ಪಂದವನ್ನ ಇದೀಗ ವೈಟ್‌ಹೌಸ್ ಶ್ಲಾಘಿಸಿದ್ದು, ಇದೇ ಸಮಯದಲ್ಲಿ ಭಾರತ ಇನ್ನುಮುಂದಕ್ಕೆ ರಷ್ಯಾದಿಂದ ಕಚ್ಚಾತೈಲ ಖರೀದಿಸದೇ ಇರಲು ಬದ್ಧವಾಗಿದೆ ಎಂದು ಹೇಳಿದೆ ಶ್ವೇತಭವನ. ಹೀಗೆ ಭಾರತದ ನಿರ್ಧಾರವನ್ನ ಅಮೆರಿಕ ಪ್ರಸ್ತಾಪ ಮಾಡಿರುವುದು ಒಂದಷ್ಟು ಗೊಂದಲ ಸೃಷ್ಟಿಸಿದ್ದರೂ, ಮತ್ತೊಂದು ಕಡೆ ರಷ್ಯಾ ಮೂಲಕ ಕಚ್ಚಾತೈಲ ಖರೀದಿ ನಿಲ್ಲಿಸುವ ಬಗ್ಗೆ ಈವರೆಗೂ ಭಾರತದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.












Click it and Unblock the Notifications