ಉದಯನಿಧಿ 'ಸನಾತನ' ಹೇಳಿಕೆ ಬೆನ್ನಲ್ಲೇ ಮೀಸಲಾತಿ ಪರ ಬ್ಯಾಟ್ ಬೀಸಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ನಾಗಪುರ, ಸೆಪ್ಟೆಂಬರ್ 07: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮ ಕುರಿತು ಹೇಳಿಕೆ ದೇಶದಾದ್ಯಂತ ಭಾರೀ ವಿವಾದವನ್ನೇ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಬೀಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ( ಆರ್‌ಎಸ್‌ಎಸ್ ) ಮುಖ್ಯಸ್ಥ ಮೋಹನ್ ಭಾಗವತ್ ಅವರು ಮೀಸಲಾತಿ ಪರ ಬ್ಯಾಟ್ ಬೀಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಛೇರಿಯಾದ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಭಾಗವತ್, 'ನಮ್ಮ ಯುವಕರು ವೃದ್ಧರಾಗುವ ಮುನ್ನವೇ ಅಖಂಡ ಭಾರತ ಅಥವಾ ಅವಿಭಜಿತ ಭಾರತ ವಾಸ್ತವವಾಗಲಿದೆ' ಎಂದು ಹೇಳಿದ್ದಾರೆ.

'ನಮ್ಮ ಸಮಾಜದಲ್ಲಿ ಅಸಮಾನತೆ ಇರುವವರೆಗೂ ದೇಶದಲ್ಲಿ ಮೀಸಲಾತಿ ಇರಬೇಕು' ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.
1947 ರಲ್ಲಿ ಭಾರತದಿಂದ ಬೇರ್ಪಟ್ಟವರು ಈಗ ತಮ್ಮ ತಪ್ಪನ್ನು ಅರಿತುಕೊಳ್ಳುತ್ತಿದ್ದಾರೆ. ಈಗಿನ ಯುವ ಪೀಳಿಗೆಗೆ ವಯಸ್ಸಾಗುವ ಮೊದಲು 'ಅಖಂಡ ಭಾರತ' ನಿಜವಾಗಲಿದೆ ಎಂದು ಹೇಳಿದ್ದಾರೆ.
'ನಾವು ಐತಿಹಾಸಿಕವಾಗಿ ಸಾಮಾಜಿಕ ಅಸಮಾನತೆಯನ್ನು ಶಾಶ್ವತಗೊಳಿಸಿದ್ದೇವೆ. 2000 ವರ್ಷಗಳಿಂದ ನಮ್ಮ ಸಹ ಮಾನವರನ್ನು ನಿರ್ಲಕ್ಷಿಸಿದ್ದೇವೆ. ಈ ಅನ್ಯಾಯವನ್ನು ಪರಿಹರಿಸಬೇಕಿದೆ. ಸಮಾಜದಲ್ಲಿ ಸಮಾನತೆ ಸಾಧಿಸುವವರೆಗೆ ನಾವು ಮೀಸಲಾತಿಯಂತಹ ವಿಶೇಷ ಕ್ರಮಗಳನ್ನು ಜಾರಿಗೊಳಿಸುವುದನ್ನು ಮುಂದುವರಿಸಬೇಕು. ಸಂವಿಧಾನದಲ್ಲಿ ವಿವರಿಸಿರುವ ಮೀಸಲಾತಿಯನ್ನು ಆರ್‌ಎಸ್‌ಎಸ್ ಸಂಪೂರ್ಣವಾಗಿ ಬೆಂಬಲಿಸುತ್ತದೆ' ಎಂದು ಅವರು ತಿಳಿಸಿದ್ದಾರೆ.
ಸಮಾಜದಲ್ಲಿ ತಾರತಮ್ಯವು ಯಾವಾಗಲೂ ಗೋಚರಿಸದಿದ್ದರೂ ಸಹ ಅಸ್ತಿತ್ವದಲ್ಲಿದೆ ಎಂದು ಭಾಗವತ್ ಹೇಳಿದ್ದಾರೆ.
ಮೀಸಲಾತಿಗಳು ಕೇವಲ ಆರ್ಥಿಕ ಅಥವಾ ರಾಜಕೀಯ ಸಮಾನತೆಯನ್ನು ಖಾತ್ರಿಪಡಿಸುವುದರ ಬಗ್ಗೆ ಇಲ್ಲ. ಅವು ಜನರಿಗೆ ಗೌರವ ಹಾಗೂ ಘನತೆಯನ್ನು ತರುತ್ತವೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಎರಡು ಸಹಸ್ರಮಾನಗಳಿಂದ ಸಮಾಜದ ಕೆಲವು ವರ್ಗಗಳು ನಿರಂತರ ತಾರತಮ್ಯವನ್ನು ಎದುರಿಸುತ್ತಿವೆ. ತಾರತಮ್ಯವನ್ನು ಎದುರಿಸದವರು ಇನ್ನೂ 200 ವರ್ಷಗಳ ವರೆಗೆ ಕೆಲವು ಅನಾನುಕೂಲತೆಗಳನ್ನು ಸಹಿಸಬೇಕಿದೆ ಎಂದು ಹೇಳಿದ್ದಾರೆ.
ಆಗಸ್ಟ್ 15 ಮತ್ತು ಜನವರಿ 26 ರಂದು ನಾಗ್ಪುರದ ಮಹಲ್ ಮತ್ತು ರೇಶಿಂಬಾಗ್‌ನಲ್ಲಿರುವ ಎರಡೂ ಕ್ಯಾಂಪಸ್‌ಗಳಲ್ಲಿ ಆರ್‌ಎಸ್‌ಎಸ್ ರಾಷ್ಟ್ರಧ್ವಜವನ್ನು ಹಾರಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಸನಾತನ ಧರ್ಮದ ನಿರ್ಮೂಲನೆ ಕುರಿತು ಉದಯನಿಧಿ ಸ್ಟಾಲಿನ್ ಅವರು ಕಳೆದ ವಾರ ನೀಡಿದ ಹೇಳಿಕೆಯು ದೇಶದಾದ್ಯಂತ ವಿವಾದವನ್ನು ಸೃಷ್ಟಿಸಿದೆ. 'ಸಮಾನತೆ ಹಾಗೂ ಘನತೆಯನ್ನು ಎತ್ತಿಹಿಡಿಯದ ಧರ್ಮ ಧರ್ಮವೇ ಅಲ್ಲ. ಸನಾತನ ಧರ್ಮವು ಮಲೇರಿಯಾ, ಕೊರೊನಾ ವೈರಸ್ ಹಾಗೂ ಡೆಂಗ್ಯು ಇದ್ದಂತೆ. ಅದನ್ನು ನಿರ್ಮೂಲನೆ ಮಾಡಲೇಬೇಕು' ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಮೋಹನ್ ಭಾಗವತ್ ಅವರು ಮೀಸಲಾತಿ ಪರ ಬ್ಯಾಟ್ ಬೀಸಿದ್ದಾರೆ.












Click it and Unblock the Notifications