IMD Weather Forecast: ಮೈಕೊರೆಯುವ ಚಳಿ ನಡುವೆ ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಭಾರೀ ಮಳೆ ಸಾಧ್ಯತೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಇದೀಗ ದಟ್ಟ ಮಂಜಿನ ಜೊತೆಗೆ ಶೀತಗಾಳಿ ಬೀಸುತ್ತಿದೆ. ಅದರಲ್ಲೂ ಉತ್ತರ ಭಾಗದಲ್ಲಿ ಭಾರೀ ಚಳಿಗೆ ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆಯೇ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ದಕ್ಷಿಣದ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಶೀತಗಾಳಿ ನಡುವೆಯೇ ಹಲವೆಡೆ ಮಳೆಯಾಗುತ್ತಿದೆ. ಮುಂದಿನ ಹಲವು ದಿನಗಳವರೆಗೆ ಬಹುತೇಕ ಭಾಗಗಳಲ್ಲಿ ಭೀಕರ ಚಳಿ ಮುಂದುಚರೆಯಲಿದ್ದು, ಕೆಲವೆಡೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.

ಎಲ್ಲೆಲ್ಲಿ ಶೀತಗಾಳಿ ಪ್ರಮಾಣ ಹೆಚ್ಚಳ?: ಉತ್ತರ ಭಾರತದ ಹೆಚ್ಚಿನ ಭಾಗಗಳಲ್ಲಿ ಕನಿಷ್ಠ ತಾಪಮಾನವು ಕುಸಿತ ಕಾಣಲಿದ್ದು, ಶೀತಗಾಳಿ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಸಂಜೆ ವೇಳೆ ದಟ್ಟ ಮಂಜಿನ ನಡುವೆ ಭಾರೀ ಚಳಿ ಇರಲಿದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.
ಮುಂದಿನ ಹಲವು ದಿನಗಳವರೆಗೆ ಪಂಜಾಬ್, ಹರಿಯಾಣ, ರಾಜಸ್ಥಾನ, ನವದೆಹಲಿ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ಒಡಿಶಾ ಮತ್ತು ಮಧ್ಯಪ್ರದೇಶದ ಅನೇಕ ಸ್ಥಳಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಕನಿಷ್ಠ ತಾಪಮಾನ ದಾಖಲಾಗಲಿದ್ದು, ಭಾರೀ ಶೀತಗಾಳಿ ಮುಂದುವರೆಯಲಿದೆ ಮುನ್ಸೂಚನೆ ನೀಡಿದೆ.
ತಾಪಮಾನದಲ್ಲಿ ಕುಸಿತ: ರಾಂಚಿ, ಪಾಟ್ನಾ, ವಾರಣಾಸಿ, ಲಕ್ನೋ, ಕಾನ್ಪುರ, ಜೈಪುರ, ಅಜ್ಮೀರ್, ಜೈಸಲ್ಮೇರ್ ಮತ್ತು ಬಿಕಾನೇರ್ ನಗರಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನ ದಾಖಲಾಗುವ ನಿರೀಕ್ಷೆಯಿದೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಇದೇ ರೀತಿಯ ವಾತಾವರಣ ಮುಂದುವರೆಯಲಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬೆಳಗ್ಗೆ ವೇಳೆ ಶೀತಗಾಳಿ ವಾತಾವರಣ ಇರಲಿದೆ ಎಂದು ತಿಳಿಸಿದೆ.
ದಟ್ಟ ಮಂಜು: ಪಂಜಾಬ್ ಮತ್ತು ಈಶಾನ್ಯ ರಾಜಸ್ಥಾನದ ಭರತ್‌ಪುರ, ಕೋಟಾ, ಸವಾಯಿ ಮಾಧೋಪುರ್ ಮತ್ತು ಅಲ್ವಾರ್ ಸೇರಿದಂತೆ ಪ್ರತ್ಯೇಕ ಪ್ರದೇಶಗಳಲ್ಲಿ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ. ಗ್ವಾಲಿಯರ್ ಮತ್ತು ಗುನಾದಂತಹ ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿಯೂ ಇದೇ ರೀತಿಯ ವಾತಾವರಣ ಇರಲಿದೆ. ಈ ಮಧ್ಯೆ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ದಟ್ಟ ಮಂಜು ಕವಿಯಲಿದ್ದು, ಇದು ದೀರ್ಘಕಾಲ ಇರುವುದಿಲ್ಲ ಎಂದು ತಿಳಿಸಿದೆ.
ಎಲ್ಲೆಲ್ಲೆ ಮಳೆ?: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಭಾನುವಾರ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಮಿಳುನಾಡು, ಕೇರಳ ಮತ್ತು ಕರ್ನಾಟಕದ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ಮಹಾರಾಷ್ಟ್ರದ ಪುಣೆ, ಸಾಂಗ್ಲಿ, ಸತಾರಾ, ಕೊಲ್ಲಾಪುರ, ಸೋಲಾಪುರ, ಸಿಂಧುದುರ್ಗ, ರತ್ನಗಿರಿ, ರಾಯಗಢ ಮತ್ತು ಗೋವಾ ಸೇರಿದಂತೆ ದಕ್ಷಿಣ ಆಂಧ್ರಪ್ರದೇಶದ ರಾಯಲಸೀಮಾ, ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳ ಹಲವೆಡೆ ಮೋಡ ಕವಿದ ವಾತಾವರಣ ಇರಲಿದ್ದು, ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಹಲವೆಡೆ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಮತ್ತೊಂದೆಡೆ ಕೆಲವು ಭಾಗಗಳಲ್ಲಿ ಭಾರೀ ಚಳಿಗಾಳಿಗೆ ಜನರು ತತ್ತರಿಸಿ ಹೋಗಿದ್ದಾರೆ.












Click it and Unblock the Notifications