IMD Weather Forecast: ವಿಪರೀತ ಚಳಿ ನಡುವೆ ಈ ಭಾಗಗಳಲ್ಲಿ ಮೂರು ದಿನ ಗುಡುಗು ಸಹಿತ ಮಳೆ ಮುನ್ಸೂಚನೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಭೀಕರ ಚಳಿ ಮುಂದುವರೆದಿದೆ. ಈ ನಡುವೆಯೇ ಹಲವೆವೆಡೆ ಮಳೆಯಾಗುತ್ತಿದೆ. ಹಾಗೆಯೇ ಮುಂದಿನ ಮೂರು ದಿನಗಳ ಕಾಲ ಈ ಭಾಗಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಭೀಕರ ಚಳಿ ನಡುವೆ ದೇಶದ ಹಲವೆಡೆ ಮುಂದಿನ ಹಲವು ದಿನಗಳವರೆಗೂ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಅದರಲ್ಲೂ ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆ ದಟ್ಟ ಮಂಜಿನ ಜೊತೆ ಶೀತಗಾಳಿ ಇರಲಿದ್ದು, ಕೆಲವೆಡೆ ಮಳೆ ಕೂಡ ಆಗಲಿದೆ ಎಂದು ಮುನ್ಸೂಚನೆ ನೀಡಿದೆ. ಈಗಾಗಲೇ ಭಾರೀ ಚಳಿಗಾಳಿಗೆ ಉತ್ತರ ಭಾರತದ ರಾಜ್ಯಗಳ ಜನರು ಬೆದರಿದ್ದಾರೆ.

ದಟ್ಟ ಮಂಜು ಕವಿದ ವಾತಾವರಣ: ದೆಹಲಿ-ಎನ್‌ಸಿಆರ್, ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದ ಹಲವು ಭಾಗಗಳಲ್ಲಿ ಮುಂದಿನ ಹಲವು ದಿನಗಳವರೆಗೆ ಬೆಳಗ್ಗೆ ಹಾಗೂ ಸಂಜೆ ವೇಳೆ ದಟ್ಟ ಮಂಜು ಕವಿದ ವಾತಾವರಣ ಇರಲಿದೆ. ಇದರಿಂದಾಗಿ ವಾಹನ ಸವಾರರು ಹಾಗೂ ಸ್ಥಳೀಯರಿಗೆ ಅಡಚಣೆ ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ಈ ಭಾಗಗಳಲ್ಲಿ ವಾಹನ ಸವಾರರು ಜಾಗ್ರತೆಯಿಂದ ವಾಹನ ಚಾಲನೆ ಮಾಡಬೇಕು ಹಾಗೂ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಿದೆ.
ಎಲ್ಲೆಲ್ಲಿ ಮಳೆ?: ಈ ನಡುವೆಯೇ ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ಮುಂದಿನ ಮೂರು ದಿನ ಭಾರೀ ಹಿಮಪಾತ ಮುಂದುವರೆಯಲಿದೆ ಹಾಗೂ ಪಂಜಾಬ್, ಹರಿಯಾಣ ಮತ್ತು ದೆಹಲಿಯ ಕೆಲವು ಭಾಗಗಳಲ್ಲಿ ಸಾಧಾರಣ ಮಳೆ ಆಗಲಿದ್ದು, ಇದರಿಂದ ಚಳಿ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.
ನವದೆಹಲಿ ಹವಾಮಾನ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು (ಜನವರಿ 2) ಕನಿಷ್ಠ ತಾಪಮಾನ 7-9 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇರಲಿದೆ ಎಂದು ಐಎಂಡಿ ತಿಳಿಸಿದೆ. ಬೆಳಗ್ಗೆ ವೇಳೆ ದಟ್ಟ ಮಂಜು ಕವಿದ ವಾತಾವರಣ ಇರಲಿದ್ದು, ವಿಮಾನ ಮತ್ತು ರೈಲು ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಜೊತೆಗೆ ಈ ಭಾಗದಲ್ಲಿ ಜನವರಿ 5ರ ವರೆಗೆ ಭಾರೀ ಶೀತಗಾಳಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.
ಯೆಲ್ಲೋ ಅಲರ್ಟ್ ಘೋಷಣೆ: ಇಂದು (ಜನವರಿ 2) ಬೆಳಗ್ಗೆ ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ದಟ್ಟ ಮಂಜು ಕವಿದ ವಾತವಾರಣ ಇದ್ದು, ಯೆಲ್ಲೋ ಅಲರ್ಟ್ ಜಾರಿಯಲ್ಲಿದೆ. ದಟ್ಟ ಮಂಜು ಹಿನ್ನೆಲೆ ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ. ಮುಂದಿನ ಹಲವು ದಿನಗಳವರೆಗೂ ಈ ಭಾಗದಲ್ಲಿ ಇದೇ ರೀತಿಯ ವಾತಾವರಣ ಮುಂದುವರೆಯುವ ಸಾಧ್ಯತೆಯಿದೆ ಅಂತಲೂ ಮುನ್ಸೂಚನೆ ನೀಡಿದೆ. ಅಲ್ಲದೆ, ತಾಪಮಾನವು 2-3 ಡಿಗ್ರಿಗಳಷ್ಟು ಕಡಿಮೆಯಾಗಬಹುದು ಎಂದು ತಿಳಿಸಿದೆ.
ಸಿಡಿಲಿಗೆ ಓರ್ವ ಬಲಿ: ಹೊಸ ವರ್ಷದ ಮೊದಲ ದಿನ ಜನವರಿ 1ರ ಗುರುವಾರ ರಾಜಸ್ಥಾನದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಇದೇ ವೇಳೆ ಚುರು ಜಿಲ್ಲೆಯ ಸದುಲ್ಶಹರ್‌ನಲ್ಲಿ ಮನೆಗೆ ಸಿಡಿಲು ಬಡಿದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಇದೀಗ ಇಂದು (ಜನವರಿ 2) ಭಾರೀ ಚಳಿ ಮುಂದುವರೆದಿದೆ.
ಜನವರಿ 1ರಂದು ಬಿಕಾನೆರ್, ಚಿತ್ತೋರ್‌ಗಢ, ಅಜ್ಮೀರ್ ಮತ್ತು ಚುರು ಜಿಲ್ಲೆಗಳಲ್ಲಿ ಭಾರೀ ಮಳೆಯದ ಕಾರಣ ಇದೀಗ ಚಳಿ ಮತ್ತಷ್ಟು ಹೆಚ್ಚಾಗಿದೆ. ಬುಧವಾರ ರಾತ್ರಿಯಿಂದಲೂ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಅದರಲ್ಲೂ ಚಿತ್ತೋರ್‌ಗಢ ಜಿಲ್ಲೆಯಲ್ಲಿ ಭಾರೀ ಮಳೆಯಾದ ಬಗ್ಗೆ ವರದಿಯಾಗಿದೆ. ಭಾರೀ ಮಳೆ ಪರಿಣಾಮ ಗುರುವಾರದಿಂದ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ದಟ್ಟ ಮಂಜು ಮುಂದುವರೆದಿದೆ.
ಐಎಂಡಿ ಪ್ರಕಾರ, ಅಲ್ವಾರ್‌ನಲ್ಲಿ ಕನಿಷ್ಠ ತಾಪಮಾನ ಐದು ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿದಿದೆ. ಪರಿಣಾಮ ಚಳಿ ಪ್ರಮಾಣ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜಸ್ಥಾನದ ಜೈಸಲ್ಮೇರ್, ಶ್ರೀಗಂಗಾನಗರ ಮತ್ತು ಹನುಮಾನ್‌ಗಢ ಜಿಲ್ಲೆಗಳಲ್ಲಿ ದಟ್ಟವಾದ ಮಂಜು ಆವರಿಸಿದ್ದು, ಈ ಭಾಗಗಳ ನಿವಾಸಿಗಳಿಗೆ ತುಂಬಾ ತೊಂದರೆ ಆಗಿದೆ. ಅಲ್ಲದೆ, ಭಾರೀ ಮಳೆ ಹಾಗೂ ದಟ್ಟ ಮಂಜು ಹಿನ್ನೆಲೆ ರಸ್ತೆ ಮತ್ತು ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications