Rain Alert: ಚಂಡಮಾರುತ ಪ್ರಸರಣ ಪ್ರಭಾವ: ವಿವಿಧ ಭಾಗಗಳಲ್ಲಿ ಸೆ.27ರವರೆಗೆ ಭಾರೀ ಮಳೆ
India Weather Forecast: ಒಂದೂವರೆ ತಿಂಗಳಿನಿಂದ ಅಬ್ಬರಿಸುತ್ತಿದ್ದ ಮುಂಗಾರು ಮಳೆ ಕೊಂಚ ತಗ್ಗಿದೆ. ಗುಜರಾತ್, ರಾಜಸ್ಥಾನ, ಹರಿಯಾಣ, ಪಂಜಾಬ್ ಹಾಗೂ ಹಿಮಾಚಲ, ಜಮ್ಮು-ಕಾಶ್ಮೀರ, ಉತ್ತರ ಪ್ರದೇಶದ ಕೆಲ ಭಾಗಗಳಿಂದ ಮುಂಗಾರು ಮಳೆ ಹಿಂತೆಗೆದುಕೊಳ್ಳುವ ವಾತಾವರಣ ಇದೆ. ಈ ನಡುವೆ ವಿವಿಧೆಡೆ ಸೃಷ್ಟಿಯಾಗಿರುವ ಚಂಡಮಾರುತ ಪ್ರಸರಣ ಪ್ರಭಾವ ಹಾಗೂ ಕಡಿಮೆ ಒತ್ತಡದ ಪ್ರದೇಶವು ನಿರ್ಮಾಣಗೊಳ್ಳಲಿದೆ. ಇದರಿಂದಾಗಿ ವಿವಿಧ ಭಾಗಳಲ್ಲಿ ಮುಂದಿನ 05ದಿನ ರಣಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೊಂಕಣ-ಗೋವಾ, ಮರಾಠವಾಡ, ಗುಜರಾತ್ ಪ್ರದೇಶ ಮತ್ತು ಮಧ್ಯ ಮಹಾರಾಷ್ಟ್ರದಲ್ಲಿ ಹಗುರದಿಂದ ಮಧ್ಯಮ ಮಳೆ ನಿರೀಕ್ಷೆ ಇದೆ. ಕೆಲವೆಡೆ ಮಳೆ ದುರ್ಬಲಗೊಳ್ಳಲಿದೆ. ಮುಂಗಾರು ಮಳೆಯ ಅಂತ್ಯಕಾದಲ್ಲಿ ನಾವಿದ್ದೇವೆ. ಈ ತಿಂಗಳಾಂತ್ಯಕ್ಕೆ ಮುಂಗಾರು ಅವಧಿ ಕೊನೆಗೊಂಡು ಅಕ್ಟೋಬರ್‌ನಿಂದ ಹಿಂಗಾರು ಮಳೆ, ಚಳಿ ಶುರುವಾಗಲಿದೆ.

ಸೆಪ್ಟೆಂಬರ್ 22 ರಂದು ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಂಡಿದೆ. ಮುಂದಿನ 24 ಗಂಟೆಗಳಲ್ಲಿ ಈ ವೈಪರೀತ್ಯವು ತನ್ನ ಮೂಲ ಸ್ಥಳದಿಂದ ಪಶ್ಚಿಮ-ವಾಯುವ್ಯ ದಿಕ್ಕಿನತ್ತ ಚಲಿಸಲಿದೆ. ಸೆಪ್ಟೆಂಬರ್ 25ರಂದು ಮತ್ತೊಂದು ಹೊಸ ಕಡಿಮೆ ಒತ್ತಡದ ಪ್ರದೇಶ ಸಮುದ್ರ ಮೇಲ್ಮೈನಲ್ಲಿ ನಿರ್ಮಾಣಗೊಳ್ಳುವ ನಿರೀಕ್ಷೆ ಇದೆ. ಇದು ಸೆಪ್ಟಂಬರ್ 27 ರ ಸುಮಾರಿಗೆ ದಕ್ಷಿಣ ಒಡಿಶಾ-ಉತ್ತರ ಆಂಧ್ರ ಕರಾವಳಿಯನ್ನು ತಲುಪಬಹುದೆಂದು ಊಹಿಸಲಾಗಿದೆ. ಹವಾಮಾನ ತಜ್ಞರು ದೇಶದ ವಿವಿಧ ಭಾಗಗಳಿಗೆ ಸಾಧಾರಣದಿಂದ ಭಾರೀ ಮಳೆ ಎಚ್ಚರಿಕೆ ನೀಡಿದ್ದಾರೆ.
ಕರಾವಳಿ ಭಾಗದಲ್ಲಿ ಪ್ರತಿ ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಅದು ಮುಂದಿನ ಎರಡು ದಿನದಲ್ಲಿ 60ಕಿಲೋ ಮೀಟರ್ ವೇಗಕ್ಕೂ ತಲುಪಬಹುದು. ಆದ್ದರಿಂದ ಒಡಿಶಾ, ಆಂಧ್ರ ಪ್ರದೇಶ, ಬಂಗಾಳಕೊಲ್ಲಿ ಕರಾವಳಿ ಭಾಗದ ಮೀನುಗಾರರಿಗೆ ಸೆಪ್ಟಂಬರ್ 25-27ರವರೆಗೆ ಮೀನುಗಾರಿಕೆಗೆ ಇಳಿಯದಂತೆ ಐಎಂಡಿ ಎಚ್ಚರಿಕೆ ನೀಡಿದೆ.
ಎಲ್ಲೆಲ್ಲಿ ಭಾರೀ ಮಳೆ ಎಚ್ಚರಿಕೆ ಇದೆ?
ಮುಂದಿನ ಮೂರರಿಂದ ಐದು ದಿನಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಮಳೆ, ಗುಡುಗು ಸಹಿತ ಗಾಳಿ ಮತ್ತು ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಪೂರ್ವ ಮತ್ತು ಮಧ್ಯ ಭಾರತದ ಬಿಹಾರ, ಜಾರ್ಖಂಡ್, ಅಂಡಮಾನ್-ನಿಕೋಬಾರ್ ದ್ವೀಪಗಳು, ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ಒಡಿಶಾದಲ್ಲಿ ಭಾರೀ ಮಳೆ ಆಗುವ ನಿರೀಕ್ಷೆ ಇದೆ. ಸೆಪ್ಟಂಬರ್ 22, 24, 25 ರಂದು ಭಾರೀ ಮಳೆ ಆಗಲಿದೆ. ಕೆಲವೆಡೆ ಸೆ. 27 ರವರೆಗೆ ಇದೇ ಜೋರು ಮಳೆ ಮುಂದುವರಿಯಲಿದೆ.
ಸೆಪ್ಟೆಂಬರ್ 22 ರಂದು ಒಡಿಶಾದಲ್ಲಿ ಭಾರೀ ಮಳೆ ಸಾಧ್ಯ ನಿರೀಕ್ಷೆ ಇದೆ. ಈಶಾನ್ಯ ಭಾರತ ಭಾಗಗಳಾದ ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರದಲ್ಲಿ ಮೂರು ದಿನ ರಣಮಳೆ ಮುನ್ಸೂಚನೆ ಇದೆ. ಅದೇ ರೀತಿ ದಕ್ಷಿಣ ಭಾರತದ ಕೇರಳ, ರಾಯಲಸೀಮಾ, ಕರಾವಳಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದ ವಿವಿಧ ಕಡೆಗಳಲ್ಲಿ ಸೆಪ್ಟಂಬರ್ 25-27ರ ಮಧ್ಯದಲ್ಲಿ ಭಾರೀ ಮಳೆ ಆಗಲಿದೆ. ನಾಳೆ ನಾಡಿದ್ದು, ಉತ್ತಮ ಮಳೆ ಸುರಿಯುವ ಸಂಭವವಿದೆ ಎಂದು ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ.












Click it and Unblock the Notifications