ಇಡ್ಲಿ-ಸಾಂಬಾರ್ನಿಂದಲೇ ಪ್ರವಾಸಿಗರು ಕಡಿಮೆಯಾಗಿದ್ದಾರೆ ಎಂದ ಶಾಸಕ
ಬೆಂಗಳೂರಿನಲ್ಲಿ ಹಲವು ಹೋಟೆಲ್‌ಗಳಲ್ಲಿ ತಯಾರಿಸುವ ಇಡ್ಲಿಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿವೆ ಎನ್ನುವ ಆಘಾತಕಾರಿ ವಿಚಾರ ಪತ್ತೆಯಾಗಿದೆ. ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಕವರ್ ಬಳಕೆ, ಪಾರ್ಸಲ್ ಮಾಡಲು ಪ್ಲಾಸ್ಟಿಕ್ ಬಳಕೆ ಇದಕ್ಕೆ ಕಾರಣವೇ ಹೊರತು, ಇಡ್ಲಿಯಿಂದ ಕ್ಯಾನ್ಸರ್ ಬರುವುದಿಲ್ಲ ಎನ್ನುವ ಸ್ಪಷ್ಟನೆ ಕೂಡ ಸಿಕ್ಕಿದೆ. ಆದರೆ ಇಲ್ಲೊಬ್ಬರು ಶಾಸಕರು ನಮ್ಮ ರಾಜ್ಯಕ್ಕೆ ಪ್ರವಾಸಿಗರು ಕಡಿಮೆಯಾಗಲು ಇಡ್ಲಿ-ಸಾಂಬಾರ್ ಕಾರಣ ಎಂದು ದೂರಿದ್ದಾರೆ.
ಹೌದು, ಪ್ರವಾಸೋದ್ಯಮಕ್ಕೆ ಹೆಸರಾಗಿರುವ ಗೋವಾ ರಾಜ್ಯದಲ್ಲಿ ಪ್ರವಾಸಿಗರು ಕಡಿಮೆಯಾಗಿದ್ದು, ಇದಕ್ಕೆ ಪಾಪದ ಇಡ್ಲಿ - ಸಾಂಬಾರ್ ಅನ್ನು ದೂಷಿಸಲಾಗುತ್ತಿದೆ. ಬಿಜೆಪಿ ಶಾಸಕ ಮೈಕೆಲ್ ಲೋಬೊ ಮಾತನಾಡಿ, ಗೋವಾದ ಪ್ರವಾಸೋದ್ಯಮ ಉದ್ಯಮವು ಇಲ್ಲಿನ ಸ್ಥಳೀಯ ಸಂಸ್ಕೃತಿ ಮತ್ತು ಪಾಕಪದ್ಧತಿಯಲ್ಲಿ ಪ್ರದರ್ಶಿಸಲು ವಿಫಲವಾಗಿದ್ದು, ಬೀಚ್‌ಗಳಲ್ಲಿ ಇಡ್ಲಿ ಸಾಂಬಾರ್ ಮಾರಾಟ ಮಾಡುತ್ತಿರುವುದೇ ವಿದೇಶಿ ಪ್ರವಾಸಿಗರ ಕುಸಿತಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ರಾಜ್ಯದ ಹೋಟೆಲ್ ಉದ್ಯಮದ ಸಮಸ್ಯೆಗಳನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲು ಅವರನ್ನು ಭೇಟಿ ಮಾಡುವ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ ಲೋಬೊ, ರಾಜ್ಯದಲ್ಲಿ ಕಸ ಸಂಗ್ರಹಣೆ, ಬೀದಿ ನಾಯಿಗಳು ಮತ್ತು ಟ್ಯಾಕ್ಸಿ ನಿರ್ವಾಹಕರ ಸಮಸ್ಯೆಗಳನ್ನು ಬಗೆಹರಿಸದೇ ಇದ್ದರೆ ಗೋವಾದ ಪ್ರವಾಸೋದ್ಯಮಕ್ಕೆ ಕರಾಳ ದಿನಗಳು ಕಾದಿವೆ ಎಂದು ಹೇಳಿದ್ದಾರೆ. ಲೋಬೋ ಸ್ಟಾರ್ ಹೋಟೆಲ್ ಸೇರಿದಂತೆ ಹಲವು ಪ್ರವಾಸೋದ್ಯಮ ಆಸ್ತಿಗಳನ್ನು ಹೊಂದಿದ್ದಾರೆ.
ನಾವು ಮೊದಲು ತಪ್ಪಿ ಮಾಡುತ್ತಿದ್ದೇವೆ, ಹೋಟೆಲ್ (Shack) ಗಳಲ್ಲಿ ಇಡ್ಲಿ ಸಾಂಬಾರ್ ಮಾರಾಟ ಮಾಡಲು ಪ್ರಾರಂಭಿಸಿದ್ದೇವೆ. ಹೋಟೆಲ್ ಮಾಲೀಕರು ಸಬ್‌ಲೀಸ್ ಮಾಡುತ್ತಿದ್ದರೆ ಇನ್ನೇನು ಉಳಿಯುತ್ತದೆ. ವಿದೇಶದಿಂದ ಬರುವ ಪ್ರವಾಸಿಗರಿಗೆ ನಾವು ಏನು ಹೇಳಲಿದ್ದೇವೆ? ನಾವು ಬೀಚ್‌ನಲ್ಲಿ ನಿಮಗೆ ಇಡ್ಲಿ ಸಾಂಬಾರ್ ನೀಡುತ್ತೇವೆ ಎನ್ನಬೇಕಾ? ನಾನು ಇಲ್ಲಿ ಇಡ್ಲಿ ಸಾಂಬಾರ್ ಅನ್ನು ವಿರೋಧಿಸುತ್ತಿಲ್ಲ ಆದರೆ ಗೋವಾದ ಪಾಕಪದ್ಧತಿಯನ್ನು ನಾವು ಉತ್ತೇಜಿಸಬೇಕು ಎಂದು ಹೇಳಿದರು.
ಬೀಚ್‌ನಲ್ಲಿ ನೀಡಬೇಕಾದ ಆಹಾರ ಇಡ್ಲಿ ಸಾಂಬಾರ್ ಅಲ್ಲ, ಅದು ಗೋವಾದ ಪಾಕ ಪದ್ಧತಿಯಾಗಿರಬೇಖು. ಗೋವಾದ ಪ್ರಮುಖ ಆಹಾರ ಸಮುದ್ರ ಆಹಾರ, ಪ್ರವಾಸಿಗರು ಬರುತ್ತಿರುವುದು ಅದಕ್ಕೇ, ಹೈದರಾಬಾದ್, ಕರ್ನಾಟಕ, ಮಹಾರಾಷ್ಟ್ರದ ಸಂಸ್ಕೃತಿಯನ್ನು ಗೋವಾ ಬೀಚ್‌ನಲ್ಲಿ ತೋರಿಸಬೇಕೆ ಎಂದು ಪ್ರಶ್ನೆ ಮಾಡಿದರು.
"ಬೆಂಗಳೂರು, ಪುಣೆ, ದೆಹಲಿ, ಹೈದಾರಾಬಾದ್‌ನವರಿಗೆ ಹೋಟೆಲ್ ನಡೆಸಲು ನೀಡಿರುವ ಎಲ್ಲಾ ಪರವಾನಗಿಗಳನ್ನು ರದ್ದುಗೊಳಿಸುವಂತೆ ನಾನು ಪ್ರವಾಸೋದ್ಯಮ ಇಲಾಖೆಗೆ ಹೇಳಿದ್ದೇನೆ. ನಮ್ಮ ಬೀಚ್ ಹೋಟೆಲ್‌ಗಳನ್ನು ಬೇರೆ ರಾಜ್ಯದವರಿಗೆ ಉಪಗುತ್ತಿಗೆ ಕೊಡುವುದಕ್ಕೆ ಅವಕಾಶವಿಲ್ಲ" ಎಂದು ಹೇಳಿದರು.
2023ರಲ್ಲಿ ಗೋವಾದ ಬೀಚ್ ಹೋಟೆಲ್‌ಗಳು ಸ್ಥಳೀಯ ಆಹಾರಗಳನ್ನು ಪೂರೈಸುವುದನ್ನು ಕಡ್ಡಾಯ ಎಂದು ಸರ್ಕಾರ ಘೋಷಣೆ ಮಾಡಿದೆ. ಗೋವಾದ ಆಹಾರವನ್ನು ಸವಿಯಲು ಜನ ಬೀಚ್ ಹೋಟೆಲ್‌ಗೆ ಬರುತ್ತಾರೆ. ಆದರೆ ಇಲ್ಲಿ ಗೋವಾದ ಆಹಾರ ಸಿಗುತ್ತಿಲ್ಲ ಎಂದು ಅನೇಕ ಬಾರಿ ದೂರುಗಳು ಬಂದಿವೆ ಎಂದು ಗೋವಾ ಪ್ರವಾಸೋದ್ಯಮ ಸಚಿವ ರೋಹನ್ ಖೌಂಟೆ ಹೇಳಿದ್ದಾರೆ.












Click it and Unblock the Notifications