ಮೇವು ಹಗರಣ ಬೆಳಕಿಗೆ ತಂದ ಐಎಎಸ್ ಖರೆಗೆ ಸಲಾಂ

IAS Amit Khare is the first officer who unravelled multi-crore fodder scam
ನವದೆಹಲಿ, ಅ.1: ಐಎಎಸ್ ಅಧಿಕಾರಿ ಅಮಿತ್ ಖರೆ ಬಿಹಾರದಲ್ಲಿ 1996ರಲ್ಲಿ ಜನವರಿ 27ರಂದು ಒಂದು ಕಡತದಲ್ಲಿ ಕೈಯಿಡುತ್ತಾರೆ. ಮುಂದೆ ಅದು ಭ್ರಷ್ಟಚಾರದ ಹುಲ್ಲುಗಾವಲನ್ನು ಹೊಸಕಿ ಹಾಕಲು ರಹದಾರಿಯಾಗುತ್ತದೆಂದೂ ಮತ್ತು ತತ್ಫಲವಾಗಿ, ಬಿಹಾರದಲ್ಲಿ ಅಲ್ಲಿಂದೀಚೆಗೆ ಭಾರಿ ಪ್ರಮಾಣದ ಭ್ರಷ್ಟಾಚಾರ ಮಾಡಲು ರಾಜಕಾರಣಿಗಳಿಗೆ ಎಚ್ಚರಿಕೆಯ ಗಂಟೆಯಾಗುತ್ತದೆಂದು ಖರೆ ಅಂದರೂ ಖರೆ ಅವರಿಗೆ ಅಂದು ತಿಳಿದಿರಲಿಲ್ಲ.

1996ರಲ್ಲಿ ಜನವರಿ 27: ಬಿಹಾರದ ಪಶ್ಚಿಮ ಸಿಂಗಬುಮ್ ಜಿಲ್ಲಾ ಕೇಂದ್ರವಾದ ಛಾಯ್ ಬಾಸಾದಲ್ಲಿ ಅಂದು ಜಿಲ್ಲಾಡಳಿತ ಎಂದಿನಂತೆ ತಣ್ಣಗೆ ತನ್ನ ಕೆಲಸದಲ್ಲಿ ಮಗ್ನವಾಗಿತ್ತು. 1985ನೇ ಬ್ಯಾಚಿನ IAS ಅಧಿಕಾರಿ ಅಮಿತ್ ಖರೆ ಅವರು ಅಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದರು. ಅಂದಹಾಗೆ ಅವರೀಗ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದಾರೆ.

ಸರಿ ಅಂದಿನ ಛಾಯ್ ಬಾಸಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮಿತ್ ಖರೆಗೆ ಅವರ ಮೇಲಾಧಿಕಾರಿ, ಹೆಚ್ಚುವರಿ ಹಣಕಾಸು ಆಯುಕ್ತ ಎಸ್ ವಿಜಯ್ ರಾಘವ್ ಅವರೊಂದು ಆದೇಶ ನೀಡಿದ್ದರು. 'ಜಿಲ್ಲಾ ಖಜಾನೆಯಿಂದ ಭಾರಿ ಪ್ರಮಾಣದಲ್ಲಿ ಹಣ ತೆಗೆಯಲಾಗುತ್ತಿದೆ. ಅದರ ಮೇಲೆ ಒಂದು ಕಣ್ಣಿಟ್ಟಿರಿ' ಎಂಬುದು ವಿಜಯ್ ರಾಘವ್ ನೀಡಿದ್ದ ಆದೇಶದ ತಾತ್ಪರ್ಯವಾಗಿತ್ತು. ಅಂದು ಬಿಹಾರ ಆರ್ಥಿಕವಾಗಿ ಶೋಚನೀಯ ಸ್ಥಿತಿಯಲ್ಲಿತ್ತು. ಇದರ ಬಗ್ಗೆ RBI ಸಹ ತನ್ನ ದುಃಖವನ್ನು ತೋಡಿಕೊಂಡಿತ್ತು.

ಮುಂದೇನಾಯ್ತು? ಐಎಎಸ್ ಅಮಿತ್ ಖರೆ ಅವರ ಮಾತಿನಲ್ಲೇ ಕೇಳಿ:
ಸ್ವಲ್ಪ ಅಲರ್ಟ್ ಆಗಿ ಕಡತದೊಳಕ್ಕೆ ಹುದುಗಿದಾಗ 1995ರ ನವೆಂಬರ್ ಮತ್ತು ಡಿಸೆಂಬರಿಲ್ಲಿ 10 ಕೋಟಿ ರೂ. ಮತ್ತು 9 ಕೋಟಿ ರೂ ಗಳನ್ನು ವಿತ್ ಡ್ರಾಲ್ ಮಾಡಿರುವುದು ಪತ್ತೆಯಾಗಿತ್ತು. ಯಾವುದೋ ಹಳೆಯ ಬಿಲ್ ಪಾವತಿ ಮಾಡಿರಬೇಕು ಅಂದುಕೊಂಡು ಸುಮ್ಮನಾಗೋಣ ಅಂದುಕೊಂಡಿದ್ದೆ. ಆದರೆ ದುಃಸ್ಥಿತಿಯಲ್ಲಿದ್ದ ಬಿಹಾರದ ಆರ್ಥಿಕ ಪರಿಸ್ಥಿತಿ ನನ್ನನ್ನು ಬಾಧಿಸಿತು. ಹಾಗಾಗಿ, ತಕ್ಷಣ ಪಶುಸಂಗೋಪನೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಬುಲಾವ್ ನೀಡಿ, ಕೋಟ್ಯಂತರ ರೂ ವಿತ್ ಡ್ರಾಲ್ ಬಗ್ಗೆ ವಿವರಣೆ ನೀಡುವಂತೆ ಆದೇಶಿಸಿದೆ.

ಆದರೆ ಅವರೆಲ್ಲಾ ಅಲ್ಲಿಂದ ಪರಾರಿಯಾಗಿಬಿಟ್ಟರಂತೆ. ನನ್ನ ಅನುಮಾನ ತೀವ್ರಗೊಂಡು ನಾನೇ ಪಶುಸಂಗೋಪನೆ ಇಲಾಖೆ ಕಚೇರಿಯತ್ತ ದೌಡಾಯಿಸಿದೆ. ಅಲ್ಹೋಗಿ ನೋಡಿದರೆ ಏನಿತ್ತು!? ಯಾರೋ ಆತುರಾತುರವಾಗಿ ಫೈಲುಗಳನ್ನೆಲ್ಲ ಹರಿದುಬಿಸಾಕಿದ್ದರು. ಹತ್ತಾರು ಲಕ್ಷ ರೂಪಾಯಿಗಳ ಬಿಲ್ಲುಗಳು ಹರಿದು ಚಿಲ್ಲಾಪಿಲ್ಲಿಯಾಗಿದ್ದವು. ಸರಬರಾಜುದಾರರ ಸೀಲ್, ಪ್ಯಾಡ್ ಗಳೂ ಅಲ್ಲಿ ಬಿದ್ದಿದ್ದವು.

ತಡಮಾಡದೆ ಪಶುಸಂಗೋಪನೆ ಇಲಾಖೆಯಲ್ಲಿದ್ದ ಖಜಾನೆಯನ್ನು ಸೀಲ್ ಮಾಡಲು ಆದೇಶಿಸಿದೆ. ಅಲ್ಲಿ ಏನೇನು ಸಿಕ್ಕಿತೋ ಅದನ್ನೆಲ್ಲಾ ಲೆಕ್ಕ ಮಾಡಿಟ್ಟೆವು. ಮತ್ತು ಆ ಇಡೀ ಪ್ರಕ್ರಿಯೆಯನ್ನು ವಿಡಿಯೋ ಮಾಡಿಸಿಟ್ಟೆ. ಅದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿದ್ದ ಇತರೆ ಬ್ಲಾಕ್ ಆಫೀಸರುಗಳಿಗೂ ಕಚೇರಿಯಲ್ಲಿರುವಂತೆ ಸೂಚಿಸಿದೆ. ಆದರೆ ಅಲ್ಲಿಯೂ ಅಧಿಕಾರಿಗಳು ಪರಾರಿಯಾಗಿಬಿಟ್ಟರು. ತತ್ ಕ್ಷಣವೇ ರಾಂಚಿ ಮತ್ತು ಡುಮ್ಕಾದಲ್ಲಿಯೂ ದಾಳಿ ನಡೆಸಿದೆವು. ಆಗ ಗೊತ್ತಾದ ವಿಷಯವೆಂದರೆ ಅನೇಕ ವರ್ಷಗಳಿಂದ ಈ ಖಜಾನೆಗಳಿಂದ ಅಕ್ರಮವಾಗಿ ಕೋಟ್ಯಂತರ ರೂಪಾಯಿ ವಿತ್ ಡ್ರಾಲ್ ಆಗುತ್ತಿದೆ ಎಂಬುದು ಬೆಳಕಿಗೆ ಬಂತು. ಛಾಯ್ ಬಾಸಾ ಜಿಲ್ಲಾ ಖಜಾನೆಯಿಂದಲೇ 37.7 ಕೋಟಿ ರೂ. ಹಣ ತೆಗೆದಿರುವುದು ಪತ್ತೆಯಾಯಿತು.

ಅದು ಲಾಲು ಸರಕಾರದಲ್ಲಿ ನಡುಕವನ್ನುಂಟು ಮಾಡಿತು. ಕಳ್ಳ ರಾಜಕಾರಣಿಗಳು ಮಾಡುವಂತೆ ಆಗಲೂ ಸಮಿತಿಯನ್ನು ರಚಿಸಲಾಯಿತು. ಫೂಲ್ ಚಂದ್ ಸಿಂಗ್ ಎಂಬ ಹಿರಿಯ ಆಯುಕ್ತನ ನೇತೃತ್ವದಲ್ಲಿ ಸಮಿತಿ ಅಸ್ತಿತ್ವಕ್ಕೆ ಬಂದಿತು. ಆದರೆ ಅದರಲ್ಲಿದ್ದವರೆಲ್ಲಾ 'ವಿತ್ ಡ್ರಾಲ್ ಸಿಂಪ್ಟಮ್'ಗೆ ತುತ್ತಾಗಿ ಕೋಟ್ಯಂತರ ಹಣವನ್ನು ಅಕ್ರಮವಾಗಿ ವಿತ್ ಡ್ರಾಲ್ ಮಾಡಿದ್ದವರೇ! ನಾಳಿದ್ದು ಶಿಕ್ಷೆಗೊಳಗಾಗುವ 45 ಮಂದಿ ಭ್ರಷ್ಟರ ಪೈಕಿ ಈ ಸಿಂಗಪ್ಪನೂ ಒಬ್ಬ.

ಇತ್ತ ಖರೆ ತಮ್ಮ ಬುಡಕ್ಕೆ ನೀರು ತರುತ್ತಿದ್ದರೆ ಅದನ್ನು ನೋಡಿಕೊಂಡು ಸುಮ್ಮನಿರಲು ಲಾಲು ಏನು ಅಮಾಯಕ ಮುಖ್ಯಮಂತ್ರಿಯೇ? ಖರೆಯನ್ನು ತಕ್ಷಣ, ಕೆಲಸಕ್ಕೆ ಬಾರದ ಬೇರೊಂದು ಇಲಾಖೆಗೆ ವಗಾಯಿಸಲಾಯಿತು (ವರ್ಗಾಯಿಸಲಾಯಿತು). ಈ ಮಧ್ಯೆ 2002ರಿಂದ 2008ರವರೆಗೂ ಸಿಬಿಐ ಕೋರ್ಟಿಗೆ ಸಾಕ್ಷ್ಯ ಹೇಳಲು ಅಲೆದಾಟ ನಡೆಸಿದರು. ಏನೇ ಆದರೂ ಅಂದು ತಮ್ಮ ಕಣ್ಣೆದುರಿಗೆ ನಡೆದ ಭ್ರಷ್ಟಾಚಾರದ ವಿರುದ್ಧ ಖಡಕ್ ಸಾಕ್ಷ್ಯ ನುಡಿದು ಎಲ್ಲರೂ ಜೈಲು ಪಾಲಾಗುವಂತೆ ನೋಡಿಕೊಂಡರು. [ಮೇವು ಹಗರಣದ ಹೀರೋ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+