ಲಡಾಖ್ ಗಡಿಯಲ್ಲಿ ಚೀನಾ ಬಲ ಪ್ರದರ್ಶನಕ್ಕೆ ವರದಾನವಾಗಿದ್ದು ಈ ಅಂಶ
ಭಾರತ ಮತ್ತು ಚೀನಾ ಗಡಿಯಲ್ಲಿ ಬಿಗುವಿನ ವಾತಾವರಣ ಮುಂದುವರಿದಿದೆ. ಉಭಯ ದೇಶಗಳ ನಡುವೆ ತಿಕ್ಕಾಟ ಉಲ್ಬಣಿಸಿ, ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಇಪ್ಪತ್ತು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.
ಈ ನಡುವೆ, ಚೀನಾ ಗಡಿ ವಿಚಾರದ ಬಗ್ಗೆ ವಿವರಣೆ ನೀಡಲು ಪ್ರಧಾನಿ ಮೋದಿ ಸರ್ವಪಕ್ಷಗಳ ಸಭೆಯನ್ನು ಶುಕ್ರವಾರ (ಜೂ 19) ಕರೆದಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಸಭೆ ನಡೆಯಲಿದೆ.
ಭಾರತ-ಚೀನಾ ನಡುವೆ ಕೊನೆಯ ಬಾರಿ ಗುಂಡಿನ ಸದ್ದು ಕೇಳಿದ್ದು ಯಾವಾಗ?
ಹಿಂದಿ-ಚೀನಿ ಭಾಯಿಭಾಯಿ ಎಂದು ನೆಹರೂ ಕಾಲದಿಂದಲೂ ಹೇಳುತ್ತಲೇ ಬರುತ್ತಿದ್ದರೂ, ಚೀನಾ ಸದಾ ಒಂದಲ್ಲೊಂದು ದ್ರೋಹ ಬಗೆಯುತ್ತಲೇ ಬರುತ್ತಿದೆ. ಭಾರತದ ಜೊತೆ ಚೀನಾದ ಹಗೆತನಕ್ಕೆ ಗಡಿ ಮತ್ತು ಟಿಬೆಟ್ ಧರ್ಮಗುರು ದಲೈಲಾಮ ವಿಷಯವೂ ಒಂದು ಕಾರಣ.
ಎರಡು ದೇಶಗಳ ಗಡಿಯಲ್ಲಿನ ಆಯಕಟ್ಟಿನ ಸ್ಥಳಗಳಲ್ಲಿ ಚೀನಾ ತನ್ನ ಪ್ರಭಾವನ್ನು ಹೆಚ್ಚಿಸಿಕೊಳ್ಳುತ್ತಲೇ ಬರುತ್ತಿದೆ. ಇನ್ನು, ಹೇಗೆ, ಕೊರೊನಾ ವೈರಸ್, ಚೀನಾಗೆ ಇನ್ನಷ್ಟು ತನ್ನ ಸೇನೆಯನ್ನು ನಿಯೋಜಿಸಲು ಅನುಕೂಲವಾಯಿತು, ಮುಂದೆ..

ಲಡಾಖ್ ಗಡಿಯಲ್ಲಿ ಉದ್ವಿಗ್ನ ವಾತಾವರಣ
ಲಡಾಖ್ ಗಡಿಯಲ್ಲಿ ಉದ್ವಿಗ್ನ ವಾತಾವರಣ ತಿಳಿಗೊಳಿಸಲು ಉಭಯ ದೇಶಗಳ ನಡುವೆ ಹಲುವು ಸುತ್ತಿನ ಮಾತುಕತೆ ನಡೆದು, ಇನ್ನೇನು ಭಾರತ ಮತ್ತು ಚೀನಾ ಗಡಿಯಿಂದ ತಮ್ಮತಮ್ಮ ಸೇನೆಯನ್ನು ಹಿಂದಕ್ಕೆ ಪಡೆದುಕೊಳ್ಳಬಹುದು ಎನ್ನುವ ವಾತಾವರಣ ನಿರ್ಮಾಣವಾಗಿತ್ತು. ಅಷ್ಟರಲ್ಲೇ, ಚೀನಾ ತನ್ನ ಕುತಂತ್ರಿ ಬುದ್ದಿಯನ್ನು ತೋರಿಸಿದೆ.

ಭಾರತ ಕೂಡಾ ತನ್ನ ಬಲ ಪ್ರದರ್ಶನವನ್ನು ಮಾಡಿತ್ತು
ಕಳೆದ ಕೆಲವು ವಾರಗಳಿಂದ ಚೀನಾ, ಲಡಾಕ್ ಗಡಿಯಲ್ಲಿ ಹೆಚ್ಚುವರಿಯಾಗಿ ನಿಯೋಜಿಸಿ, ಮುಂದಿನ ದಿನಗಳಲ್ಲಿ ಸಂಘರ್ಷದ ಸುಳಿವನ್ನು ನೀಡಿತ್ತು. ತನ್ನ ಯೋಧರ ಜೊತೆಗೆ, ಕಾಂಬ್ಯಾಟ್ ವಾಹನ ಮುಂತಾದವುಗಳನ್ನು ಜಮಾವಣೆ ಮಾಡುತ್ತಿತ್ತು. ಭಾರತ ಕೂಡಾ ತನ್ನ ಬಲ ಪ್ರದರ್ಶನವನ್ನು ಮಾಡಿತ್ತು.

ಭಾರತೀಯ ಸೇನೆಯ ಹಲವು ಯೋಧರಿಗೆ ಕೊರೊನಾ ಸೋಂಕು
ಆದರೆ, ಚೀನಾಗೆ ವರದಾನವಾಗಿದ್ದು ಕೊರೊನಾ. ಭಾರತೀಯ ಸೇನೆಯ ಹಲವು ಯೋಧರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ, ಗಡಿಯಲ್ಲಿ ಸಮಾರಾಭ್ಯಾಸವನ್ನು ಮುಂದೂಡಲಾಗಿತ್ತು. ಇದೇ ಸಮಯವನ್ನು ಚೀನಾ ಬಳಸಿಕೊಂಡು, ಈ ಭಾಗದ ಆಯಕಟ್ಟಿನ ಪ್ರದೇಶದಲ್ಲಿ ತನ್ನ ಸೇನೆಯನ್ನು ಹೆಚ್ಚುವರಿಯಾಗಿ ನಿಯೋಜಿಸಿತು.

ಎಲ್ಎಸಿ ಬಳಿ ಭಾರತದ ವಾರ್ಷಿಕ ಸಮಾರಾಭ್ಯಾಸ
ಎಲ್ಎಸಿ ಬಳಿ ಭಾರತದ ವಾರ್ಷಿಕ ಸಮಾರಾಭ್ಯಾಸ ಕೊರೊನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಮೂರು ವಾರದಿಂದ ನಡೆಯುತ್ತಿರುವ ಗಲ್ವಾನ್ ಸಂಘರ್ಷ ಸೋಮವಾರ ಹಿಂಸಾರೂಪಕ್ಕೆ ಜಾರಿತು. ಭಾರತೀಯ ಸೇನೆ ಮತ್ತು ಇಂಡೋ-ಟಿಬೆಟ್ ಗಡಿ ಪೊಲೀಸರ ಜೊತೆಗಿನ ಜಂಟಿ ಸಮಾರಾಭ್ಯಾಸ ರದ್ದು ಮಾಡಲಾಯಿತು.

ಚೀನಾ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿತು.
ಪ್ರತೀ ವರ್ಷ ಬೇಸಿಗೆಯಲ್ಲಿ ಸಮಾರಾಭ್ಯಾಸ ನಡೆಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ದತಿ. ಆದರೆ, ಈ ಬಾರಿ ಇದು ಕೊರೊನಾದಿಂದ ಮುಂದೂಡಲ್ಪಟ್ಟಿದ್ದರಿಂದ, ಈ ಸಮಯವನ್ನು ಬಳಸಿಕೊಂಡ ಚೀನಾ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿತು.