ಲೋಕಸಭಾ ಚುನಾವಣೆ ಬೆನ್ನಲ್ಲೆ ಕಾಂಗ್ರೆಸ್‌ಗೆ ಶಾಕ್: ಬಿಜೆಪಿ ಸೇರಲಿದ್ದಾರೆ ಕಾಂಗ್ರೆಸ್ ಬಂಡಾಯಗಾರರು!
ಶಿಮ್ಲಾ, ಮಾರ್ಚ್ 23: ಕಳೆದ ತಿಂಗಳು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದ್ದ ಹಿಮಾಚಲ ಪ್ರದೇಶದ ಆರು ಕಾಂಗ್ರೆಸ್ ಬಂಡಾಯಗಾರರ ಜೊತೆಗೆ ಮೂವರು ಸ್ವತಂತ್ರ ಶಾಸಕರು ಮಾರ್ಚ್ 23ರ ಮಧ್ಯಾಹ್ನ ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಂಡಾಯ ಕಾಂಗ್ರೆಸ್ ಶಾಸಕರು ಸದನದಲ್ಲಿ ವಿಪ್ ಅನ್ನು ಧಿಕ್ಕರಿಸಿದ ಕಾರಣಕ್ಕಾಗಿ ಅವರನ್ನು ಅನರ್ಹಗೊಳಿಸಲಾಯಿತು. ಮೂವರು ಸ್ವತಂತ್ರ ಶಾಸಕರಾದ ಆಶಿಶ್ ಶರ್ಮಾ (ಹಮೀರ್‌ಪುರ್ ಕ್ಷೇತ್ರ), ಹೋಶಿಯಾರ್ ಸಿಂಗ್ (ಡೆಹ್ರಾ) ಮತ್ತು ಕೆಎಲ್ ಠಾಕೂರ್ (ನಲಗಢ) ಶುಕ್ರವಾರ ವಿಧಾನಸಭೆ ಕಾರ್ಯದರ್ಶಿ ಯಶ್ ಪಾಲ್ ಶರ್ಮಾ ಅವರಿಗೆ ರಾಜೀನಾಮೆ ಸಲ್ಲಿಸಿದ್ದು, ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ.

2022 ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಮೂವರು ಪಕ್ಷೇತರರು ಬಿಜೆಪಿ ಟಿಕೆಟ್ ಬಯಸಿದ್ದರು. ಆದರೆ ಟಿಕೆಟ್ ನಿರಾಕರಿಸಲಾಯಿತು ಹೀಗಾಗಿ ಪಕ್ಷೇತರರಾಗಿ ಸ್ಪರ್ಧಿಸಿದರು. ಆದರೆ, ನಂತರ ಕಾಂಗ್ರೆಸ್ 40 ಶಾಸಕರೊಂದಿಗೆ ಸರ್ಕಾರ ರಚಿಸಿದಾಗ ಮೂವರು ಪಕ್ಷೇತರರು ಸರ್ಕಾರಕ್ಕೆ ಬೆಂಬಲ ನೀಡಿದ್ದರು.
ಈಗ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ವಿರುದ್ಧ ಸ್ವತಂತ್ರ ಶಾಸಕರು ಸಾಲು ಸಾಲು ಆರೋಪ ಮಾಡುತ್ತಿದ್ದಾರೆ. ನಮ್ಮ ಮತ್ತು ನಮ್ಮ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಅವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮಟ್ಟಕ್ಕೆ ಮುಖ್ಯಮಂತ್ರು ಕುಸಿದಿದ್ದಾರೆ ಎಂದು ಸ್ವತಂತ್ರ ಶಾಸಕರು ಗಂಭೀರ ಆರೋಪ ಮಾಡಿದ್ದಾರೆ.

ಜೂನ್ 1 ರಂದು ನಡೆಯಲಿರುವ ಕೊನೆಯ ಹಂತದ ಚುನಾವಣೆ ವೇಳೆ ನಾಲ್ಕು ಲೋಕಸಭಾ ಸ್ಥಾನಗಳ ಜೊತೆಗೆ ಕಾಂಗ್ರೆಸ್ ಶಾಸಕರ ಅನರ್ಹತೆಯ ನಂತರ ತೆರವಾದ ಆರು ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ವಿಧಾನಸಭಾ ಉಪ ಚುನಾವಣಾ ದಿನಾಂಕಗಳನ್ನು ಭಾರತ ಚುನಾವಣಾ ಆಯೋಗ ಘೋಷಿಸಿದೆ.
ಇತ್ತ, ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು, "ಸ್ವತಂತ್ರ ಶಾಸಕರು ರಾಜೀನಾಮೆ ನೀಡಬಾರದು ಮತ್ತು ಜನಾದೇಶವನ್ನು ಗೌರವಿಸಬೇಕಿತ್ತು. ಈ ರಾಜೀನಾಮೆ ಹಿಂದೆ ಹಣದ ಆಮಿಷವಿದೆಯೇ ಅಥವಾ ಶಾಸಕರ ಮೇಲೆ ಒತ್ತಡ ಹೇರಲಾಗಿದೆಯೇ ಎಂಬುದು ತನಿಖೆಯಾಗಬೇಕಿದೆ" ಎಂದಿದ್ದಾರೆ. ಆರು ಕಾಂಗ್ರೆಸ್ ಶಾಸಕರ ಅನರ್ಹತೆಯೊಂದಿಗೆ, 68 ಸದಸ್ಯರ ವಿಧಾನಸಭೆಯಲ್ಲಿ ಸ್ಪೀಕರ್ ಸೇರಿದಂತೆ ಆಡಳಿತಾರೂಢ ಕಾಂಗ್ರೆಸ್ ಬಲ 40 ರಿಂದ 34 ಕ್ಕೆ ಇಳಿದಿದೆ.












Click it and Unblock the Notifications