Haryana Assembly Elections 2024: ಹರಿಯಾಣ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ
ಹರಿಯಾಣ ಆಗಸ್ಟ್ 16: ಹರಿಯಾಣ ವಿಧಾನಸಭೆ ಚುನಾವಣೆ ಅಕ್ಟೋಬರ್ 1 ರಂದು ಒಂದೇ ಹಂತದಲ್ಲಿ ನಡೆಯಲಿದೆ. ಇಂದು ಮಧ್ಯಾಹ್ನ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಿ ಈ ಘೋಷಣೆ ಮಾಡಿದೆ. ಬಹು ನಿರೀಕ್ಷಿತ ಜಮ್ಮು ಮತ್ತು ಕಾಶ್ಮೀರ ಚುನಾವಣೆಯ ದಿನಾಂಕಗಳ ಜೊತೆಗೆ ಹರಿಯಾಣ ಚುನಾವಣಾ ದಿನಾಂಕವನ್ನೂ ಘೋಷಣೆ ಮಾಡಲಾಗಿದೆ. ಈ ಎರಡೂ ಚುನಾವಣೆಗಳ ಮತಗಳನ್ನು ಅಕ್ಟೋಬರ್ 4ರಂದು ಏಕಕಾಲದಲ್ಲಿ ಎಣಿಕೆ ಮಾಡಲಾಗುತ್ತದೆ.
ಚುನಾವಣಾ ಆಯೋಗ ಹಂಚಿಕೊಂಡ ಟೈಮ್‌ಲೈನ್ ಪ್ರಕಾರ, ಸೆಪ್ಟೆಂಬರ್ 9 ರಂದು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ. ನಾಮಪತ್ರಗಳನ್ನು ಸೆಪ್ಟೆಂಬರ್ 12 ರೊಳಗೆ ಸಲ್ಲಿಸಬೇಕು ಮತ್ತು ಮರುದಿನ ನಾಮಪತ್ರಗಳ ಪರಿಶೀಲನೆಗೆ ಅಂತಿಮ ದಿನಾಂಕವಾಗಿ ನಿಗದಿಪಡಿಸಲಾಗಿದೆ. ಅಕ್ಟೋಬರ್ 1 ರಂದು (ಮಂಗಳವಾರ) ಮತದಾನ ನಡೆಯಲಿದ್ದು, ಅದೇ ವಾರದಲ್ಲಿ ಅಂದರೆ ಶುಕ್ರವಾರ ಮತ ಎಣಿಕೆ ನಡೆಯಲಿದೆ.

ಹರಿಯಾಣದಲ್ಲಿ ಹಾಲಿ ಸರ್ಕಾರದ ಅವಧಿ ನವೆಂಬರ್ 3ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್, ಜೆಜೆಪಿ ಮತ್ತು ಎಎಪಿ ನಡುವೆ ಚತುಷ್ಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.
2019 ರ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನಗಳನ್ನು ಗಳಿಸಿ ಜೆಜೆಪಿಯೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಿತ್ತು. 90 ಸದಸ್ಯ ಬಲದ ವಿಧಾನಸಭೆಯಲ್ಲಿ ದುಷ್ಯಂತ್ ಚೌತಾಲಾ ನೇತೃತ್ವದ ಜನನಾಯಕ್ ಜನತಾ ಪಕ್ಷ 10 ಸ್ಥಾನಗಳನ್ನು ಹೊಂದಿದೆ. ಈ ವರ್ಷದ ಆರಂಭದಲ್ಲಿ ಬಿಜೆಪಿ-ಜೆಜೆಪಿ ಮೈತ್ರಿ ಮುರಿದುಬಿತ್ತು.
ಬಿಜೆಪಿ VS ಕಾಂಗ್ರೆಸ್.. ಯಾರು ಗೆಲ್ಲುತ್ತಾರೆ?
ಹರಿಯಾಣ ರಾಜ್ಯದಲ್ಲಿ ಎಷ್ಟು ವಿಧಾನಸಭಾ ಕ್ಷೇತ್ರಗಳಿವೆ? ಈಗ ಯಾವ ಪಕ್ಷ ಅಧಿಕಾರದಲ್ಲಿದೆ? ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷಗಳು ಸ್ಪರ್ಧಿಸಲಿವೆ? ಅದರ ಬಗ್ಗೆ ತಿಳಿಯೋಣ.
ಹರಿಯಾಣ ಒಟ್ಟು 90 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಇಲ್ಲಿ ಪಕ್ಷ ಏಕಾಂಗಿಯಾಗಿ ಅಧಿಕಾರ ಹಿಡಿಯಬೇಕಾದರೆ 46 ಸ್ಥಾನಗಳನ್ನು ಗೆಲ್ಲಬೇಕು. ಪ್ರಸ್ತುತ ಹರಿಯಾಣದಲ್ಲಿ ಬಿಜೆಪಿ ಆಡಳಿತದಲ್ಲಿದೆ. ನಯಾಬ್ ಸಿಂಗ್ ಸೈನಿ ಮುಖ್ಯಮಂತ್ರಿ ಆಗಿದ್ದಾರೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಇದನ್ನು ಅಲ್ಪಸಂಖ್ಯಾತ ಸರ್ಕಾರ ಎಂದು ಕರೆಯುತ್ತವೆ. ಕಾಂಗ್ರೆಸ್ ವಿರೋಧ ಪಕ್ಷವಾಗಿದೆ.
ಕಳೆದ 2019ರ ಚುನಾವಣೆಯಲ್ಲಿ ಈ ರಾಜ್ಯದಲ್ಲಿ ಯಾರಿಗೂ ಬಹುಮತ ಬಂದಿರಲಿಲ್ಲ. ಬಿಜೆಪಿ 40 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್ 31 ಸ್ಥಾನಗಳನ್ನು ಗೆದ್ದಿತ್ತು. ಜೆಜೆಪಿ 10 ಸ್ಥಾನ, ಐಎನ್‌ಎಲ್‌ಡಿ, ಎಚ್‌ಎಲ್‌ಪಿ ತಲಾ ಒಂದರಲ್ಲಿ ಮತ್ತು ಸ್ವತಂತ್ರ ಅಭ್ಯರ್ಥಿಗಳು 7 ಸ್ಥಾನಗಳನ್ನು ಗೆದ್ದಿದ್ದರು. ಇದಾದ ನಂತರ ಬಿಜೆಪಿ ಪಕ್ಷ ಸ್ವತಂತ್ರ ಅಭ್ಯರ್ಥಿಗಳ ನೆರವಿನಿಂದ ಅಧಿಕಾರಕ್ಕೆ ಬಂದಿತು.
ನಂತರದ ರಾಜಕೀಯ ಬದಲಾವಣೆಗಳಿಂದ ಬಿಜೆಪಿಯ ಶಾಸಕರ ಸಂಖ್ಯೆ 41ಕ್ಕೆ ಏರಿತು. ಕಾಂಗ್ರೆಸ್ ಶಾಸಕರ ಸಂಖ್ಯೆ 29ಕ್ಕೆ ಕುಸಿಯಿತು. ಬಿಜೆಪಿ ಪಕ್ಷೇತರರ ಬೆಂಬಲದೊಂದಿಗೆ ಆಡಳಿತ ಮುಂದುವರಿಸಿತು. ಕಳೆದ ಲೋಕಸಭೆ ಚುನಾವಣೆಗೂ ಮುನ್ನ ಮನೋಹರ್ ಲಾಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗಿತ್ತು.
ನಯಾಬ್ ಸಿಂಗ್ ಅವರನ್ನು ನೂತನ ಮುಖ್ಯಮಂತ್ರಿಯಾಗಿ ನೇಮಿಸಲಾಯಿತು. ನಂತರ 3 ಶಾಸಕರು ಬಿಜೆಪಿಗೆ ಬೆಂಬಲ ಹಿಂಪಡೆದರು. ಅವರು ಕಾಂಗ್ರೆಸ್ ಜೊತೆ ಕೈಜೋಡಿಸಿದರು. ಹೀಗಾಗಿ ಹರಿಯಾಣ ಈಗ 87 ಶಾಸಕರನ್ನು ಹೊಂದಿದೆ. ಹಾಗೆ ನೋಡಿದರೆ ಸರ್ಕಾರ ಅಧಿಕಾರ ಹಿಡಿಯಲು 44 ಶಾಸಕರ ಅಗತ್ಯವಿದೆ. ಆದರೆ ಈಗ ಬಿಜೆಪಿ 41 ಶಾಸಕರನ್ನು ಹೊಂದಿದ್ದು, ಎಚ್‌ಎಲ್‌ಪಿಯ ಒಬ್ಬ ಶಾಸಕರ ಬೆಂಬಲ ಮತ್ತು ಸ್ವತಂತ್ರ ಅಭ್ಯರ್ಥಿ ಬೆಂಬಲದಿಂದು ಒಟ್ಟು 43 ಶಾಸಕರನ್ನು ಹೊಂದಿದೆ.
ಕಾಂಗ್ರೆಸ್ ಪಕ್ಷಕ್ಕೆ ಪ್ರಸ್ತುತ 29 ಶಾಸಕರು ಮತ್ತು 3 ಪಕ್ಷೇತರರ ಬೆಂಬಲವಿದೆ. ಆದರೆ ಜೆಜೆಪಿ ಪಕ್ಷದ 10 ಶಾಸಕರು, ಐಎನ್‌ಎಲ್‌ಡಿ ಪಕ್ಷದ ಒಬ್ಬ ಶಾಸಕ ಮತ್ತು ಒಬ್ಬ ಸ್ವತಂತ್ರ ಅಭ್ಯರ್ಥಿ ಸೇರಿ ಒಟ್ಟು 12 ಶಾಸಕರು ಕಾಂಗ್ರೆಸ್ ಆಗಲಿ ಅಥವಾ ಬಿಜೆಪಿಗೆ ಆಗಲಿ ಬೆಂಬಲ ನೀಡಿಲ್ಲ. ಹೀಗಿರುವಾಗ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹರಿಯಾಣ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ.
ಕಾಂಗ್ರೆಸ್ ಅಧಿಕಾರ ಹಿಡಿಯಲು ಪ್ರಯತ್ನಿಸಿದರೆ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸಲಿದೆ. ಜೆಜೆಪಿ ಪಕ್ಷ ತನ್ನ ಪ್ರಭಾವವನ್ನು ಸಾಬೀತುಪಡಿಸಲು ಪ್ರಯತ್ನಿಸಿ ಗಮನಾರ್ಹ ಸ್ಥಾನಗಳಲ್ಲಿ ಗೆದ್ದರೆ ಕಿಂಗ್ ಮೇಕರ್ ಆಗಬಹುದು ಎಂಬ ಕಾರಣಕ್ಕೆ ಜೆಜೆಪಿ ಪಕ್ಷವೂ ಸಕ್ರಿಯವಾಗಿದೆ. ಹೀಗಾಗಿ ಹರಿಯಾಣ ವಿಧಾನಸಭಾ ಚುನಾವಣೆಯ ಕಾವು ಏರುವುದರಲ್ಲಿ ಸಂಶಯವಿಲ್ಲ.
ಹರಿಯಾಣದಲ್ಲಿ ಒಟ್ಟು 2.01 ಕೋಟಿ ಮತದಾರರಿದ್ದಾರೆ. ಈ ಪೈಕಿ 1.06 ಕೋಟಿ ಪುರುಷ ಮತದಾರರು,. 95 ಲಕ್ಷ ಮಹಿಳಾ ಮತದಾರರಿದ್ದಾರೆ. ಅಲ್ಲದೆ 4.52 ಲಕ್ಷ ಮತದಾರರು ಪ್ರಥಮ ಬಾರಿಗೆ ಮತದಾನ ಮಾಡಲಿದ್ದಾರೆ. ಹರಿಯಾಣದಲ್ಲಿ 100 ವರ್ಷ ಮೇಲ್ಪಟ್ಟ 10,000 ಮತದಾರರಿದ್ದಾರೆ. 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶ ಕಲ್ಪಿಸಲಾಗಿದೆ.












Click it and Unblock the Notifications