Haryana accident: ಕುಡಿದು ಶಾಲಾ ಬಸ್ ಓಡಿಸಿ ಎಂಟು ಮಕ್ಕಳ ಜೀವ ತೆಗೆದ ಚಾಲಕ
ಚಂಡೀಗಢ, ಏಪ್ರಿಲ್. 11: ಹರಿಯಾಣದ ಮಹೇಂದರ್‌ಗಢದಲ್ಲಿ ಗುರುವಾರ 30 ಮಕ್ಕಳಿದ್ದ ಶಾಲಾ ಬಸ್ ಪಲ್ಟಿಯಾಗಿದೆ. ದುರಂತ ಘಟನೆಯಲ್ಲಿ ಎಂಟು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದು, 13 ಮಂದಿ ಮಕ್ಕಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕನಿನಾದ ಜಿಎಲ್ ಪಬ್ಲಿಕ್ ಶಾಲೆಗೆ ಸೇರಿದ ಶಾಲಾ ಬಸ್ ಮಹೇಂದರ್‌ಗಢ್ ಜಿಲ್ಲೆಯ ಉನ್ಹಾನಿ ಗ್ರಾಮದ ಬಳಿ ಅಪಘಾತಕ್ಕೆ ಒಳಗಾಗಿದೆ. ಶಾಲಾ ಬಸ್ ಚಾಲಕ ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಿದ ನಂತರ ಅಪಘಾತಕ್ಕೀಡಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈದ್ - ಉಲ್ - ಫಿತರ್ ನಿಮಿತ್ತ ರಜೆ ಇದ್ದರೂ ಶಾಲೆ ಕಾರ್ಯನಿರ್ವಹಿಸುತ್ತಿತ್ತು ಎಂದು ವರದಿಯಾಗಿದೆ.

ದುರಂತದಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಮಹೇಂದರ್‌ಗಢ್ ಮತ್ತು ನರ್ನಾಲ್‌ನಲ್ಲಿರುವ ವಿವಿಧ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಆರು ವರ್ಷಗಳ ಹಿಂದೆ 2018 ರಲ್ಲಿ ಬಸ್‌ನ ಫಿಟ್‌ನೆಸ್ ಪ್ರಮಾಣಪತ್ರದ ಅವಧಿ ಮುಗಿದಿದೆ ಎಂದು ಅಧಿಕೃತ ದಾಖಲೆಗಳು ತೋರಿಸುತ್ತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಸ್ ಚಾಲಕ ಪಾನಮತ್ತನಾಗಿದ್ದ ಎಂದ ಪ್ರತ್ಯಕ್ಷದರ್ಶಿಗಳು
ಇನ್ನು ಎಂಟು ಮಕ್ಕಳ ಜೀವ ತೆಗೆದ ಬಸ್ ಚಾಲಕ ಪಾನಮತ್ತನಾಗಿದ್ದ ಎಂಬ ಆರೋಪ ಕೇಳಿ ಬಂದಿದೆ. ಚಾಲಕ ಕುಡಿದಿದ್ದಾನೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ವೈದ್ಯರು ಆತನ ವೈದ್ಯಕೀಯ ಪರೀಕ್ಷೆ ನಡೆಸುತ್ತಿದ್ದಾರೆ ಎಂದು ಮಹೇಂದರ್‌ಗಢ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅರ್ಶ್ ವರ್ಮಾ ಹೇಳಿದ್ದಾರೆ.
"ನಾವು ಬಸ್‌ನ ದಾಖಲೆಗಳನ್ನು ಸಹ ಪರಿಶೀಲಿಸುತ್ತಿದ್ದೇವೆ. ಶಾಲಾ ಅಧಿಕಾರಿಗಳನ್ನು ಇನ್ನೂ ಸಂಪರ್ಕಿಸಿಲ್ಲ. ಇನ್ನೂ ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆರು ಮಕ್ಕಳು ಸಾವನ್ನಪ್ಪಿದ್ದಾರೆ" ಎಂದು ಎಸ್ಪಿ ಹಿಂದಿನ ಹೇಳಿಕೆಯಲ್ಲಿ ತಿಳಿಸಿದ್ದರು. ಅವರ ಹೇಳಿಕೆ ಬೆನ್ನಲ್ಲೆ ಪುಟ್ಟ ಮಕ್ಕಳು ಮೃತಪಟ್ಟಿದ್ದಾರೆ.
ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣದ ತನಿಖೆ ಆರಂಭಿಸಲು ಜಿಲ್ಲಾಧಿಕಾರಿ ಮತ್ತು ಮಹೇಂದರ್‌ಗಢ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಮಾತನಾಡಿದ್ದೇನೆ ಎಂದು ಹರಿಯಾಣ ಶಿಕ್ಷಣ ಸಚಿವೆ ಸೀಮಾ ತ್ರಿಖಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟ್ವಿಟರ್‌ನಲ್ಲಿ ಶಾಲಾ ಬಸ್ ಅಪಘಾತದಲ್ಲಿ ಸಾವನ್ನಪ್ಪಿದ ಮಕ್ಕಳ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡ ಮಕ್ಕಳಿಗೆ ಸ್ಥಳೀಯ ಆಡಳಿತವು ಸಹಾಯವನ್ನು ನೀಡುತ್ತಿದೆ ಎಂದು ಭರವಸೆ ನೀಡಿದ್ದಾರೆ.
"ಹರಿಯಾಣದ ಮಹೇಂದ್ರಗಢದಲ್ಲಿ ಶಾಲಾ ಬಸ್ ಅಪಘಾತವು ತುಂಬಾ ದುಃಖಕರವಾಗಿದೆ. ಮೃತ ಮಕ್ಕಳ ಕುಟುಂಬಕ್ಕೆ ನನ್ನ ಸಂತಾಪವಿದೆ. ಈ ನಷ್ಟವನ್ನು ಭರಿಸುವ ಶಕ್ತಿಯನ್ನು ದೇವರು ಅವರಿಗೆ ನೀಡಲಿ. ಗಾಯಗೊಂಡ ಮಕ್ಕಳಿಗೆ ಸ್ಥಳೀಯ ಆಡಳಿತ ನೆರವು ನೀಡುತ್ತಿದೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ" ಎಂದು ಗೃಹ ಸಚಿವ ಅಮಿತ್ ಶಾ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.












Click it and Unblock the Notifications