ಅಸಮರ್ಥ ಸರಕಾರದಿಂದ ಜಿಎಸ್ ಟಿ ಜಾರಿ: ರಾಹುಲ್ ಟೀಕೆ
ನವದೆಹಲಿ, ಜೂನ್ 30: ಅಸಮರ್ಥ ಹಾಗೂ ಸೂಕ್ಷ್ಮವಲ್ಲದ ಸರಕಾರವೊಂದರಿಂದ ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿಯಾಗುತ್ತಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಜಿಎಸ್ ಟಿ ಜಾರಿ ಕಾರ್ಯಕ್ರಮವನ್ನು ಬಾಯ್ಕಾಟ್ ಮಾಡಬೇಕು ಎಂದು ಕಾಂಗ್ರೆಸ್ ನಿರ್ಧರಿಸಿದ ನಂತರ ಮೊದಲ ಬಾರಿಗೆ ರಾಹುಲ್ ಗಾಂಧಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಅವರು, ಯಾವುದೇ ಯೋಜನೆ ಹಾಗೂ ದೂರದೃಷ್ಟಿ ಇಲ್ಲದೆ ಈ ಸರಕಾರ ಜಿಎಸ್ ಟಿ ಅನ್ನು ಜಾರಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಜಿಎಸ್ ಟಿ ಸುಧಾರಣೆಯ ಹಿಂದೆ ಇರುವುದು ಕಾಂಗ್ರೆಸ್ ನ ಶ್ರಮ. ಭಾರತಕ್ಕೆ ಜಿಎಸ್ ಟಿ ಬೇಕು. ಆದರೆ ಸಾಮಾನ್ಯ ನಾಗರಿಕರನ್ನು, ವರ್ತಕರು ಹಾಗೂ ವ್ಯಾಪಾರಿಗಳನ್ನು ನೋವು ಹಾಗೂ ಆತಂಕದಿಂದ ನರಳುವಂತೆ ಮಾಡಬಾರದು ಎಂದಿದ್ದಾರೆ.

ಜಿಎಸ್ ಟಿ ಜಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಭಾಗವಹಿಸುವಂತೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮನವಿ ಮಾಡಿದ್ದಾರೆ. ಇನ್ನು ಕೇಂದ್ರ ಸರಕಾರದ ನಿರ್ಧಾರವನ್ನು ಪ್ರಬಲವಾಗಿ ವಿರೋಧಿಸಿರುವ ರಾಹುಲ್ ಗಾಂಧಿ, "ಜಿಎಸ್ ಟಿ ಜಾರಿ ಎಂಬುದು ಅತ್ಯುತ್ತಮ ಸುಧಾರಣೆ. ಅದನ್ನು ಅರೆಬೆಂದ ಸ್ಥಿತಿಯಲ್ಲಿ ಜಾರಿ ಮಾಡಲು ಹೊರಟಿದ್ದಾರೆ. ಇದರ ಹಿಂದೆ ತಮ್ಮ ದೊಡ್ಡಸ್ತಿಕೆ ತೋರುವ ಉದ್ದೇಶವಿದೆ" ಎಂದು ಅವರು ಟೀಕಿಸಿದ್ದಾರೆ.












Click it and Unblock the Notifications