ಚುನಾವಣೆ ಹೊತ್ತಲ್ಲಿ ಫೇಸ್ ಬುಕ್ ಅಂಕಿ ಅಂಶ ಹೇಳೋದೇನು?
ನವದೆಹಲಿ, ಡಿಸೆಂಬರ್ 18: ಅಯ್ಯೋ ಯಾಕಾದ್ರೂ ಈ 'ಸೋಮವಾರ' ಬರುತ್ತೋ ಎಂದು ಸಂಡೆ ಎಲ್ಲಾ ಮಂಡೆ ಬಿಸಿ ಮಾಡಿಕೊಳ್ಳುವವರೂ ಈ ವಾರ ಮಾತ್ರ ಸೋಮವಾರಕ್ಕಾಗಿಯೇ ಕಾದುಕುಳಿತಿದ್ದರು. ಅದಕ್ಕೆ ಕಾರಣ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ. ಈಗಾಗಲೇ ಮತಎಣಿಕೆ ಆರಂಭವಾಗಿದ್ದು, ಕುತೂಹಲ ಗರಿಗೆದರಿದೆ.
ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳಲ್ಲಿ ನ.9 ರಂದು ಮತದಾನ ನಡೆದಿದ್ದರೆ, ಗುಜರಾತಿನ 182 ವಿಧಾನಸಭಾ ಕ್ಷೇತ್ರಗಳಿಗೆ ಡಿ.9 ಮತ್ತು 14 ರಂದು ಎರಡು ಹಂತದ ಮತದಾನ ನಡೆದಿದ್ದು, ಇಂದು(ಡಿ.18) ರಂದು ಎರಡೂ ರಾಜ್ಯಗಳ ಫಲಿತಾಂಶ ಹೊರಬೀಳುತ್ತಿದೆ. ಎರಡು ರಾಜ್ಯಗಳ ಚುನಾವಣೆ ಘೋಷಣೆಯಾದಾಗಿನಿಂದ ಇಲ್ಲಿಯವರೆಗೆ ಫೆಸ್ ಬುಕ್ ನಲ್ಲಿ ಅತೀ ಹೆಚ್ಚು ಚರ್ಚಿತರಾದ ಅಭ್ಯರ್ಥಿಗಳು, ಪಕ್ಷಗಳು, ಸಂಗತಿಗಳ ಕುರಿತು ಸಿಕ್ಕ ಮಾಹಿತಿ ಇಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಖುದ್ದು ಆಸ್ಥೆ ವಹಿಸಿ ಪ್ರಚಾರ ನಡೆಸಿದ ಕಾರಣಕ್ಕೆ ಗುಜರಾತಿನಲ್ಲಂತೂ ಇದು ಮೋದಿ-ರಾಹುಲ್ ನಡುವಿನ ನೇರಾನೇರ ಸ್ಪರ್ಧೆ ಎಂಬಂತೆ ಬಿಂಬಿತವಾಗಿದೆ.

ಗುಜರಾತ್ ಅಭ್ಯರ್ಥಿಗಳು
ಗುಜರಾತ್ ಚುನಾವಣೆಯ ಹಿನ್ನೆಲೆಯಲ್ಲಿ ಫೇಸ್ ಬುಕ್ ನಲ್ಲಿ ಅತೀ ಹೆಚ್ಚು ಚರ್ಚಿತರಾದ ಅಭ್ಯರ್ಥಿಗಳೆಂದರೆ ವಿಜಯ್ ರುಪಾನಿ. ಗುಜರಾತ್ ವಿಧಾನಸಭಾ ಅಭ್ಯರ್ಥಿಗಳಲ್ಲಿ ಹಾಲಿ ಮುಖ್ಯಮಂತ್ರಿ ವಿಜಯ್ ರುಪಾನಿ ಕುರಿತು ಶೇ.74 ಜನ ಚರ್ಚಿಸಿದ್ದರೆ, ದಲಿತ ನಾಯಕ ಜಿಗ್ನೆಶ್ ಮೇವಾನಿ ಕುರಿತು ಶೇ.23 ಜನ ಚರ್ಚಿಸಿದ್ದಾರೆ. ಕಾಂಗ್ರೆಸ್ ನಾಯಕ ಅಲ್ಪೇಶ್ ಠಾಕೂರ್ ಕುರಿತು ಶೇ.4 ರಷ್ಟು ಜನ ಚರ್ಚಿಸಿದ್ದಾರೆ.

ಹಿಮಾಚಲ ಪ್ರದೇಶ ಅಭ್ಯರ್ಥಿಗಳು
ಅಕ್ಟೋಬರ್ 12 ರಿಂದ ಡಿಸೆಂಬರ್ 12ರವರೆಗೂ ನಡೆದ ಫೇಸ್ ಬುಕ್ ಅಂಕಿ ಅಂಶಗಳಲ್ಲಿ ಹಿಮಾಚಲ ಪ್ರದೇಶದ ಹಾಲಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಕುರಿತು ಶೇ.31 ಜನ ಚರ್ಚಿಸಿದ್ದರೆ, ಬಿಜೆಪಿ ನಾಯಕ ಪ್ರೇಮ್ ಕುಮಾರ್ ದುಮಾಲ್ ಬಗ್ಗೆ ಶೇ.26 ಜನ ಚರ್ಚಿಸಿದ್ದಾರೆ.

ರಾಜಕೀಯ ಪಕ್ಷಗಳು
ಈ ಸಂದರ್ಭದಲ್ಲಿ ಅತೀ ಹೆಚ್ಚು ಚರ್ಚೆಯಾದ ರಾಜಕೀಯ ಪಕ್ಷಗಳೆಂದರೆ, ಗುಜರಾತಿನಲ್ಲಿ ಬಿಜೆಪಿ ಶೇ.69, ಕಾಂಗ್ರೆಸ್ ಶೇ.31. ಹಾಗೆಯೇ ಹಿಮಾಚಲ ಪ್ರದೇಶದಲ್ಲಿ ಶೇ.60 ರಷ್ಟು ಜನ ಬಿಜೆಪಿ ಬಗ್ಗೆ ಚರ್ಚಿಸಿದ್ದರೆ, ಶೇ.40 ರಷ್ಟು ಜನ ಕಾಂಗ್ರೆಸ್ ಬಗ್ಗೆ ಚರ್ಚಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಅತೀ ಹೆಚ್ಚು ಚರ್ಚೆಯಾದ ಸಂಗತಿ
ಈ ಚುನಾವಣೆಯ ಸಂದರ್ಭದಲ್ಲಿ ಎರಡೂ ರಾಜ್ಯಗಳಲ್ಲಿ ಅತೀ ಹೆಚ್ಚು ಚರ್ಚಿತವಾದ ವಿಷಯವೆಂದರೆ ಅರ್ಥವ್ಯವಸ್ಥೆ, ಕಾನೂನು ಸುವ್ಯವಸ್ಥೆ, ಭದ್ರತೆ, ಶಿಕ್ಷಣ ಮತ್ತು ಆರೋಗ್ಯ. ಗುಜರಾತಿನಲ್ಲಿ ಶೇ.40 ಜನ ಅರ್ಥವ್ಯವಸ್ಥೆಯ ಬಗ್ಗೆ ಚರ್ಚಿಸಿದ್ದರೆ, ಶೇ.20 ರಷ್ಟು ಜನ ಕಾನೂನು-ಸುವ್ಯವಸ್ಥೆ ಕುರಿತು, ಶೇ.13ರಷ್ಟು ಜನ ಭದ್ರತೆ, ಶೇ.11 ರಷ್ಟು ಜನ ಶಿಕ್ಷಣ ಮತ್ತು ಶೇ.6ರಷ್ಟು ಜನ ಆರೋಗ್ಯದ ಕುರಿತು ಚರ್ಚಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಶೇ. 38, ಶೇ.21, ಶೇ.11, ಶೇ.10, ಶೇ.8 ರಷ್ಟು ಜನ ಕ್ರಮವಾಗಿ ಅರ್ಥವ್ಯವಸ್ಥೆ, ಕಾನೂನು ಸುವ್ಯವಸ್ಥೆ, ಭದ್ರತೆ, ಶಿಕ್ಷಣ ಮತ್ತು ಆರೋಗ್ಯ ಬಗ್ಗೆ ಚರ್ಚಿಸಿದ್ದಾರೆ.












Click it and Unblock the Notifications