Volcano Eruption: ಜ್ವಾಲಾಮುಖಿ ಸ್ಫೋಟದ ಪರಿಣಾಮ ಹಲವು ವಿಮಾನಗಳ ಹಾರಾಟ ರದ್ದು!
12,000 ವರ್ಷಗಳ ನಂತರ ಇಥಿಯೋಪಿಯಾ ಹೈಲಿ ಗುಬ್ಬಿ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟದ ನಂತರ ಜಗತ್ತಿನಲ್ಲಿ ನಾನಾ ರೀತಿಯ ಸಮಸ್ಯೆ ಎದುರಾಗಿದೆ. ಭೀಕರವಾಗಿ ಸ್ಫೋಟಗೊಂಡಿರುವ ಈ ಜ್ವಾಲಾಮುಖಿ ಭಾರಿ ದೊಡ್ಡ ಪ್ರಮಾಣದಲ್ಲಿ ಬೂದಿ ಹೊರಗೆ ಹಾಕುತ್ತಿದೆ. ಹೀಗಾಗಿ ಈಗ ಹಲವು ರೀತಿಯ ಸಮಸ್ಯೆಗಳು ಎದುರಾಗಿದ್ದು, ಜ್ವಾಲಾಮುಖಿ ಸ್ಫೋಟ ಪರಿಣಾಮ ಭಾರತದಲ್ಲೂ ಮಾಲಿನ್ಯ ಸೇರಿದಂತೆ ವಿಷಗಾಳಿ ಭೀತಿ ಎದುರಾಗಿದೆ. ಅದರಲ್ಲೂ ಉತ್ತರ ಭಾರತದಲ್ಲಿ ಬೂದಿಯ ಪರಿಣಾಮ ಹಲವು ವಿಮಾನಗಳ ಓಡಾಟವೇ ರದ್ದಾಗಿದೆ.
ಒಂದಾದ ನಂತರ ಒಂದೊಂದು ಪ್ರಾಕೃತಿಕ ವಿಕೋಪಗಳು ಭಯದ ವಾತಾವರಣ ಸೃಷ್ಟಿಸುತ್ತಿವೆ. ಇಥಿಯೋಪಿಯಾ ಹೈಲಿ ಗುಬ್ಬಿ ಪರ್ವತದಲ್ಲಿ ಜ್ವಾಲಾಮುಖಿ ದಿಢೀರ್ ಸ್ಫೋಟಗೊಂಡ ಬಳಿಕ ರಾಷ್ಟ್ರ ರಾಜಧಾನಿ ದೆಹಲಿ ಜನರು ನಿದ್ದೆ ಮಾಡಿಲ್ಲ. ಏಕೆಂದರೆ ಆಫ್ರಿಕಾದ ಇಥಿಯೋಪಿಯಾ ದೇಶದಲ್ಲಿ ಇರುವ ಹೈಲಿ ಗುಬ್ಬಿ ಪರ್ವತದ ಜ್ವಾಲಾಮುಖಿ ಮುನಿಸು ನಮ್ಮ ದೇಶಕ್ಕೂ ಸಮಸ್ಯೆ ಮಾಡುತ್ತಿದೆ. ಈ ಜ್ವಾಲಾಮುಖಿ ದಿಢೀರ್ ಸ್ಫೋಟಗೊಂಡ ಬಳಿಕ ಉತ್ತರ ಭಾರತದಲ್ಲಿ ಸಾಲು ಸಾಲು ಸಮಸ್ಯೆ ಶುರು ಆಗಿವೆ.

ವಿಮಾನ ಹಾರಟಕ್ಕೂ ಸಾಕಷ್ಟು ತೊಂದರೆ
ಪ್ರಮುಖವಾಗಿ ದೆಹಲಿ ಆಕಾಶದಲ್ಲಿ ದಟ್ಟ ಬೂದಿ ಆವರಿಸಿದ್ದು, ಇದರ ಪರಿಣಾಮವಾಗಿ ವಿಮಾನ ಹಾರಾಟ ಸೇರಿದಂತೆ ಹಲವು ಪ್ರಮುಖ ಚಟುವಟಿಕೆಗೆ ಬ್ರೇಕ್ ಹಾಕಲಾಗಿತ್ತು. ಹೀಗಿದ್ದಾಗ ಜನರು ಕೂಡ ತಮ್ಮ ಕೆಲಸ ಬಿಟ್ಟು ಮನೆಯಲ್ಲಿ ಕೂರುವಂತೆ ಆಗಿತ್ತು. ಪ್ರಮುಖವಾದ ವಿಮಾನಯಾನ ಸಂಸ್ಥೆಗಳೇ ವಿಮಾನಗಳ ಹಾರಾಟ ರದ್ದು ಮಾಡಿದ್ದವು.
ಬೂದಿ ಆವರಿಸಿದ ಪ್ರದೇಶಗಳಿಗೆ ತೆರಳುವ ಬಹುತೇಕ ವಿಮಾನಗಳು ಕ್ಯಾನ್ಸಲ್ ಆಗಿವೆ. ಹೀಗಿದ್ದಾಗ ಮಂಗಳವಾರ ರಾತ್ರಿಯಿಂದ ಬೂದಿಯು ಸಂಪೂರ್ಣ ಭಾರತ ಬಿಟ್ಟು ಹೊರಗೆ ಹೋಗಿದ್ದು, ಈಗ ದೆಹಲಿ ಜನ ಒಂದಷ್ಟು ನಿಟ್ಟುಸಿರನ್ನು ಬಿಟ್ಟಿದ್ದಾರೆ. ಆದರೂ ಮಾಲಿನ್ಯ ಮಾತ್ರ ಕಡಿಮೆ ಆಗಿಲ್ಲ, ಇದು ಚಿಂತೆಯನ್ನ ಹೆಚ್ಚು ಮಾಡಿದ್ದು ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ವಾತಾವರಣ ಇರಲಿದೆ ಎನ್ನಲಾಗಿದೆ.
ಸಾಲು ಸಾಲು ಪ್ರಾಕೃತಿಕ ವಿಕೋಪ
ಪ್ರಕೃತಿಗೆ ಮನುಷ್ಯರು ನೀಡುತ್ತಿರುವ ತೊಂದರೆ ಈಗ ನಾನಾ ಸಮಸ್ಯೆಗೆ ದಾರಿ ಮಾಡಿಕೊಡುತ್ತಿದೆ. ಅದರಲ್ಲೂ ಪದೇ, ಪದೇ ಪ್ರಾಕೃತಿಕ ವಿಕೋಪ ಸಂಭವಿಸುತ್ತಿರುವ ಕಾರಣ, ಈಗಾಗಲೇ ಸಾವಿರಾರು ಸಮಸ್ಯೆ ಸುಳಿಗೆ ಸಿಲುಕಿದ್ದಾರೆ ಮಾನವರು. ಇಂತಹ ಪರಿಸ್ಥಿತಿ ಇರುವಾಗ ವಿಪರೀತ ಮಳೆ, ವಿಪರೀತ ಚಳಿ, ವಿಪರೀತ ಬಿಸಿಲು ಮನುಷ್ಯರನ್ನ ಕಾಡುತ್ತಿದೆ. ಇದೇ ವೇಳೆ ತಣ್ಣಗೆ ಮಲಗಿದ್ದ ಜ್ವಾಲಾಮುಖಿ ಕೂಡ ಸ್ಫೋಟವಾಗಿ ಭಯವನ್ನ ಹೆಚ್ಚು ಮಾಡಿದೆ. ಅಲ್ಲದೆ ಮನುಷ್ಯರಿಗೆ ಮತ್ತೊಂದು ಎಚ್ಚರಿಕೆ ಸಂದೇಶ ರವಾನೆಯಾಗಿದೆ.












Click it and Unblock the Notifications