TMC MP Suspend: ಟಿಎಂಸಿ ಸಂಸದ ರಾಜ್ಯಸಭೆಯಿಂದ ಅಮಾನತು!
ನವದೆಹಲಿ: ಈ ಬಾರಿ ಸಂಸತ್ ಮುಂಗಾರು ಅಧಿವೇಶನ ಹಲವು ಕಾರಣಗಳಿಂದ ಹೈಲೈಟ್ ಆಗಿದೆ. ಅದರಲ್ಲೂ ಮಣಿಪುರ ವಿಚಾರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಇದೇ ಸಂದರ್ಭದಲ್ಲಿ ಅಶಿಸ್ತಿನ ವರ್ತನೆ ಆರೋಪದ ಹಿನ್ನೆಲೆ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ'ಬ್ರಿಯಾನ್ ಅವರನ್ನ, ಮುಂಗಾರು ಅಧಿವೇಶನದ ಉಳಿದ ಅವಧಿಗೆ ರಾಜ್ಯಸಭೆಯಿಂದ ಅಮಾನತು ಮಾಡಲಾಗಿದೆ.
ಇನ್ನು ಈ ವಿಚಾರವನ್ನ ಸದನದ ಅಧ್ಯಕ್ಷ & ಉಪ ರಾಷ್ಟ್ರಪತಿ ಜಗದೀಪ್ ಧನ್ಖರ್ ತಿಳಿಸಿದ್ದಾರೆ. ಟಿಎಂಸಿ ಸಂಸದ ಹಾಗೂ ಆಡಳಿತ ಪಕ್ಷದ ನಾಯಕರ ನಡುವೆ ಜಟಾಪಟಿ ಜೋರಾಗಿತ್ತು. ಡೆರೆಕ್ ಒ'ಬ್ರಿಯಾನ್ ದಿಲ್ಲಿಸೇವೆಗಳ ಮಸೂದೆಯ ಮೇಲಿನ ಚರ್ಚೆ ಸಂದರ್ಭದಲ್ಲಿ ಪ್ರಚಾರ ಪಡೆಯಲು ಸದನದಲ್ಲಿ ನಾಟಕ ಮಾಡುತ್ತಿದ್ದಾರೆ ನಿನ್ನೆ ಧನ್ಖರ್ ಆರೋಪ ಮಾಡಿದ್ದರು. ಈ ಹಿನ್ನೆಲೆ ಉಭಯ ಸದನದಲ್ಲಿ ಜಟಾಪಟಿ ಜೋರಾಗಿದೆ. ಅತ್ತ ಮಣಿಪುರದ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಎನ್‌ಡಿಎ ಹಾಗೂ ಇಂಡಿಯಾ ನಡುವೆ ತಿಕ್ಕಾಟ ಜೋರಾಗಿತ್ತು. ಇದೇ ಸಂದರ್ಭದಲ್ಲಿ ಡೆರೆಕ್ ಒ'ಬ್ರಿಯಾನ್ ಅಮಾನತು ಆದೇಶ ಕಿಚ್ಚು ಹೊತ್ತಿಸಿದೆ.

ಆಡಳಿತ ಪಕ್ಷ VS ವಿಪಕ್ಷಗಳ ನಾಯಕರು!
ಕೇಂದ್ರ ಸಚಿವ ಪಿಯೂಷ್ ಗೋಯಲ್ ಇಂದು ಓ'ಬ್ರಿಯಾನ್ ಅವರನ್ನ ಅಮಾನತುಗೊಳಿಸುವ ಪ್ರಸ್ತಾವನೆ ಮಂಡಿಸಿದರು. ಇದಕ್ಕೂ ಮೊದಲು ಸಭಾಧ್ಯಕ್ಷರು ಹಾಗೂ ಒ'ಬ್ರಿಯಾನ್ ನಡುವೆ ವಾಗ್ವಾದ ನಡೆದಿತ್ತು. ರಾಜ್ಯಸಭೆ & ಲೋಕಸಭೆ ಎರಡೂ ಕಲಾಪ ಇಂದು ಮಧ್ಯಾಹ್ನದವರೆಗೂ ಮುಂದೂಡಲಾಗಿದೆ. ಮತ್ತೆ ಕಲಾಪ ಆರಂಭವಾದರೆ ಆಡಳಿತ ಪಕ್ಷ & ವಿಪಕ್ಷಗಳ ನಡುವೆ ಭಾರಿ ಜಟಾಪಟಿ ನಡೆಯುವ ಸಾಧ್ಯತೆ ಇದೆ. ಇನ್ನು ಬೆಳಗ್ಗೆ ಈ ಬಗ್ಗೆ ಟ್ವೀಟ್ ಮಾಡಿದ್ದ ಒ'ಬ್ರಿಯಾನ್ ವಾಗ್ದಾಳಿ ನಡೆಸಿದ್ದರು. ಈಗ ಒ'ಬ್ರಿಯಾನ್ ಅಮಾನತುಗೊಂಡಿದ್ದು, ಇದೇ ವಿಚಾರ ಹಿಡಿದು ಆಡಳಿತ ಪಕ್ಷದ ವಿರುದ್ಧ ಹರಿಹಾಯಲು ವಿಪಕ್ಷಗಳು ಸಜ್ಜಾಗಿವೆ.
ಒಟ್ನಲ್ಲಿ ಮಣಿಪುರ ಪರಿಸ್ಥಿತಿ ಕುರಿತು ಸಂಸತ್‌ನಲ್ಲಿ ಪ್ರಧಾನಿ ಮೋದಿ ಹೇಳಿಕೆ ನೀಡಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಯನ್ನ ಸರ್ಕಾರ ತಿರಸ್ಕರಿಸಿತ್ತು. ಇದೇ ಕಾರಣಕ್ಕೆ ಮೋದಿ ಅವರು ಈ ವಿಚಾರದ ಕುರಿತಾಗಿ ಸಂಸತ್‌ನಲ್ಲಿ ಮಾತನಾಡುವುದನ್ನ ಖಾತರಿಪಡಿಸಲು ವಿಪಕ್ಷ ನಾಯಕರು ಅವಿಶ್ವಾಸ ನಿರ್ಣಯದ ತಂತ್ರಗಾರಿಕೆ ಮೊರೆ ಹೋಗಿವೆ ಎನ್ನಲಾಗಿತ್ತು. ಆದರೆ ಈಗ ದಿಢೀರ್ ಟಿಎಂಸಿ ಸಂಸದರನ್ನೇ ಅಮಾನತು ಮಾಡಿರುವುದು ವಿಪಕ್ಷ ನಾಯಕರ ಕೋಪ ಮತ್ತಷ್ಟು ಹೆಚ್ಚು ಮಾಡಿದೆ. ಹೀಗೆ ಸಂಸತ್ ಕಲಾಪ ರಣರಂಗವಾಗುವ ಮುನ್ಸೂಚನೆ ಸಿಕ್ಕಂತಾಗಿದೆ.












Click it and Unblock the Notifications