Delhi Assembly Election 2025: ಚುನಾವಣಾ ಭದ್ರತೆಗೆ 150 ಪ್ಯಾರಾ ಮಿಲಿಟರಿ ಪಡೆ ನಿಯೋಜನೆ
ನವದೆಹಲಿ, ಫೆಬ್ರವರಿ 04: ದೆಹಲಿ ವಿಧಾನಸಭೆ ಚುನಾವಣೆ-2025ರ ಮತದಾನ ಬುಧವಾರ ನಡೆಯಲಿದೆ. ಈಗಾಗಲೇ ಬಹಿರಂಗ ಚುನಾವಣಾ ಪ್ರಚಾರ ಅಂತ್ಯಗೊಂಡಿದ್ದು, ಚುನಾವಣಾ ಅಧಿಕಾರಿ/ ಸಿಬ್ಬಂದಿಗಳು ಇಂದು ಸಂಜೆ ಮತಗಟ್ಟೆಗಳಿಗೆ ತಲುಪಲಿದ್ದಾರೆ. ಫೆಬ್ರವರಿ 5ರಂದು ಬೆಳಗ್ಗೆ 7 ಗಂಟೆಯಿಂದ 70 ಸದಸ್ಯ ಬಲದ ವಿಧಾನಸಭೆಗೆ ಮತದಾನ ನಡೆಯಲಿದೆ, ಫೆಬ್ರವರಿ 8ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ದೆಹಲಿಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36. ರಾಜ್ಯದ ಆಡಳಿತ ಪಕ್ಷ ಎಎಪಿ. ಈ ಬಾರಿ ಚುನಾವಣೆಯಲ್ಲಿ ಎಎಪಿ, ಕಾಂಗ್ರೆಸ್ ಮತ್ತು ಬಿಜೆಪಿ ಸಮಾನ ಎದುರಾಳಿಗಳು. ಚುನಾವಣೆಯನ್ನು ನ್ಯಾಯಸಮ್ಮತವಾಗಿ ಮಾಡಲು ಚುನಾವಣಾ ಆಯೋಗ ಸಕಲ ರೀತಿಯಲ್ಲಿ ತಯಾರಿ ನಡೆಸಿದೆ.

ದೆಹಲಿ ಚುನಾವಣೆಯ ಹಿನ್ನಲೆಯಲ್ಲಿ 3 ಸಾವಿರ ಮತಗಟ್ಟೆಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದೆ. ಆದ್ದರಿಂದ ಚುನಾವಣಾ ಭದ್ರತೆಗೆ ಹೆಚ್ಚಿನ ಗಮನ ನೀಡಲಾಗಿದೆ. 150 ಪ್ಯಾರಾ ಮಿಲಿಟರಿ ಪಡೆಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಅಲ್ಲದೇ ದೆಹಲಿಯ ತುಂಬಾ 30,000 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಅರವಿಂದ ಕೇಜ್ರಿವಾಲ್ ಆಕ್ಷೇಪ: ದೆಹಲಿಯ ಮಾಜಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಚುನಾವಣಾ ಭದ್ರತೆಗೆ ಗುಜರಾತ್ ಪೊಲೀಸ್ ತುಕಡಿ ನಿಯೋಜನೆ ಮಾಡಿರುವುದಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು.
ಆದರೆ ಚುನಾವಣಾ ಆಯೋಗ ಈ ಕುರಿತು ಸ್ಪಷ್ಟನೆ ನೀಡಿತ್ತು. ಉತ್ತರ ಪ್ರದೇಶದಲ್ಲಿ ಮಹಾಕುಂಭ ಮೇಳ ನಡೆಯುತ್ತಿರುವ ಕಾರಣ ಅಕ್ಕಪಕ್ಕದ ರಾಜ್ಯಗಳ ಪೊಲೀಸರು ಅಲ್ಲಿಗೆ ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಆದ್ದರಿಂದ ಗುಜರಾತ್, ಕರ್ನಾಟಕದ ಪೊಲೀಸ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿತ್ತು.
ಆಯೋಗದ ದೆಹಲಿ ಚುನಾವಣೆ ಉಸ್ತುವಾರಿ ದೆವೇಶ್ ಚಂದ್ರ ಶ್ರೀವಾಸ್ತವ್ ಮಾತನಾಡಿ, "ದೆಹಲಿ ಚುನಾವಣೆಗೆ ಅಗತ್ಯ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ. ಶಾಂತಿ ಮತ್ತು ಸುವ್ಯವಸ್ಥೆಯಿಂದ ಚುನಾವಣೆ ನಡೆಸಲಾಗುತ್ತದೆ" ಎಂದು ಹೇಳಿದ್ದಾರೆ.
"3 ಸಾವಿರ ಮತಗಟ್ಟೆಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದೆ. ಪ್ರಮುಖ ಮತಗಟ್ಟೆಗಳಿಗೆ ದೆಹಲಿ ಪೊಲೀಸರು, ಪ್ಯಾರಾ ಮಿಲಿಟರಿ ಪಡೆ ಮತ್ತು ಕ್ಯುಟಿಆರ್ ಪಡೆಗಳನ್ನು ನಿಯೋಜನೆ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.
ಜನವರಿ ಅಂತ್ಯದಲ್ಲಿ ದೆಹಲಿ ಪೊಲೀಸರು ಅಂತರರಾಜ್ಯ ಪೊಲೀಸ್ ಅಧಿಕಾರಿಗಳ ಸಭೆಯನ್ನು ನಡೆಸಿದ್ದರು. ಚುನಾವಣೆ ಹಿನ್ನಲೆಯಲ್ಲಿ ಮದ್ಯ, ಹಣ, ಡ್ರಗ್ಸ್ ಸಾಗಣೆ ಕುರಿತು ಹೆಚ್ಚಿನ ನಿಗಾ ವಹಿಸಬೇಕು ಎಂದು ವಿವಿಧ ರಾಜ್ಯಗಳ ಪೊಲೀಸರಿಗೆ ಮನವಿ ಮಾಡಿದ್ದರು.
ದೆಹಲಿ ಪೊಲೀಸರು ಚುನಾವಣಾ ಆಯೋಗಕ್ಕೆ 150 ಪ್ಯಾರಾ ಮಿಲಿಟರಿ ಪಡೆಗಳು ಅಗತ್ಯವಿದೆ ಎಂದು ಮನವಿ ಸಲ್ಲಿಕೆ ಮಾಡಿದ್ದರು. ಆದ್ದರಿಂದ ಕೇಂದ್ರ ಸರ್ಕಾರ ಸಹ ಈ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿತ್ತು. ಬುಧವಾರ ಮತದಾನ ನಡೆಯುವ ಹಿನ್ನಲೆಯಲ್ಲಿ ಈಗ ಪ್ಯಾರಾ ಮಿಲಿಟರಿ ಪಡೆ ನಿಯೋಜನೆ ಮಾಡಲಾಗಿದೆ.
ಸದ್ಯದ ಚಿತ್ರಣದಂತೆ ದೆಹಲಿ ಚುನಾವಣೆ ಎಎಪಿ, ಬಿಜೆಪಿ ನಡುವಿನ ಹಣಾಹಣಿ. ಎಎಪಿ 2015, 2020ರ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚನೆ ಮಾಡಿದೆ. ಈ ಬಾರಿಯೂ ಗೆದ್ದು ಹ್ಯಾಟ್ರಿಕ್ ಗೆಲುವು ದಾಖಲಿಸುವ ಉತ್ಸಾಹದಲ್ಲಿದೆ. ಆದರೆ ಎಎಪಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ ಎಂದು ಬಿಜೆಪಿ, ಕಾಂಗ್ರೆಸ್ ಹೇಳುತ್ತಿದ್ದು, ಜನರು ತಮಗೆ ಬೆಂಬಲ ನೀಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.












Click it and Unblock the Notifications