ದೆಹಲಿ ವಾಯುಮಾಲಿನ್ಯ: ಉಗ್ರ ಸ್ವರೂಪ ಪಡೆದುಕೊಂಡ ಪ್ರತಿಭಟನೆ: ಪೊಲೀಸರ ಮೇಲೆ ಪೆಪ್ಪರ್ ಸ್ಪ್ರೇ!
Delhi Air Pollution: ದೆಹಲಿಯ ಇತಿಹಾಸದಲ್ಲೇ ಈ ಬಾರಿ ವಾಯುಮಾಲಿನ್ಯ ಪ್ರಮಾಣವು ತೀವ್ರ ಸ್ವರೂಪ ಪಡೆದುಕೊಂಡಿದೆ. ವಾಯುಮಾಲಿನ್ಯ ಹಾಗೂ ಮೂಲಸೌಕರ್ಯ ವಿಚಾರದಲ್ಲಿ ರಸ್ತೆಗೆ ಇಳಿಯದ ಜನ ಇದೀಗ ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಈ ಬಾರಿ ಪ್ರತಿಭಟನೆಯು ಬೇರೆ ಬೇರೆ ಕಾರಣಕ್ಕೆ ವಿವಾದ ಸ್ವರೂಪ ಪಡೆದುಕೊಂಡಿದೆ.
ದೆಹಲಿಯಲ್ಲಿ ಸೋಮವಾರ ಇಂಡಿಯಾ ಗೇಟ್‌ನಲ್ಲಿ ವಾಯು ಮಾಲಿನ್ಯ ಹದಗೆಡುತ್ತಿರುವ ಬಗ್ಗೆ ನಡೆದ ಪ್ರತಿಭಟನೆ ಪೊಲೀಸರೊಂದಿಗೆ ಘರ್ಷಣೆ ಏರ್ಪಟ್ಟಿದ್ದು, ಕನಿಷ್ಠ 22 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ದೆಹಲಿ ಜನ ಬೀದಿಗೆ ಇಳಿದು ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟನಾಕಾರರು ಪೊಲೀಸ್ ಸಿಬ್ಬಂದಿಯನ್ನು ಅಡ್ಡಿಪಡಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಲಾಗಿದ್ದು, ಸಿ-ಹೆಕ್ಸಾಗನ್ (ದೆಹಲಿಯ ಇಂಡಿಯಾ ಗೇಟ್ ಸುತ್ತಮುತ್ತಲಿನ ಆರು ರಸ್ತೆಗಳ ಜಂಕ್ಷನ್) ವಾಹನ ಸಂಚಾರಕ್ಕೆ ಸಮಸ್ಯೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಪ್ರತಿಭಟನಾಕರರು ಹಾಗೂ ಪೊಲೀಸರ ನಡುವೆ ವಾಕ್ಸಮರ ನಡೆದಿದೆ. ಈ ಸಂದರ್ಭದಲ್ಲಿ ಗಾಯಗೊಂಡವರಲ್ಲಿ ಹಲವರನ್ನು ಚಿಕಿತ್ಸೆಗಾಗಿ ಆರ್‌ಎಂಎಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಸದ್ ಮಾರ್ಗ ಮತ್ತು ಕರ್ತವ್ಯ ಪಥ ಪೊಲೀಸ್ ಠಾಣೆಗಳಲ್ಲಿ ತಲಾ ಒಂದರಂತೆ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ಬಿಎನ್‌ಎಸ್‌ನ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದರಲ್ಲಿ ಮಹಿಳೆಯರಿಗೆ ಸಮಸ್ಯೆ ಕೊಡಲಾಗಿದೆ ಎಂದು ಉಲ್ಲೇಖಿಸಲಾಗಿದೆ ಎಂದು ದೂರಿನಲ್ಲಿ ದಾಖಲಾಗಿದೆ.
ಪೊಲೀಸ್ ಸಿಬ್ಬಂದಿಯ ಮೇಲೆ ಪೆಪ್ಪರ್ ಸ್ಪ್ರೇ
ಇನ್ನು ದೆಹಲಿಯಲ್ಲಿ ವಾಯುಮಾಲಿನ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನಾಕರರು ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಪೊಲೀಸರ ಮೇಲೆ ಪ್ರತಿಭಟನಾಕಾರರು ದೌರ್ಜನ್ಯ ಎಸಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಪ್ರತಿಭಟನೆ ಉಗ್ರ ಸ್ವರೂಪವನ್ನು ಪಡೆದುಕೊಂಡಿದ್ದು, ಕೆಲವು ಪ್ರತಿಭಟನಾಕಾರರು ನಮ್ಮ ಸಿಬ್ಬಂದಿಯ ಮೇಲೆ ಪೆಪ್ಪರ್ ಸ್ಪ್ರೇ ಬಳಸಿದ್ದಾರೆ. ಈ ರೀತಿ ನಡೆದಿರುವುದು ಇದೇ ಮೊದಲು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ರೀತಿ ಬಂಧಿತ ಪ್ರತಿಭಟನಾಕಾರರನ್ನು ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಎಂದು ಹೇಳಲಾಗಿದೆ.
ಇಂಡಿಯಾ ಗೇಟ್ ಬಳಿ ಪ್ರತಿಭಟನೆ ಮಾಡುವುದಕ್ಕೆ ಅವಕಾಶ ಇಲ್ಲ. ಜಂತರ್ ಮಂತರ್ ಪ್ರದೇಶದಲ್ಲಿ ಪೂರ್ವಾನುಮತಿಯೊಂದಿಗೆ ಪ್ರತಿಭಟನೆಗಳನ್ನು ಮಾಡುವುದಕ್ಕೆ ನಿರ್ದಿಷ್ಟ ಪ್ರದೇಶ ಇದೆ. ಭಾನುವಾರ, ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್‌ಗಳನ್ನು ಹಾರಿ ಸಿ-ಹೆಕ್ಸಾಗನ್ ಭಾಗದಲ್ಲಿ ವಾಹನ ಸಂಚಾರ ತಡೆದಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ಬಂದಿಯಲ್ಲಿ ಕುಳಿತಿದ್ದರು. ಅಲ್ಲದೇ ಇದರಿಂದ ಟ್ರಾಫಿಕ್ ಜಾಮ್ ಸಮಸ್ಯೆಯಲ್ಲಿ ಸಿಲುಕಿದ್ದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪೊಲೀಸರು ಇದನ್ನು ತಡೆದಾಗ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಕ್ಸಮರ ನಡೆದಿದೆ. ಅಲ್ಲದೇ ಈ ಸಂದರ್ಭದಲ್ಲಿ ಹಲವು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರನ್ನು ಹೊರಹೋಗುವಂತೆ ಕೇಳಿದಾಗ, ಅವರು ಅನುಚಿತವಾಗಿ ವರ್ತಿಸಿದ್ದು, ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಕೆಲವು ಪ್ರತಿಭಟನಾಕಾರರು ಪೆಪ್ಪರ್ ಸ್ಪ್ರೇ ಅನ್ನು ಸಹ ಪೊಲೀಸರ ಮೇಲೆ ಬಳಸಿದ್ದಾರೆ ಎಂದು ಹೇಳಲಾಗಿದೆ.
ಅಲ್ಲದೇ ನಕ್ಸಲ್ ನಾಯಕ ಮದ್ವಿ ಹಿದ್ಮಾ ಅವರನ್ನು ಬೆಂಬಲಿಸಿ ಕೂಗಲಾಗಿರುವ ಘೋಷಣೆಯೂ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಇದು ಕೇವಲ ದೆಹಲಿಯ ವಾಯುಮಾಲಿನ್ಯ ಸಮಸ್ಯೆಗೆ ಸಂಬಂಧಿಸಿದ ಸಮಸ್ಯೆ ಅಲ್ಲ ಬೇರೆ ಕಾರಣಗಳೂ ಸಹ ಇರುವ ಸಾಧ್ಯತೆ ಇದೆ ಎನ್ನುವ ವಿಚಾರ ಚರ್ಚೆಗೆ ಕಾರಣವಾಗಿದೆ.












Click it and Unblock the Notifications